– ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಬಳಿಕ ಸಂಶೋಧನೆಗೆ ಇನ್ನಷ್ಟು ವೇಗ
ಬೆಂಗಳೂರು: ಆವಿಷ್ಕಾರ ಹಾಗೂ ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳನ್ನು ಮತ್ತಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಕಣ ಸಂಶೋಧನೆಗೆ (ಕ್ವಾಂಟಮ್ ಸಂಶೋಧನೆ) ಸರ್ಕಾರ ಹೆಚ್ಚು ಆದ್ಯತೆ ನೀಡುತ್ತಿದೆ ಎಂದು ವಿಜ್ಞಾನ-ತಂತ್ರಜ್ಞಾನ ಖಾತೆ ಸಚಿವ, ಉಪ ಮುಖ್ಯ ಮಂತ್ರಿ ಡಾ.ಸಿ.ಎನ್ ಅಶ್ವಥ್ ನಾರಾಯಣ್ ಹೇಳಿದರು.
ಬೆಂಗಳೂರಿನಲ್ಲಿ ಶನಿವಾರ ಕ್ವಾಂಟಮ್ ಸಂಶೋಧನೆ ಕುರಿತ ವರ್ಚುಯಲ್ ಚರ್ಚಾಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆರಂಭದಿಂದ ಸಂಶೋಧನೆಯತ್ತ ಮುಕ್ತವಾಗಿ ತೆರೆದುಕೊಂಡಿರುವ ರಾಜ್ಯ ಕರ್ನಾಟಕ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾದ ಮೇಲೆ ಇದಕ್ಕೆ ಇನ್ನೂ ಹೆಚ್ಚು ಒತ್ತು ನೀಡಲಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಕಣ ವಿಜ್ಞಾನ ಬೋಧನೆಗೆ ಹೆಚ್ಚೆಚ್ಚು ಅವಕಾಶ ಕಲ್ಪಿಸುವುದಾಗಿ ತಿಳಿಸಿದರು.
Advertisement
Advertisement
ಬೆಂಗಳೂರು ಹಾಗೂ ರಾಜ್ಯದಲ್ಲಿನ ರಕ್ಷಣಾ ಸಂಶೋಧನೆ, ಶಿಕ್ಷಣ ಹಾಗೂ ವೈಜ್ಞಾನಿಕ ಸಂಸ್ಥೆಗಳು ಕೆಲಸ ಮಾಡುತ್ತಿದ್ದು, ಅಲ್ಲೆಲ್ಲ ಕ್ವಾಂಟಮ್ ಸಂಶೋಧನೆಯ ಬಗ್ಗೆ ಕೆಲಸ ಮಾಡಲಾಗುತ್ತಿದೆ. ಇದೆಲ್ಲವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಒಂದು ವ್ಯವಸ್ಥಿತ ಜಾಲ ರೂಪಿಸಿ ಸರ್ಕಾರದಿಂದ ಮತ್ತಷ್ಟು ಪ್ರೋತ್ಸಾಹ-ಬೆಂಬಲ ಕೊಡಲಾಗುವುದು. ಇದು ನಮ್ಮ ಆರ್ಥಿಕ ಶಕ್ತಿ ಹಾಗೂ ವೈಜ್ಞಾನಿಕ ಸಾಮಥ್ರ್ಯವನ್ನು ಪ್ರದರ್ಶಿಸಲಿದೆ ಎಂದು ಡಿಸಿಎಂ ಹೇಳಿದರು.
Advertisement
ಮೂಲ ವಿಜ್ಞಾನಕ್ಕೆ ಒತ್ತು:
ಪ್ರಸ್ತುತ ರಾಜ್ಯದಲ್ಲಿ ಮೂಲ ವಿಜ್ಞಾನದತ್ತ ವಿದ್ಯಾರ್ಥಿಗಳು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಆವಿಷ್ಕಾರ ಮತ್ತು ಸಂಶೋಧನೆಗೆ ಸಿಗುತ್ತಿರುವ ಮನ್ನಣೆ, ಪ್ರೋತ್ಸಾಹವನ್ನು ಕಂಡು ಹೊಸ ತಲೆಮಾರಿನ ಯುವಜನರು ವಿಜ್ಞಾನವನ್ನು ಅಧ್ಯಯನ ಮಾಡುತ್ತಿದ್ದಾರೆ. ವಾಣಿಜ್ಯ ದೃಷ್ಟಿಯಿಂದಲೂ ಮೂಲ ವಿಜ್ಞಾನವನ್ನು ಉತ್ತೇಜಿಸಿ ಬೆಳೆಸುವ ನಿಟ್ಟಿನಲ್ಲಿ ಸರಕಾರ ಕೆಲಸ ಮಾಡುತ್ತಿದೆ ಎಂದು ಡಾ. ಅಶ್ವಥ್ ನಾರಾಯಣ್ ಹೇಳಿದರು.
Advertisement
ಉಳಿದಂತೆ ಶಿಕ್ಷಣ ಹಾಗೂ ಉದ್ಯೋಗ ಸೃಷ್ಟಿಯಲ್ಲಿ ಆಂತರಿಕವಾಗಿ ಶಿಸ್ತು ಅಳವಡಿಸಿಕೊಂಡು ಸಾಕಷ್ಟು ಸುಧಾರಣೆಗಳನ್ನು ಜಾರಿಗೆ ತರಲಾಗಿದೆ. ಬದಲಾವಣೆ- ವ್ಯತ್ಯಾಸ ಎನ್ನುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ಡಿಸಿಎಂ ಒತ್ತಿ ಹೇಳಿದರು.
ಗೋಷ್ಠಿಯಲ್ಲಿ ಆರ್ಎಸ್ಎಸ್ ಸಹ ಸರಕಾರ್ಯವಾಹ ಮುಕುಂದ್ ಜೀ, ಪ್ರಧಾನಮಂತ್ರಿಗಳ ವೈಜ್ಞಾನಿಕ ಸಲಹಾ ಮಂಡಳಿ ಸದಸ್ಯ ಕಿರಣ್ ಕಾರ್ನಿಕ್, ಉದ್ಯಮಿ ದಿಲೀಪ್ ಸತ್ಯ, ಡಚ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕಿ ಸಂಧ್ಯ ವಾಸುದೇವನ್ ಮುಂತಾದವರು ಪಾಲ್ಗೊಂಡಿದ್ದರು.