ಉಡುಪಿ: ಜಿಲ್ಲೆಯಾಗಿ ಬರೋಬ್ಬರಿ 23 ವರ್ಷ ಕಳೆದಿದ್ದು, ಈಗ ಜಿಲ್ಲಾಸ್ಪತ್ರೆಗೆ ಸರ್ಕಾರ ಅನುಮೋದಿಸಿದೆ. ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಕನ್ನಡ ರಾಜ್ಯೋತ್ಸವ ಸಂದರ್ಭ ಇದನ್ನು ಘೋಷಣೆ ಮಾಡಿದ್ದಾರೆ. ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ.
65ನೇ ಕನ್ನಡ ರಾಜ್ಯೋತ್ಸವ ಉಡುಪಿ ಜಿಲ್ಲೆಯಲ್ಲಿ ಸರಳವಾಗಿ ನಡೆಯಿತು. ಜಿಲ್ಲಾಧಿಕಾರಿ ಜಿ ಜಗದೀಶ್ ರಾಷ್ಟ್ರ ಧ್ವಜಾರೋಹಣ ಮಾಡಿ, ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸಿದರು. ಕನ್ನಡ ರಾಜ್ಯೋತ್ಸವ ಸಂದರ್ಭ ವಿವಿಧ ತಂಡಗಳಿಂದ ಪಥಸಂಚಲನ ಮತ್ತು ಗೌರವ ವಂದನೆ ಸಲ್ಲಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 36 ಮಂದಿ ಸಾಧಕರಿಗೆ ನಾಲ್ಕು ಸಂಘ-ಸಂಸ್ಥೆಗಳಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಮತ್ತು ಸನ್ಮಾನ ಈ ಸಂದರ್ಭದಲ್ಲಿ ನಡೆಯಿತು.
Advertisement
Advertisement
ಪಬ್ಲಿಕ್ ಹೀರೋ ಯೋಗ ಪಟು ತನುಶ್ರೀ ಪಿತ್ರೋಡಿಗೆ ಈ ಬಾರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯ್ತು. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಗೈರು ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರೇ ರಾಜ್ಯೋತ್ಸವದ ಸಂದೇಶವನ್ನು ನೀಡಿದರು.
Advertisement
ಉಡುಪಿ ಜಿಲ್ಲೆ ಘೋಷಣೆಯಾಗಿ 23 ವರ್ಷ ಕಳೆದಿದ್ದು, ಈವರೆಗೆ ತಾಲೂಕು ಆಸ್ಪತ್ರೆ ಜಿಲ್ಲಾಸ್ಪತ್ರೆ ಯಾಗಿ ಕಾರ್ಯನಿರ್ವಹಿಸುತ್ತಿತ್ತು. ಮುಂದಿನ ಒಂದು ವರ್ಷದಲ್ಲಿ 250 ಬೆಡ್ ಗಳ ನೂತನ ಕಟ್ಟಡ ಜೊತೆ ಸುಸಜ್ಜಿತ ಜಿಲ್ಲಾಸ್ಪತ್ರೆ ಪೂರ್ಣಗೊಳ್ಳುತ್ತದೆ ಎಂದು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಭರವಸೆ ನೀಡಿದರು. ಬೈಂದೂರು ತಾಲೂಕಿನಲ್ಲಿ ಪಡುವರಿ, ಯಡ್ತರೆ, ಬೈಂದೂರು ಗ್ರಾಮಗಳನ್ನು ಒಳಗೊಂಡಂತೆ ಪಟ್ಟಣ ಪಂಚಾಯತ್ ರಚನೆಯಾಗುತ್ತದೆ. ಜಿಲ್ಲೆಯ ಪಡುಬಿದ್ರಿ ಎಂಡ್ ಪಾಯಿಂಟ್ ಬೀಚ್ ಗೆ ಅಂತಾರಾಷ್ಟ್ರೀಯ ಮಾನ್ಯತೆ ಯಾದ ಬ್ಲೂ ಫ್ಲಾಗ್ ಗೌರವ ಸಿಕ್ಕಿದೆ. ಜಿಲ್ಲೆಯ ಇತರೆ ಬೀಚ್ ಗಳಿಗೂ ಅಂತಾರಾಷ್ಟ್ರೀಯ ಮಾನ್ಯತೆ ಸಿಗಲು ಜಿಲ್ಲಾಡಳಿತ ಪ್ರಯತ್ನ ನಡೆಸುವುದಾಗಿ ಹೇಳಿದರು.
Advertisement
ಉಡುಪಿ ಶಾಸಕ ರಘುಪತಿ ಭಟ್ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ್ ಬಾಬು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಜಿಲ್ಲಾ ಪಂಚಾಯತ್ ಸಿಇಓ ನವೀನ್ ಭಟ್ ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ಅವರ ಸುರೇಂದ್ರ ಅಡಿಗ ನಗರಸಭೆ ನೂತನ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಕೊಳ ಈ ಸಂದರ್ಭ ಉಪಸ್ಥಿತರಿದ್ದರು.