ಮಂಗಳೂರು: ನವರಾತ್ರಿ ಅಥವಾ ದಸರಾ ಬಂತೆಂದರೆ ಸಾಕು, ನಾನಾ ಬಗೆಯ ಸಂಭ್ರಮಗಳು ಕಳೆಗಟ್ಟುತ್ತವೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ವಿಶೇಷ ಧಾರ್ಮಿಕ ಹಬ್ಬಗಳ ಸಂದರ್ಭಗಳಲ್ಲಿ ವಿವಿಧ ಬಗೆಯ ವೇಷಗಳಲ್ಲಿ ಮಿಂಚುವ ಟ್ರೆಂಡ್ನ್ನು ಕೂಡ ನಾವು ನೋಡುತ್ತಿದ್ದೇವೆ. ಇದೀಗ ಮಂಗಳೂರಿನಲ್ಲಿ ನವರಾತ್ರಿ ಸಂದರ್ಭದಲ್ಲಿ ಇಂತಹುದೇ ಒಂದು ಪ್ರಯತ್ನ ನಡೆದಿದೆ.
ನವರಾತ್ರಿಗೆ ನವವಿಧ ವಸ್ತ್ರ ವೈವಿಧ್ಯ, ಪೂಜೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ ನವದುರ್ಗೆಯ ರೂಪದಲ್ಲೇ ದೇವತೆ ಪ್ರತ್ಯಕ್ಷವಾದರೆ ಅದರ ಸೊಬಗು ಹೇಗಿರಬಹುದು? ಇಂತಹ ಒಂದು ಪರಿಕಲ್ಪನೆ ಮಂಗಳೂರಿನಲ್ಲಿ ಸಾಕಾರಗೊಂಡಿದೆ. ಇದಕ್ಕೆ ಸಾಕಾರ ನೀಡಿರುವುದು ಬಾಲಕಿ ವಿಷ್ಣುಪಿಯಾ ಮತ್ತು ಛಾಯಾಗ್ರಾಹಕ ಪುನೀಕ್ ಶೆಟ್ಟಿ.
Advertisement
Advertisement
ವಿಷ್ಣುಪ್ರಿಯಾ ಎನ್ನುವ ಹೆಸರು ಕೇಳಿದೊಡನೆ ಆ ಮಗು ಭಗವಾನ್ ವಿಷ್ಣು ಆರಾಧಕರ ಕುಟುಂಬದಿಂದ ಬಂದಿರಬೇಕು ಎನ್ನುವ ಕಲ್ಪನೆ ಬರಬಹುದು. ಆದರೆ ಈ ಮಗುವಿಗೆ ವಿಷ್ಣುಪಿಯ ಎನ್ನುವ ಹೆಸರು ಬರಲು ಕಾರಣ ಕನ್ನಡ ಚಿತ್ರರಂಗದ ಸಾಹಸ ಸಿಂಹ ವಿಷ್ಣುವರ್ಧನ್ ಎಂದರೆ ನೀವು ನಂಬಲೇಬೇಕು.
Advertisement
Advertisement
ವಿಷ್ಣುವರ್ಧನ್ ಅವರ ಯಜಮಾನ ಸಿನಿಮಾ ನೋಡಿ ಅದೇ ಹೆಸರಿನ “ಯಜಮಾನ ಉಪ್ಪಿನಕಾಯಿ” ಸಂಸ್ಥೆ ಮಾಡಿ ಹೆಸರಾದ ಬಂಟ್ವಾಳದ ವರದರಾಯ ಪೈಯವರ ಕತೆ ನಿಮಗೆ ತಿಳಿದಿರಬಹುದು. ಅವರ ಪುತ್ರಿಯೇ ಈ ವಿಷ್ಣುಪ್ರಿಯಾ. ಮೂಡುಬಿದ್ರೆಯ ರೋಟರಿ ಇಂಗ್ಲಿಷ್ ಮೀಡಿಯಂ ಸೆಂಟ್ರಲ್ ಸ್ಕೂಲ್ನಲ್ಲಿ ನಾಲ್ಕನೇ ತರಗತಿ ವಿದ್ಯಾರ್ಥಿನಿಯಗಿರುವ ಈಕೆ ಕೊಯಂಬತ್ತೂರಿನಲ್ಲಿ ನಡೆದ ಸ್ಪಲ್ ‘ಬಿ’ ಎನ್ನುವ ರಾಷ್ಟ್ರ ಮಟ್ಟದ ಮಕ್ಕಳ ಸ್ಪರ್ಧೆಯಲ್ಲಿ 47ನೇ ರ್ಯಾಂಕ್ ಪಡೆದಿದ್ದಾಳೆ. ವೆಂಕಟಕೃಷ್ಣ ಭಟ್ ಅವರ ಬಳಿ ಕರ್ನಾಟಕ ಸಂಗೀತ ಮತ್ತು ಬಾಲಕೃಷ್ಣ ಮಂಜೇಶ್ವರ ಅವರಿಂದ ಭರತನಾಟ್ಯವನ್ನು ಅಭ್ಯಾಸ ಮಾಡುತ್ತಿರುವ ವಿಷ್ಣುಪ್ರಿಯಾ ತಂದೆಯ ಬಳಿಯಲ್ಲೇ ಇಲೆಕ್ಟ್ರಿಕಲ್ ಆರ್ಗನ್ ಕಲಿಯುತ್ತಿದ್ದಾಳೆ.
ಇಂಥ ಮುದ್ದು ಕಂದನನ್ನು ಇರಿಸಿಕೊಂಡು ನವದುರ್ಗೆಯರ ರೂಪ ನೀಡಿ ನೋಡುವ ಆಕಾಂಕ್ಷೆ ಮಾತಾಪಿತರಲ್ಲಿ ಮೂಡಿದೆ. ಶ್ರದ್ದಾ ಅಶ್ವಿನ್ ಪ್ರಭು ಅವರು ನಡೆಸಿದ ನವದುರ್ಗೆಯರ ಮೇಕಪ್ಗೆ ಸ್ಥಿರಚಿತ್ರ ರೂಪ ನೀಡಲು ಮಂಗಳೂರಿನ ಖ್ಯಾತ ಛಾಯಾಗ್ರಾಹಕ ಪುನೀಕ್ ಶೆಟ್ಟಿ ಕೈ ಜೋಡಿಸಿದ್ದಾರೆ. ಸಿನಿಮಾ ನಿರ್ದೇಶಕರು ಕೂಡ ಆಗಿರುವ ಪುನೀಕ್ ಶೆಟ್ಟಿ, ಎರಡೇ ದಿನದಲ್ಲಿ ನವದುರ್ಗೆಯರ ರೂಪದಲ್ಲಿ ಮಗುವನ್ನು ಫೋಟೋಗಳಲ್ಲಿ ಚಿತ್ರಿಸಿದ್ದಾರೆ.