– ಬಹುಮುಖಿ ಬಳಕೆಯ ಕೆರೆ ನಿರ್ಮಾಣದ ಕಥೆ
ಶಿವಮೊಗ್ಗ : ಕೊರೊನಾ ಸಂಕಷ್ಟದ ಸಮಯದಲ್ಲಿಯೂ ಕೂಡ ಈ ವಾರಿಯರ್ಸ್ ಗಳು ಜನ ಮೆಚ್ಚುವಂತಹ ಕೆಲಸ ಮಾಡಿ ತೋರಿಸಿದ್ದಾರೆ. ಕೊರೊನಾ ವಾರಿಯರ್ಸ್ ಗಳಾದ ಪೊಲೀಸರು ಸುಂದರವಾದ ಕೆರೆ ಪುನರ್ ನಿರ್ಮಾಣಕ್ಕೆ ಕೈ ಜೋಡಿಸಿ, ಎಲ್ಲರ ಮನೆ ಮಾತಾಗಿದ್ದಾರೆ. ಸ್ವಗ್ರಾಮ ಸಮಿತಿಯ ಸದಸ್ಯರೊಂದಿಗೆ ಕೈ ಜೋಡಿಸಿ ಒತ್ತುವಾರಿಯಾಗಿದ್ದ ಇಡೀ ಕೆರೆಯನ್ನು ಬಿಡಿಸಿಕೊಂಡು, ಕೆರೆಯಲ್ಲಿ ತುಂಬಿದ್ದ ಹೂಳು ತೆಗೆದು ಇದೀಗ ಜೀವ ಕಳೆ ನೀಡಿದ್ದಾರೆ. ಕೇವಲ 80 ಲಕ್ಷ ಲೀ. ನೀರು ತುಂಬುತ್ತಿದ್ದ ಈ ಕೆರೆಯಲ್ಲಿ ಇದೀಗ 5.5 ಕೋಟಿ ಲೀ. ನೀರು ತುಂಬುವಂತಾಗಿದೆ.
Advertisement
5.5 ಕೋಟಿ ಲೀ. ಸಂಗ್ರಹ ಸಾಮರ್ಥ್ಯ: ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹರಿದ್ರಾವತಿ ಗ್ರಾ.ಪಂ. ವ್ಯಾಪ್ತಿಯ ಬಾಣಿಗ ಗ್ರಾಮದ ಕೇಶವಪುರ ಗುಮ್ಮನಮಟ್ಟಿ ಕೆರೆ ಮಾದರಿಯಾಗಿದೆ. ಈ ಕೆರೆಗೆ ಇದೀಗ ಪೊಲೀಸ್ ಕೆರೆ ಅಂತಲೂ ಕರೆಯಲಾಗುತ್ತಿದೆ. ಈ ಮೊದಲು ಕೆರೆಯಲ್ಲಿ ಕೇವಲ 80 ಲಕ್ಷ ಲೀ. ಮಾತ್ರ ನೀರು ಶೇಖರಣೆಯಾಗುತ್ತಿತ್ತು. ಈ ಕೆರೆ ಸಂಪೂರ್ಣವಾಗಿ ಒತ್ತುವರಿಯಾಗಿ ಕೆರೆಯೇ ಇಲ್ಲವೇನೋ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಈ ಕೆರೆಯನ್ನು ಗಮನಿಸಿದ ಸ್ವಗ್ರಾಮ ಸಮಿತಿ ಸದಸ್ಯರು ಸಂಪೂರ್ಣವಾಗಿ ಹೂಳು ತುಂಬಿಕೊಂಡಿದ್ದ ಕೆರೆಯನ್ನು ಸ್ವಚ್ಛಗೊಳಿಸಿ, ಇದೀಗ ಜೀವ ಕಳೆ ನೀಡಿದ್ದಾರೆ. ಕೇಶವಪುರ ಸರ್ವೇ ನಂ. 38 ರಲ್ಲಿ ಇಡೀ ಕೆರೆಯನ್ನು ಪುನರ್ ನಿರ್ಮಾಣ ಮಾಡಿದ್ದು, ಅರ್ಧ ಎಕರೆ ಇದ್ದ ಕೆರೆ ಇದೀಗ ಎರಡು ಎಕರೆ ಮೂರು ಗುಂಟೆಯಾಗಿದ್ದು, ಕೇವಲ 80 ಲಕ್ಷ ಲೀ. ತುಂಬುತ್ತಿದ್ದ ನೀರು ಇದೀಗ ಸರಿಸುಮಾರು 5.5 ಕೋಟಿ ಲೀ. ಸಂಗ್ರಹ ಸಾಮರ್ಥ್ಯದಲ್ಲಿ ಪುನರ್ ನಿರ್ಮಾಣಗೊಂಡಿದೆ.
Advertisement
Advertisement
ಕೇವಲ 4.82 ಲಕ್ಷ ರೂ: ಇದೇ ರೀತಿ ಪುನರ್ ನಿರ್ಮಾಣವನ್ನು ಸರ್ಕಾರಿ ಅಧಿಕಾರಿಗಳೇನಾದರೂ ಮಾಡಿದ್ದರೆ, ಸರ್ಕಾರದ ಎಸ್.ಆರ್. ರೇಟ್ ಅನ್ವಯ, 24 ಲಕ್ಷ ರೂ. ಅಂದಾಜು ಮೊತ್ತದಲ್ಲಾಗುತ್ತದೆ. ಆದರೆ ಸ್ಥಳೀಯ ಗ್ರಾಮಸ್ಥರು, ದಾನಿಗಳ ಸಹಕಾರದಲ್ಲಿ ಈ ಕೆರೆ ಪುನರ್ ನಿರ್ಮಾಣಕ್ಕೆ ಕೇವಲ 4.82 ಲಕ್ಷ ರೂ. ಮಾತ್ರ ಆಗಿದೆ. ಇದು ಆಶ್ಚರ್ಯ ಕೂಡ. ಸರ್ಕಾರ ಎಷ್ಟು ಹಣ ಪೋಲು ಮಾಡುತ್ತಿದೆ ಎಂಬುದು ಇಲ್ಲಿ ತಿಳಿಯುತ್ತದೆ. ಅಷ್ಟಕ್ಕೂ ಈ ಕೆರೆಯ ಪುನರ್ ನಿರ್ಮಾಣದ ಸಂಪೂರ್ಣ ಜವಬ್ದಾರಿ ಹೊತ್ತಿದ್ದು ಹೊಸನಗರ ಪೊಲೀಸ್ ಠಾಣೆಯ ಪೊಲೀಸರು. ಕೊರೊನಾ ವಾರಿಯರ್ಸ್ ಗಳು ತಮ್ಮ ಸಂಕಷ್ಟದ ಸಮಯದಲ್ಲೂ ಗ್ರಾಮದ ಜನರ ಒಳಿತಿಗಾಗಿ ಈ ಕೆರೆ ಪುನರ್ ನಿರ್ಮಾಣಕ್ಕೆ ಕೈ ಜೋಡಿಸಿದ್ದು, ಇವರ ಸಹಭಾಗಿತ್ವದಲ್ಲಿ ಇದೀಗ ಈ ಕೆರೆ ಸಂಪೂರ್ಣವಾಗಿ ಜೀವ ಕಳೆ ಪಡೆದು ನಳನಳಿಸುತ್ತಿದೆ.
Advertisement
ಬಹುಮುಖಿ ಬಳಕೆಯ ಕೆರೆ: ಕಳೆದ ಕೆಲವೇ ತಿಂಗಳುಗಳ ಹಿಂದೆಯಷ್ಟೇ ಈ ಕೆರೆ ಸಾಕಾರದ ಕನಸು ಕಂಡಿದ್ದ ಇಲ್ಲಿನ ಗ್ರಾಮಸ್ಥರು, ದಾನಿಗಳ ಸಹಕಾರದಿಂದ, ಸ್ವಗ್ರಾಮ ಮತ್ತು ಪೊಲೀಸರ ಸಹಕಾರದಿಂದ ನಿರ್ಮಾಣ ಮಾಡಿ ಸೈ ಎನಿಸಿಕೊಂಡಿದ್ದಾರೆ. ಸರ್ಕಾರದಿಂದ ಯಾವುದೇ ಧನ ಸಹಾಯವಿಲ್ಲದೆ ನಿರ್ಮಾಣ ಮಾಡಿರುವುದು ಹೆಮ್ಮೆಯ ವಿಚಾರವಾಗಿದೆ. ಅಷ್ಟೇ ಅಲ್ಲದೇ ಈ ಕೆರೆಯಿಂದ ಸುಮಾರು 100 ಎಕರೆ ಕೃಷಿ ಭೂಮಿ, 40 ತೆರೆದ ಬಾವಿ 20 ಕ್ಕಿಂತ ಹೆಚ್ಚಿನ ಕೊಳವೆ ಬಾವಿ ಹಾಗೂ ಸ್ಥಳೀಯ ಅಂತರ್ಜಲ ಹೆಚ್ಚಳಕ್ಕೆ ಮಹತ್ವದ ಕೊಡುಗೆ ಕೊಟ್ಟಂತಾಗಿದೆ. ಜೊತೆಗೆ ಕೆರೆಗೆ ಹೊಂದಿಕೊಂಡಿರುವ ದೇವರ ಕಾಡಿನಲ್ಲಿರುವ ಪ್ರಾಣಿ ಪಕ್ಷಿಗಳಿಗೂ ಹೆಚ್ಚಿನ ಅನುಕೂಲವಾಗಿದೆ.
ಈ ಕೆರೆಯನ್ನು ನೀರಿನ ಸಂಗ್ರಹದ ಜೊತೆಗೆ, ಸ್ಥಳೀಯ ಕೆರೆ ಸಮಿತಿ ಮೂಲಕ ಆರ್ಥಿಕ ಅಭಿವೃದ್ಧಿಗೂ, ಅನುಕೂಲವಾಗುವಂತೆ, ನಿರ್ಮಾಣ ಮಾಡಲಾಗಿದೆ. ಮೀನು ಸಾಕಾಣಿಕೆ, ಸ್ಥಳೀಯ ಮಕ್ಕಳೂ ಸೇರಿದಂತೆ, ಈಜು ಕಲಿಕೆಗೆ ಅಗತ್ಯವಾದ ವ್ಯವಸ್ಥೆ ಮಾಡಲಾಗಿದೆ. ಎನ್.ಆರ್.ಐ.ಜಿ. ನಲ್ಲಿ ಕೆರೆಗೆ ಹೊಂದಿಕೊಂಡಿರುವ ಅರಣ್ಯ ಸೇರಿಸಿಕೊಂಡು, ಕೆರೆ ದಂಡೆ ಸುತ್ತಲೂ ಪಾರ್ಕ್, ಹಣ್ಣಿನ ಗಿಡ ನೆಡುವ ಕಾಮಗಾರಿ ಕೂಡ ಆರಂಭಿಸಲಾಗಿದ್ದು, ಕೃಷಿ ಭೂಮಿಗಳಿಗೆ ಅನುಕೂಲವಾಗಲು ಸಾವಿರ ಮೀಟರ್ ಚಾನಲ್ ನಿರ್ಮಾಣ ಕೂಡ ನಡೆಯುತ್ತಿದೆ. ಇದೆಲ್ಲದರ ಜೊತೆಗೆ ಮನರಂಜನೆಗಾಗಿಯೂ ಈ ಕೆರೆ ಬಳಸಿಕೊಳ್ಳಲಾಗುತ್ತಿದ್ದು, ಸ್ಥಳೀಯ ಸಂಘ ಸಂಸ್ಥೆ, ಉದ್ಯಮಿಗಳ ಸಹಯೋಗದಲ್ಲಿ ಕೆರೆಯ ನಡುವೆ ರಂಗ ವೇದಿಕೆಯನ್ನೂ ಕೂಡ ನಿರ್ಮಾಣ ಮಾಡಲಾಗುತ್ತಿದೆ.
ಒಟ್ಟಿನಲ್ಲಿ ಒಂದು ಕೆರೆ ಹೇಗಿರಬೇಕು ಎಂದು ಯೋಚಿಸುವವರಿಗೆ ಹೊಸನಗರದ ಈ ಪೊಲೀಸ್ ಕೆರೆ ಮಾದರಿಯಾಗಿದೆ. ಗ್ರಾಮದ ನೀರಿನ ದಾಹ ತಣಿಸುವ ಮೂಲಕ ಅಂತರ್ಜಲ ಹೆಚ್ಚಳಕ್ಕೆ ಕೆರೆ ಬಹುದೊಡ್ಡ ಕೊಡುಗೆ ನೀಡುವುದರ ಜೊತೆಗೆ ಬಹುಮುಖಿ ಬಳಕೆಯ ಆಲೋಚನೆಯನ್ನು ಹೊಂದಿದೆ. ಈ ಕೊರೊನ ಸಂಕಷ್ಟದ ನಡುವೆಯೂ ಸ್ಥಳೀಯರ ಬಹು ದೊಡ್ಡ ಕೊಡುಗೆ ಇದಾಗಿದ್ದು, ಪೊಲೀಸ್ ಇಲಾಖೆಯ ಸಹಕಾರವೂ ಮರೆಯುವಂತಿಲ್ಲ.