– ಆರೋಗ್ಯ ಸಚಿವರಾಗಿ ಸುಧಾಕರ್
– ರಾಮುಲುಗೆ ಸಮಾಜ ಕಲ್ಯಾಣ ಇಲಾಖೆ
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ದಿಢೀರ್ ಬೆಳವಣಿಗೆಯಾಗಿದ್ದು, ಇಂದಿನಿಂದ ಆರೋಗ್ಯ ಸಚಿವರಾಗಿ ಕೆ. ಸುಧಾಕರ್ ಅವರು ಜವಾಬ್ದಾರಿ ತೆಗೆದುಕೊಳ್ಳಲಿದ್ದಾರೆ. ಈ ಹಿಂದೆ ಆರೋಗ್ಯ ಸಚಿವರಾಗಿದ್ದ ಶ್ರೀರಾಮುಲು ಅವರು ಸಮಾಜ ಕಲ್ಯಾಣ ಇಲಾಖೆಯ ಹೊಣೆಯನ್ನು ಹೊತ್ತುಕೊಳ್ಳಲಿದ್ದಾರೆ.
ಈ ಸಂಬಂಧ ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್, ಆರೋಗ್ಯ ಇಲಾಖೆ ವಹಿಸಿಕೊಂಡು ಕೊರೊನಾ ನಿಯಂತ್ರಣ ಸೇರಿದಂತೆ ಮಹತ್ವದ ಬದಲಾವಣೆ ತರುವಂತೆ ಹಾಗೂ ರಾಜ್ಯದ ಜನರಿಗೆ ಉತ್ತಮ ಆರೋಗ್ಯ ನೀಡುವ ನಿಟ್ಟಿನಲ್ಲಿ ಕ್ರಾಂತಿಕಾರಕ ಕೆಲಸ ಮಾಡಬೇಕು ಅಂತ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನನಗೆ ಸೂಚನೆ ನೀಡಿದ್ದಾರೆ. ಸಿಎಂ ಅವರಿಗೆ ಧನ್ಯವಾದ ಹೇಳ್ತೀನಿ. ಅವರ ನಂಬಿಕೆ ಉಳಿಸಿಕೊಳ್ಳುವಂತಹ ಕೆಲಸ ಮಾಡ್ತೀನಿ. ಶಕ್ತಿ ಮೀರಿ ಪ್ರಾಮಾಣಿಕ ಕೆಲಸ ಮಾಡ್ತೀನಿ. ಪಕ್ಷದ ಎಲ್ಲಾ ನಾಯಕರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
Advertisement
Advertisement
ಶ್ರೀರಾಮುಲು ಜೊತೆ ಮಾತಾಡಿದ್ದೇನೆ. ಅವರಿಗೆ ಸಮಾಜ ಕಲ್ಯಾಣ ಇಲಾಖೆ ನೀಡಿದ್ದಾರೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡ್ತೀವಿ. ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಒಂದೇ. ಇದೊಂದು ದೊಡ್ಡ ಹೊಣೆ. ಹೊಸ ಜವಾಬ್ದಾರಿಯನ್ನ ವಿಶ್ವಾಸದಿಂದ ತೆಗೆದುಕೊಳ್ತೀನಿ. ಮೊದಲ ದಿನ ಮೈಸೂರಿನಲ್ಲಿ ಸಭೆ ಮಾಡ್ತಿದ್ದೇನೆ. ದಸರಾ ಸಿದ್ಧತೆ ಮತ್ತು ಒಂದು ವಾರದಿಂದ ಕೊರೊನಾ ಹೆಚ್ಚಾಗಿದೆ. ಹೀಗಾಗಿ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆ ಮಾಡ್ತೀನಿ. ಖಾಸಗಿ ಆಸ್ಪತ್ರೆಗಳ ಜೊತೆಯೂ ಸಭೆ ಮಾಡ್ತೀನಿ. ಕೆಲ ಆಸ್ಪತ್ರೆಗಳಿಗೂ ಭೇಟಿ ಕೊಡ್ತೀನಿ. ಕೊರೊನಾ ನಿಯಂತ್ರಣ ತರುವ ಕೆಲಸ ಮಾಡ್ತೀವಿ ಎಂದರು.
Advertisement
ಶ್ರೀರಾಮುಲಿಗೆ ಬೇಸರ ಇಲ್ಲ. ನಾನು ಅವರ ಜೊತೆ ಮಾತಾಡಿದ್ದೇನೆ. ಸಮಾಜ ಕಲ್ಯಾಣ ಇಲಾಖೆ ದೊಡ್ಡ ಇಲಾಖೆ. ಪರಿಶಿಷ್ಟ ಜಾತಿ, ಪಂಗಡದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡೋ ಇಲಾಖೆ. ಅವರು ಮೊದಲು ಅದೇ ಇಲಾಖೆ ಕೇಳಿದ್ರು ಅಂತ ಕೇಳಿದ್ದೇನೆ. ಹೀಗಾಗಿ ಅವರಿಗೆ ಯಾವುದೇ ಅಸಮಾಧಾನ ಇಲ್ಲ ಅಂತ ಭಾವಿಸಿದ್ದೇನೆ ಎಂದು ತಿಳಿಸಿದರು.
Advertisement
ಸಿಎಂ ಇಂದು ಆದೇಶ ಮಾಡೋದಾಗಿ ತಿಳಿಸಿದ್ದಾರೆ. ಈಗಾಗಲೇ ಕೆಲಸ ಪ್ರಾರಂಭ ಮಾಡಿದ್ದೇನೆ. ಆದೇಶ ಬಂದ ಕೂಡಲೇ ನಾಳೆಯೇ ಇಲಾಖೆ ಅಧಿಕಾರಿಗಳ ಜೊತೆ ಸಭೆ ಮಾಡಿ ಮುಂದಿನ ಕೆಲಸ ಮಾಡ್ತೀನಿ. ಆರೋಗ್ಯ ಇಲಾಖೆ ಸೇರಿದಂತೆ ಯಾವುದೇ ಇಲಾಖೆಯಲ್ಲಿ ಭ್ರಷ್ಟಾಚಾರ ಆಗಿಲ್ಲ. ಈಗಾಗಲೇ ಸದನದಲ್ಲಿ ಈ ಬಗ್ಗೆ ಹೇಳಿದ್ದೇನೆ. ಇನ್ನೂ ಇಲಾಖೆ ಚಾರ್ಜ್ ತಗೊಂಡಿಲ್ಲ. ಇಲಾಖೆ ಚಾರ್ಜ್ ತೆಗೆದುಕೊಂಡ ಕೂಡಲೇ ಇಲಾಖೆ ಅಧ್ಯಯನ ಮಾಡಿ ಮುಂದಿನ ಕ್ರಮ ತಗೋತೀನಿ ಎಂದು ಹೇಳಿದರು.
ಇಲಾಖೆ ವಹಿಸಿಕೊಂಡು ನನ್ನ ಮೊದಲ ಆದ್ಯತೆ ಕೊರೊನಾ ನಿಯಂತ್ರಣ ಮಾಡೋದು. ಸಾವಿನ ಪ್ರಮಾಣ ಕಡಿಮೆ ಮಾಡೋದು ನನ್ನ ಗುರಿ. ಜನರಿಗೆ ಸುಲಭವಾಗಿ ಚಿಕಿತ್ಸೆ ಸಿಗುವಂತೆ ಕ್ರಮ ತೆಗೆದುಕೊಳ್ಳೋದು ನನ್ನ ಗುರಿ ಅಂದ್ರು.
ಇದೇ ವೇಳೆ ಶ್ರೀರಾಮುಲು ಗಮನಕ್ಕೆ ತಂದು ಖಾತೆ ಬದಲಾವಣೆ ಮಾಡಲಾಗಿದೆಯಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಸುಧಾಕರ್, ಅದನ್ನ ಸಿಎಂಗೆ ನೀವು ಕೆಳಬೇಕು. ಬಯಸದೇ ಬಂದ ಭಾಗ್ಯ ಅನ್ನೋದಕ್ಕಿಂತ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಒಂದೇ. ಈಗ ಅ ಜವಾಬ್ದಾರಿ ನನಗೆ ಕೊಟ್ಟಿದ್ದಾರೆ. ಸದನ್ನ ಸಮರ್ಪಕವಾಗಿ ನಿಭಾಯಿಸುತ್ತೇನೆ ಎಂದು ಭರವಸೆ ನೀಡಿದರು.