ಚಿಕ್ಕಮಗಳೂರು: ಬೆಟ್ಟದ ತುದಿಯಲ್ಲಿ ಅತ್ಯಾಧುನಿಕ ಶೆಡ್ ಪತ್ತೆಯಾಗಿದ್ದು, ನಕ್ಸಲರು ಮತ್ತೆ ಮಲೆನಾಡನ್ನು ಅಡಗುದಾಣವನ್ನಾಗಿ ಮಾಡಿಕೊಳ್ಳುತ್ತಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದೆ.
Advertisement
ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಸಮೀಪದ ಹೇರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲೆಮಡಿಲು ಗ್ರಾಮದ ದುರ್ಗದ ಬೆಟ್ಟದ ತುದಿಯಲ್ಲಿ ಶೆಡ್ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸ್ಥಳೀಯರು ಚಾರಣಕ್ಕೆ ಹೋದಾಗ ಈ ಶೆಡ್ ಪತ್ತೆಯಾಗಿದ್ದು, ತಾರ್ಪಲ್ನಿಂದ ನಿರ್ಮಿಸಿರುವ ಶೆಡ್ ಕಂಡು ಸ್ಥಳಿಯರು ಆತಂಕಕ್ಕೀಡಾಗಿದ್ದಾರೆ.
Advertisement
ಶೆಡ್ನಲ್ಲಿ ಪೆಟ್ರೋಲ್ ಕ್ಯಾನ್ಗಳು, ಗುಣಮಟ್ಟದ ಹಗ್ಗ, ನೀರಿನ ಬಾಟಲ್ ಹಾಗೂ ಕುರ್ಚಿಗಳು ಪತ್ತೆಯಾಗಿದ್ದು, ನಕ್ಸಲರು ಬಂದು ಹೋಗಿರಬಹುದಾ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಕಳೆದ ಒಂದೆರಡು ವರ್ಷಗಳಿಂದ ಮಲೆನಾಡಲ್ಲಿ ನಕ್ಸಲರ ಸಂಖ್ಯೆ ಸಂಪೂರ್ಣ ಕ್ಷೀಣಿಸಿದೆ. ಇರುವಿಕೆಯ ಬಗ್ಗೆಯೂ ಯಾವುದೇ ಪುರಾವೆಗಳು ಸಿಕ್ಕಿರಲಿಲ್ಲ. ಇದೀಗ ಗುಡ್ಡದಲ್ಲಿ ಶೆಡ್ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
Advertisement
Advertisement
ನಕ್ಸಲರು ಸಂಘಟನೆಯನ್ನು ಬಲಪಡಿಸಿಕೊಳ್ಳುತ್ತಿದ್ದಾರಾ, ತರಬೇತಿ ನಡೆಸಿದ್ದಾರಾ ಎಂಬ ಅನುಮಾನ ಮೂಡಿದೆ. ಯಾವುದಾದರು ಕೃತ್ಯಕ್ಕೆ ಸಂಚು ರೂಪಿಸಿರಬಹುದಾ ಎಂಬ ಶಂಕೆ ಕೂಡ ಮನೆ ಮಾಡಿದೆ. ವಿಷಯ ತಿಳಿಯುತ್ತಿದ್ದಂತೆ ಜಯಪುರ ಪೊಲೀಸರು ಹಾಗೂ ಕೊಪ್ಪ ಸರ್ಕಲ್ ಇನ್ಸ್ಪೆಕ್ಟರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುತ್ತಲಿನ ಕಾಫಿ ಎಸ್ಟೇಟ್ನವರು ಮೋಜು-ಮಸ್ತಿಗಾಗಿಯೂ ನಿರ್ಮಿಸಿರಬಹುದು ಎಂದು ಅಂದಾಜಿಸಲಾಗಿದ್ದು, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸರು ಸೂಕ್ತ ತನಿಖೆ ನಡೆಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.