– ರಾತ್ರಿ ತಡವಾಗಿದ್ರೂ ಸ್ನೇಹಿತರೊಂದಿಗೆ ಚಾಟಿಂಗ್
– ಕಾಡಿನಲ್ಲಿ ಆರೋಪಿ ಮಗ ಅರೆಸ್ಟ್
ಪಾಟ್ನಾ: ಯುವಕನೊಬ್ಬ ಸ್ನೇಹಿತರೊಂದಿಗೆ ಚಾಟಿಂಗ್ ಮಾಡುತ್ತಿದ್ದಾಗ ಹಲವಾರು ಬಾರಿ ಊಟಕ್ಕೆ ಕರೆದಿದ್ದಕ್ಕೆ ಅಮ್ಮನ ಮೇಲೆ ಗುಂಡು ಹಾರಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಪಾಟ್ನಾದ ಮರಂಚಿ ಪೊಲೀಸ್ ಠಾಣಾ ವ್ಯಾಪ್ತಿಯ ಸೀತಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆರೊಪಿಯನ್ನು ಅಂಗಾದ್ ಯಾದವ್ (20) ಎಂದು ಗುರುತಿಸಲಾಗಿದೆ. ಇದೀಗ ಆರೋಪಿಯನ್ನು ಗನ್ ಸಮೇತ ಪೊಲೀಸ್ ಬಂಧಿಸಿದ್ದಾರೆ.
Advertisement
Advertisement
ಏನಿದು ಪ್ರಕರಣ?
ಆರೋಪಿ ಯಾದವ್ ನಿವಾಸದ ಹೊರಗೆ ತನ್ನ ಕೆಲ ಸ್ನೇಹಿತರೊಂದಿಗೆ ನಿರಂತರವಾಗಿ ಮೊಬೈಲಿನಲ್ಲಿ ಚಾಟಿಂಗ್ ಮಾಡುತ್ತಿದ್ದ. ರಾತ್ರಿ ತಡವಾಗಿದ್ದರಿಂದ ಯಾದವ್ ತಾಯಿ ಮಂಜು ದೇವಿ ಒಳಗೆ ಬಂದು ಊಟ ಮಾಡುವಂತೆ ಹಲವಾರು ಬಾರಿ ಕರೆದಿದ್ದಾರೆ. ಆದರೆ ಆರೋಪಿ ಯಾದವ್ ಪ್ರತಿ ಬಾರಿಯೂ ತಾಯಿಯ ಮಾತನ್ನು ನಿರ್ಲಕ್ಷಿಸಿದನು. ಕೊನೆಗೆ ಮಂಜು ದೇವಿ ತನ್ನ ಮಗನ ಬಳಿಗೆ ಹೋಗಿ ಮತ್ತೆ ಊಟಕ್ಕೆ ಬರುವಂತೆ ಕರೆದು ಮನೆಯೊಳಗೆ ಬರುತ್ತಿದ್ದರು.
Advertisement
Advertisement
ಆಗ ಆರೋಪಿ ಸ್ನೇಹಿತರೊಂದಿಗೆ ಮಾತನಾಡುವಾಗ ಅಡ್ಡಿಪಡಿಸಿದ ಕಾರಣಕ್ಕಾಗಿ ಕೋಪದಿಂದ ತನ್ನ ತಾಯಿಗೆ ಗುಂಡು ಹಾರಿಸಿದ್ದಾನೆ. ತಕ್ಷಣ ಮಂಜು ದೇವಿ ಸ್ಥಳದಲ್ಲೇ ಕೆಳಗೆ ಬಿದ್ದಿದ್ದಾರೆ. ಗಂಭೀರ ಗಾಯಗೊಂಡ ಮಂಜು ದೇವಿಯನ್ನು ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ಅವರಿಗೆ ಚಿಕಿತ್ಸೆ ನಡೆಯುತ್ತಿದೆ ಎಂದು ಪೊಲೀಸ್ ಅನಿಲ್ ಕುಮಾರ್ ತಿಳಿಸಿದ್ದಾರೆ.
ಈ ಘಟನೆಗೆ ಮಂಜು ದೇವಿ ಸಹೋದರಿ ಇಂದೂ ದೇವಿ ಸಾಕ್ಷಿಯಾಗಿದ್ದು, ಈ ಕುರಿತು ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಇಂದೂ ದೇವಿಯ ಹೇಳಿಕೆಯ ಆಧಾರದ ಮೇಲೆ ಅಂಗದ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ನಂತರ ಯಾದವ್ನನ್ನು ನಿವಾಸದ ಹಿಂದಿನ ಅರಣ್ಯದಲ್ಲಿ ಬಂಧಿಸಲಾಗಿದೆ. ಆರೋಪಿ ಬಂಧನದ ವೇಳೆ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ. ಕೊನೆಗೆ ಪೊಲೀಸರು ಆರೋಪಿಯನ್ನು ಪಿಸ್ತೂಲ್ ಸಮೇತ ಬಂಧಿಸಿದ್ದಾರೆ.
ಆರೋಪಿ ಯಾದವ್ ತಂದೆ ರಂಬಾಬು ಯಾದವ್ ಮತ್ತು ಅವರ ಇಬ್ಬರು ಹಿರಿಯ ಸಹೋದರರು ಪಂಜಾಬ್ನಲ್ಲಿ ದೈನಂದಿನ ಕೂಲಿ ಕೆಲಸ ಮಾಡುತ್ತಾರೆ. ಆರು ತಿಂಗಳ ಹಿಂದೆ 7,500 ರೂ. ಕೊಟ್ಟು ಪಿಸ್ತೂಲ್ ಖರೀದಿಸಿದ್ದೇನೆ ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ಗುರುವಾರ ಕೋವಿಡ್ -19 ಪರೀಕ್ಷೆಯ ನಂತರ ಆರೋಪಿಯನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಅನಿಲ್ ಕುಮಾರ್ ತಿಳಿಸಿದ್ದಾರೆ.