ಚಾಮರಾಜನಗರ: ಸಿಎಂ ಯಡಿಯೂರಪ್ಪ ಮೂಢನಂಬಿಕೆಗೆ ಕಟ್ಟುಬಿದ್ದಿದ್ದಾರಾ? ಹೌದು ಹೀಗೊಂದು ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಕಾರಣ ಅಧಿಕಾರ ವಹಿಸಿಕೊಂಡು 16 ತಿಂಗಳು ಕಳೆದರು ಸಿಎಂ ಚಾಮರಾಜನಗರದತ್ತ ತಲೆ ಹಾಕಿಲ್ಲ. ಆದರೆ ಇದೇ ತಿಂಗಳು 25ರಂದು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗಾಗಿ ಜಿಲ್ಲೆಯ ಮಹದೇಶ್ವರ ಬೆಟ್ಟಕ್ಕೆ ಆಗಮಿಸುತ್ತಿರುವ ಯಡಿಯೂರಪ್ಪ ಚಾಮರಾಜನಗರಕ್ಕೆ ಭೇಟಿ ನೀಡುತ್ತಿಲ್ಲ ಎಂಬುದು ಚರ್ಚೆಗೆ ಗ್ರಾಸವಾಗಿದೆ.
2008ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಸುಮಾರು ಮೂರು ವರ್ಷ ಕಾಲ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಒಮ್ಮೆಯೂ ಚಾಮರಾಜನಗರಕ್ಕೆ ಭೇಟಿ ನೀಡಿರಲಿಲ್ಲ. ಇದೀಗ ಅದೇ ಪರಿಪಾಠ ಮುಂದುವರಿಸಿದ್ದು, ಚಾಮರಾಜನಗರ ಪಟ್ಟಣಕ್ಕೆ ಬಾರದೆ ಇದೇ ತಿಂಗಳು 25ರಂದು ಜಿಲ್ಲೆಯ ಮಹದೇಶ್ವರ ಬೆಟ್ಟಕ್ಕೆ ಬಂದು ಹೋಗುತ್ತಿದ್ದಾರೆ. ಚಾಮರಾಜನಗರಕ್ಕೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳಬೇಕಾಗುತ್ತೆ ಎಂಬ ಮೂಢನಂಬಿಕೆಗೆ ಯಡಿಯೂರಪ್ಪ ಜೋತುಬಿದ್ದಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
Advertisement
Advertisement
ದೇವರಾಜ ಅರಸು, ಗುಂಡೂರಾವ್, ರಾಮಕೃಷ್ಣ ಹೆಗಡೆ, ಎಸ್.ಆರ್ ಬೊಮ್ಮಾಯಿ ಹಾಗೂ ವೀರೇಂದ್ರ ಪಾಟೀಲ್ ಮುಖ್ಯಮಂತ್ರಿ ಆಗಿದ್ದ ವೇಳೆ ಚಾಮರಾಜನಗರಕ್ಕೆ ಬಂದಿದ್ದರು. ಆದರೆ ಇಲ್ಲಿಂದ ಹೋದ ಮೇಲೆ ಆರು ತಿಂಗಳ ಒಳಗೆ ಬೇರೆ ಬೇರೆ ಕಾರಣಗಳಿಂದ ಅಧಿಕಾರ ಕಳೆದುಕೊಂಡರು. ಹೀಗಾಗಿ ಮುಖ್ಯಮಂತ್ರಿಗಳಾದವರು ಚಾಮರಾಜನಗರ ಬಂದರೆ ಆರು ತಿಂಗಳ ಒಳಗೆ ಅವರ ಅಧಿಕಾರ ಹೋಗುತ್ತೆ ಎಂಬ ಮೂಢನಂಬಿಕೆ ಹುಟ್ಟಿಕೊಂಡಿತು. ಎಸ್. ಬಂಗಾರಪ್ಪ, ವೀರಪ್ಪಮೊಯ್ಲಿ, ಹೆಚ್.ಡಿ. ದೇವೇಗೌಡ, ಜೆ.ಎಚ್. ಪಟೇಲ್, ಎಸ್. ಎಂ. ಕೃಷ್ಣ, ಧರಂಸಿಂಗ್ ಚಾಮರಾಜನಗರದತ್ತ ಸುಳಿಯಲಿಲ್ಲ.
Advertisement
Advertisement
ಸುಮಾರು 16 ವರ್ಷಗಳ ನಂತರ ಹೆಚ್.ಡಿ ಕುಮಾರಸ್ವಾಮಿ ಮೂಢನಂಬಿಕೆ ಧಿಕ್ಕರಿಸಿ 2007ರ ಮೇ ತಿಂಗಳಲ್ಲಿ ಚಾಮರಾಜನಗರಕ್ಕೆ ಭೇಟಿ ನೀಡಿದ್ದರು. ಆದರೆ ಕುಮಾರಸ್ವಾಮಿ ಸಹ ಕಾಕತಾಳಿಯವೆಂಬಂತೆ ಪದಚ್ಯುತಿಗೊಂಡರು. ಇದರಿಂದ ಚಾಮರಾಜನಗರಕ್ಕೆ ಮತ್ತೆ ಅದೇ ಕಳಂಕ ಅಂಟಿಕೊಂಡಿತು. ನಂತರದಲ್ಲಿ ಸಿಎಂ ಆದ ಯಡಿಯೂರಪ್ಪ ನಗರಕ್ಕೆ ಬರಲಿಲ್ಲ. ಸದಾನಂದಗೌಡರು ಚಾಮರಾಜನಗಕ್ಕೆ ಭೇಟಿ ನೀಡಲು ಹಿಂಜರಿದರು. ಆದರೆ ಜಗದೀಶ್ ಶೆಟ್ಟರ್ ತಮ್ಮ ಅಧಿಕಾರದ ಕೊನೆ ದಿನಗಳಲ್ಲಿ ಚಾಮರಾಜನಗರಕ್ಕೆ ಆಗಮಿಸಿದ್ದರು. ನಂತರ ಸಿಎಂ ಆದ ಸಿದ್ದರಾಮಯ್ಯ 10ಕ್ಕೂ ಹೆಚ್ಚು ಬಾರಿ ಭೇಟಿ ನೀಡುವ ಮೂಲಕ ಮೂಢನಂಬಿಕೆಗೆ ಇತಿಶ್ರೀ ಹಾಡಿದರು.
ಸಿಎಂ ಭೇಟಿ ಕುರಿತು ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಮಾತನಾಡಿ, ಕಳೆದ 58 ವಾರದಲ್ಲಿ 49 ಬಾರಿ ನಾನು ಜಿಲ್ಲೆಗೆ ಭೇಟಿ ಕೊಟ್ಟಿದ್ದೇನೆ. ನನಗೆ ಜಿಲ್ಲೆಗೆ ಆಗಮಿಸಿದರೆ ಅಧಿಕಾರ ಹೋಗುತ್ತೆ ಎಂಬ ಭಯವಿಲ್ಲ. ಅದೇ ರೀತಿ ಯಡಿಯೂರಪ್ಪ ಕೂಡ ಚಾಮರಾಜನಗರಕ್ಕೆ ಭೇಟಿ ಕೊಡುತ್ತಾರೆ. ಅವರಿಗೆ ಅಧಿಕಾರ ಹೋಗುವ ಭಯವಿಲ್ಲ, ಶೀಘ್ರದಲ್ಲೇ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಾರೆ ಎಂಬ ಹಾರಿಕೆ ಉತ್ತರ ಕೊಡುತ್ತಿದ್ದಾರೆ.
ಈಗ ಯಡಿಯೂರಪ್ಪ ಮತ್ತೆ ಅದೇ ಮೂಢನಂಬಿಕೆಗೆ ಜೋತು ಬಿದ್ದಿದ್ದು ಚಾಮರಾಜನಗರಕ್ಕೆ ಭೇಟಿ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಮುಖ್ಯಮಂತ್ರಿ ಆಗಿದ್ದವರು ಅಧಿಕಾರ ಕಳೆದುಕೊಂಡ ಇದುವರೆಗಿನ ಘಟನೆಗಳು ಕೇವಲ ಕಾಕತಾಳೀಯ ಅಷ್ಟೇ. ರಾಜಕೀಯ ಕಾರಣಗಳಿಗೆ ಅಧಿಕಾರ ಕಳೆದುಕೊಂಡರೆ ಚಾಮರಾಜನಗರಕ್ಕೆ ಆ ಕಳಂಕವನ್ನು ಅಂಟಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.