ಹುಬ್ಬಳ್ಳಿ: ಬೃಹತ್ ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣದ ಬಗ್ಗೆ ನಾಳೆ ಹೈಕಮಾಂಡ್ ಜೊತೆ ಚರ್ಚೆ ನಡೆಸುತ್ತೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಹುಬ್ಬಳ್ಳಿಯಿಂದ ದೆಹಲಿಗೆ ತೆರಳುವ ಮುನ್ನ ಮಾತನಾಡಿದ ಅವರು, ಈ ಬಗ್ಗೆ ಮುಖಂಡರ ಜೊತೆ ಚರ್ಚೆ ಮಾಡುತ್ತೇನೆ. ನಮ್ಮದು ಶಿಸ್ತಿನ ಪಕ್ಷ, ಈ ಪ್ರಕರಣದಿಂದ ಪಕ್ಷಕ್ಕೆ ಮುಜಗರವಾಗಿರುವುದು ಸತ್ಯ. ಈ ಕುರಿತು ಸೂಕ್ತ ತನಿಖೆ ಸಹ ಆಗಬೇಕಿದೆ ಎಂದರು.
ನಾಯಕರಾದವರು ಸಾರ್ವಜನಿಕ ಜೀವನದಲ್ಲಿ ಶುದ್ಧವಾಗಿರಬೇಕು. ಭ್ರಷ್ಠಾಚಾರ ವಿಚಾರವಾಗಲಿ, ವ್ಯಯಕ್ತಿಕ ವಿಚಾರದಲ್ಲಿ ಶುದ್ಧಹಸ್ತರಾಗಿರಬೇಕು. ರಮೇಶ್ ಜಾರಕಿಹೊಳಿ ರಾಜೀನಾಮೆ ಪಡೆಯುವ ಮುನ್ನ ಸತ್ಯಾಸತ್ಯತೆಯ ಬಗ್ಗೆ ತನಿಖೆಯಾಗಬೇಕಿದೆ. ಈ ಕುರಿತು ನಾನು ಪಕ್ಷದ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿ ಸಿಎಂ ಬಿ.ಎಸ್.ಯಡಿಯೂರಪ್ಪ ಜೊತೆಯೂ ಮಾತನಾಡುತ್ತೇನೆ ಎಂದರು.
ಒಂದು ವೇಳೆ ಜಾರಕಿಹೊಳಿ ತಪ್ಪಿತಸ್ಥರೆಂದು ರುಜುವಾತು ಆದರೆ ಪಕ್ಷ ಖಂಡಿತವಾಗಿ ಶಿಸ್ತು ಕ್ರಮ ಕೈಗೊಳ್ಳಲಿದೆ. ಬಿಜೆಪಿ ಇತಂಹದ್ದನ್ನು ಸಹಿಸಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.