– ಬಾಲಕಿಯ ಶ್ರಮಕ್ಕೆ ರಕ್ಷಣಾ ಸಚಿವರಿಂದ ಶ್ಲಾಘನೆ
– ಇಶಿತಾಗೆ ಗುಡ್ಲಕ್ ಅಂದ್ರು ರಾಜನಾಥ್ ಸಿಂಗ್
ಉಡುಪಿ: ದೇಶ ಸೇವೆ ಮಾಡಬೇಕು ಅಂತ ಮನಸ್ಸಿದ್ರೆ ಗಡಿಗೇ ಹೋಗಬೇಕಾಗಿಲ್ಲ. ಮನೆಯಲ್ಲೇ ಕೂತು ದೇಶ ಸೇವೆ ಮಾಡಬಹುದು. ಕೊರೊನಾ ಸಂಕಷ್ಟದ ಕಾಲದಲ್ಲಿ ರಜೆಯಿಲ್ಲದೆ ದುಡಿಯುತ್ತಿರುವ ಭಾರತೀಯ ಸೇನೆಗೆ ಉಡುಪಿಯ ಪೋರಿಯೊಬ್ಬಳು ಧೈರ್ಯ ತುಂಬಿದ್ದಾಳೆ.
ಹೌದು. ಉಡುಪಿಯ ಅಂಬಲಪಾಡಿ ನಿವಾಸಿ ಇಶಿತಾ ಆಚಾರ್, ಮಣಿಪಾಲದ ಮಾದವ ಕೃಪಾ ಆಂಗ್ಲ ಮಾದ್ಯಮ ಶಾಲೆಯಲ್ಲಿ 8 ತರಗತಿ ಓದುತ್ತಿದ್ದಾಳೆ. ಭಾರತ್ ಸ್ಕೌಟ್ಸ್ ಮತ್ತು ಗೈಡ್ ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾಳೆ.
Advertisement
Advertisement
ಯೋಧರು ಅಂದ್ರೆ ಇಶಿತಾಗೆ ಪ್ರೀತಿ ಕಾಳಜಿ ಗೌರವ. ದೇಶವೇ ಕೊರೊನಾದಿಂದ ತತ್ತರಿಸಿ ಲಾಕ್ಡೌನ್ ಆಗಿತ್ತು. ಶಾಲೆಗಳಿನ್ನೂ ಆರಂಭವಾಗಿಲ್ಲ. ಈ ನಡುವೆ ಸ್ಕೌಟ್ಸ್ ಶಿಕ್ಷಕರು, SSLC ವಿದ್ಯಾರ್ಥಿಗಳಿಗಾಗಿ ಮಾಸ್ಕ್ ತಯಾರಿಸುವಂತೆ ಹೇಳಿದ್ದರು. ಮನೆಯಲ್ಲೇ ಮಾಡರ್ನ್ ಹೊಲಿಗೆ ಯಂತ್ರ ಇರೋದ್ರಿಂದ ಹೊಲಿಗೆ ಗೊತ್ತಿದ್ದ ಇಶಿತಾಗೆ ಮಾಸ್ಕ್ ತಯಾರಿ ಕಷ್ಟ ಆಗಿಲ್ಲ. ಮಾಸ್ಕ್ ತಯಾರು ಮಾಡಿ ಮೊದಲು 10ನೇ ತರಗತಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ನೀಡಿದ್ದಳು.
Advertisement
ಇದರಿಂದ ಸ್ಫೂರ್ತಿಗೊಂಡು ಮತ್ತಷ್ಟು ಮಾಸ್ಕ್ ತಯಾರಿಸಿದ್ದಳು. ಹೊಲಿದ ಮಾಸ್ಕನ್ನು ಆರ್ಹರಿಗೆ ನೀಡಬೇಕು ಅಂತ ಯೋಚನೆ ಬಂದಾಗ ಆಕೆಗೆ ಮೊದಲು ನೆನಪಾಗಿದ್ದೇ ಯೋಧರು. ದೇಶ ಕಾಯಲು ಸಾಧ್ಯ ಆಗದೆ ಇದ್ದರೂ ವೀರ ಯೋಧರಿಗೆ ಅಳಿಲ ಸೇವೆ ಮಾಡಬೇಕು ಅಂತ ಅವರಿಗೆ ಮಾಸ್ಕ್ ನೀಡಲು ತೀರ್ಮಾನಿಸಿದಳು.
Advertisement
ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಇಶಿತಾ ಆಚಾರ್ ಮಾತನಾಡಿ, ಯೋಧರಿಗೆ ಮಾಸ್ಕ್ ನೀಡಿದ್ದು ಬಹಳ ಖುಷಿಯಾಗಿತ್ತು. ಆದರೆ ರಕ್ಷಣಾ ಸಚಿವರಿಂದ ಪತ್ರ ಬಂದಿದ್ದು, ಮತ್ತಷ್ಟು ಸಂತಸವಾಗಿದೆ. ಅಭಿನಂದನೆ ಜೊತೆ ಗುಡ್ಲಕ್ ಹೇಳಿದ್ದಾರೆ. ಇದರಿಂದ ಇನ್ನಷ್ಟು ಕೆಲಸ ಮಾಡಬೇಕೆಂಬ ಹುಮ್ಮಸ್ಸು ಮೂಡಿದೆ ಎಂದರು.
ಯೋಧರಿಗೆ ಮಾಸ್ಕ್ ನೀಡುವುದೇನೋ ಸರಿ ಆದರೆ ಕಳುಹಿಸಿ ಕೊಡುವುದು ಹೇಗೆ? ಅವರಿಗೆ ತಲುಪಿದೆ ಅಂತ ಗೋತ್ತಾಗುವುದು ಆದ್ರೂ ಹೇಗೆ? ಒಳ್ಳೆಯ ನಿರ್ಧಾರದಿಂದ ಹಿಂದೆ ಸರಿಯಬಾರದು ಅಂತ ಇಂಟರ್ನೆಟ್ ಮೂಲಕ ಸರ್ಚ್ ಮಾಡಿ, ಅದರಲ್ಲಿ ಇದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ವಿಳಾಸಕ್ಕೆ ಇಶಿತಾ ಹೊಲಿದ 300 ಮಾಸ್ಕ್ ಗಳನ್ನು ಕಳುಹಿಸಿ ಕೊಡಲಾಯ್ತು. ಮಾಸ್ಕ್ ಸಿಕ್ಕ ಕೂಡಲೇ ಆಕಡೆಯಿಂದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಪತ್ರವೂ ಬಂದಿದೆ. ಇದು ಇಶಿತಾ ಮನೆಯವರಿಗೂ ಬಹಳ ಸಂತಸ ತಂದಿದೆ.
ತಾಯಿ ನಂದಿತಾ ಮಾತನಾಡಿ, ಎಸ್ ಎಸ್ ಎಲ್ ಸಿ ಮಕ್ಕಳಿಗೂ ಮಾಸ್ಕ್ ಹೊಲಿಸಿ ಕೊಟ್ಟಿದ್ದೇವೆ. ಉಳಿದ ಮಾಸ್ಕ್ ಏನು ಮಾಡೋದು ಅಂತ ಯೋಚಿಸಿದಾಗ ಈ ಯೊಚನೆ ಬಂತು. ರಕ್ಷಣಾ ಸಚಿವರ ಪ್ರತಿಕ್ರಿಯೆ ಬರುತ್ತದೆ ಎಂಬ ನಿರೀಕ್ಷೆ ಇರಲಿಲ್ಲ ಎಂದರು.
ಒಟ್ಟಿನಲ್ಲಿ ಪುಟ್ಟ ಬಾಲಕಿಯ ದೇಶ ಪ್ರೇಮ ಹಾಗೂ ಸೈನಿಕರ ಆರೋಗ್ಯ ಕುರಿತು ಕಾಳಜಿ ಮೆಚ್ಚಲೇಬೇಕು. ಮಾಸ್ಕ್ ನೀಡುವ ಮೂಲಕ ದೇಶದ ಯೋಧರ ಅಳಿಲ ಸೇವೆ ಮಾಡಿದ್ದಾಳೆ. ಮುಂದೆ ದೊಡ್ಡ ಮಟ್ಟದ ದೇಶ ಸೇವೆ ಮಾಡುವ ಆಲೋಚನೆ ಈಕೆಗಿದೆ.