– ಪೊಲೀಸ್ ಅಧಿಕಾರಿಗಳಿಂದ ಸಮಾಜಮುಖಿ ಕೆಲಸ
ಕೊಪ್ಪಳ: ಅಭಿನವ ಗವಿಶ್ರೀಗಳ ಮಾರ್ಗದರ್ಶನದಲ್ಲಿ ಕೆರೆ ನಿರ್ಮಾಣ ಮಾಡಲಾಗಿದೆ. ಅಲ್ಲದೆ ಪೋಲಿಸರು ತಮ್ಮ ವೃತ್ತಿಯ ಜೊತೆಯಲ್ಲಿಯೇ ಕೆರೆ ನಿರ್ಮಾಣದಂತಹ ಉತ್ತಮ ಕಾರ್ಯ ಮಾಡಿರುವುದು ಶ್ಲಾಘನೀಯ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಸಚಿವ ಹಾಲಪ್ಪ ಬಸಪ್ಪ ಆಚಾರ್ ಹೇಳಿದರು.
Advertisement
ಡಿ.ಆರ್.ಕೇಂದ್ರ ಸ್ಥಳ ಬಸಾಪೂರದಲ್ಲಿ ಸ್ಪೂರ್ತಿಸಾಗರ ಸರೋವರ ಲೋಕಾರ್ಪಣೆಮಾಡಿ ಮಾತನಾಡಿದ ಅವರು, ಈ ಹಿಂದೆ ನಮ್ಮ ಹಿರಿಯರು ಎಲ್ಲ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಿದ್ದರು. ಇಂದು ನಾವೆಲ್ಲರೂ ಸರ್ಕಾರಕ್ಕೆ ದೂರುವ ಬದಲಿಗೆ ನಮಗೆ ಬೇಕಾಗುವ ಮೂಲ ಸೌಕರ್ಯಗಳ ರಕ್ಷಣೆಗೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಜಿಲ್ಲೆಯ ಹಿರೆಹಳ್ಳ ಸ್ವಚ್ಛತೆ ಕಾರ್ಯ ಮತ್ತು ಗಿಣಿಗೆರೆ ಕೆರೆ ಅಭಿವೃದ್ಧಿಯಂತಹ ಮಹತ್ತರ ಕಾರ್ಯಗಳಿಗೆ ಮುಂದಾಗಿದ್ದಾರೆ. ಶ್ರೀಗಳು ಕರೆ ಕೊಟ್ಟಾಗ ಜನರು ಇಂಥ ಕಾರ್ಯಗಳಿಗೆ ಸಹಕಾರ ನೀಡುತ್ತಾರೆ ಎಂದರು.
Advertisement
Advertisement
ಈ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಅಧಿಕಾರಿಗಳು ಕೆರೆ ನಿರ್ಮಿಸಿಕೊಂಡಿರುವುದು ಉತ್ತಮ ಸಮಾಜಮುಖಿ ಕಾರ್ಯವಾಗಿದೆ. ಹಿಂದೆ ನಾನು ನಾಲ್ಕು ಕೆರೆಗಳನ್ನು ನಿರ್ಮಿಸಿದ್ದೆ, ಇದರಿಂದ ಸಿಗುವ ಸಂತೃಪ್ತಿಯೆ ಬೇರೆಲ್ಲೂ ಸಿಗುವುದಿಲ್ಲ ಎಂದು ಸಚಿವರು ಹೇಳಿದರು.
Advertisement
ಸಂಸದ ಕರಡಿ ಸಂಗಣ್ಣ ಮಾತನಾಡಿ, ಪೊಲೀಸ್ ಅಧಿಕಾರಿಗಳು ತಮ್ಮ ಕರ್ತವ್ಯದ ಜೊತೆಗೆ ಕೆರೆ ನಿರ್ಮಾಣದ ಕಾರ್ಯ ಕೈಗೊಂಡು ಇತರರಿಗೆ ಮಾದರಿಯಾಗಿದ್ದಾರೆ. ಒಬ್ಬ ಪೊಲೀಸ್ ಅಧಿಕಾರಿಯಾಗಿ ಏನು ಮಾಡಬಹುದು ಎಂಬುದಕ್ಕೆ ಇವರು ಸಾಕ್ಷಿಯಾಗಿದ್ದಾರೆ ಎಂದರು.
ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ, ಹುಟ್ಟು, ಸಾವು ಅನಿವಾರ್ಯ ಆದರೆ ಇಂಥ ಉತ್ತಮ ಸಮಾಜಮುಖಿ ಕೆಲಸ ಮಾಡಿದಾಗ ಅವು ಶಾಶ್ವತವಾಗಿ ಉಳಿಯುತ್ತವೆ. ನಡೆದಾಡುವ ದೇವರು ಎಂದು ಕರೆಯುವ ಗವಿಶ್ರೀಗಳ ಮಾರ್ಗದರ್ಶನದಲ್ಲಿ ಕೆರೆ ನಿರ್ಮಾಣ ಕಾರ್ಯ ಉತ್ತಮವಾಗಿದೆ ಎಂದು ಹೇಳಿದರು.