– ಒಬ್ಬ ವಿದ್ಯಾರ್ಥಿನಿಯಿಂದ 26 ಜನರಿಗೆ ಸೋಂಕು?
ಚಿಕ್ಕಮಗಳೂರು: ನಗರದ ಬಸವನಹಳ್ಳಿ ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜಿನ ಓರ್ವ ವಿದ್ಯಾರ್ಥಿನಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಇಂದು ಅದೇ ಶಾಲೆಯ 26 ವಿದ್ಯಾರ್ಥಿನಿಯರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.
Advertisement
ಈ ಮಧ್ಯೆ ಗುರುವಾರ ಹಾಗೂ ಶುಕ್ರವಾರ ಎರಡೇ ದಿನಗಳಲ್ಲಿ ಜಿಲ್ಲೆಯಲ್ಲಿ 98 ಪ್ರಕರಣಗಳು ಪತ್ತೆಯಾಗಿದ್ದು, ಕೊರೊನಾ ಎರಡನೇ ಅಲೆಗೆ ಕಾಫಿನಾಡು ತಲ್ಲಣಗೊಂಡಿದೆ. ಎರಡು ದಿನದ ಹಿಂದಷ್ಟೆ ನಗರದಲ್ಲಿ ದಂಪತಿ ಕೂಡ ಕೊರೊನಾಗೆ ಬಲಿಯಾಗಿದ್ದರು. ಅಂದೇ ನಗರದ ಬಸವನಹಳ್ಳಿ ಸರ್ಕಾರಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜಿನ 400ಕ್ಕೂ ಅಧಿಕ ಮಂದಿಗೆ ಕೊರೊನಾ ಟೆಸ್ಟ್ ಮಾಡಲಾಗಿತ್ತು.
Advertisement
Advertisement
ಇದೀಗ ಕೆಲವರ ವರದಿ ಬಂದಿದ್ದು, ಅದೇ ಶಾಲೆಯ 26 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಆ ವಿದ್ಯಾರ್ಥಿನಿಯಿಂದಲೇ ಸೋಂಕು ತಗುಲಿದೆ ಎಂಬ ಅನುಮಾನ ಮೂಡಿದೆ. ಈ ಮಧ್ಯೆ ಶೃಂಗೇರಿಯ ವಸತಿ ಶಾಲೆಯಲ್ಲೂ ಮೂವರು ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ. ಜಿಲ್ಲೆಯಲ್ಲಿ ಇಂದು ಒಟ್ಟು 47 ಪ್ರಕರಣಗಳು ಪತ್ತೆಯಾಗಿವೆ. ಗುರುವಾರ 51 ಪ್ರಕರಣಗಳು ಪತ್ತೆಯಾಗಿದ್ದವು. ಸದ್ಯ ಕೆಲ ವಿದ್ಯಾರ್ಥಿನಿಯರ ವರದಿಯಷ್ಟೇ ಬಂದಿದೆ. ಇನ್ನೂ ಹಲವರ ವರದಿ ಬರುವುದು ಬಾಕಿ ಇದೆ. ಆದ್ದರಿಂದ ಉಳಿದ ವಿದ್ಯಾರ್ಥಿನಿಯರಲ್ಲೂ ಆತಂಕ ಮನೆ ಮಾಡಿದೆ.