ದಾವಣಗೆರೆ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಪಕ್ಷದ ಎಲ್ಲಾ ಕಾರ್ಯಕರ್ತರ ಶ್ರಮವಿದೆ. ಆದರೆ ಇದೀಗ ಕೆಲ ಕ್ಯಾಬಿನೆಟ್ ಸಚಿವರು ದುರಹಂಕಾರದಿಂದ ವರ್ತಿಸುತ್ತಿದ್ದಾರೆ ಎಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ತಮ್ಮದೇ ಪಕ್ಷದ ಸಚಿವರ ವಿರುದ್ಧ ವಾಗ್ದಳಿ ನಡೆಸಿದ್ದಾರೆ.
Advertisement
ಹೊನ್ನಾಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಒಳ್ಳೆಯ ಆಡಳಿತ ಮಾಡುತ್ತಿದ್ದಾರೆ. ಆದರೆ ಕ್ಯಾಬಿನೆಟ್ನಲ್ಲಿರುವ ಕೆಲವು ಸಚಿವರ ವರ್ತನೆ ಸರಿಯಿಲ್ಲ. ಸಚಿವ ಸಂಪುಟದಲ್ಲಿರುವ ಕೆಲ ಸಚಿವರ ದುರಹಂಕಾದಿಂದ ವರ್ತಿಸುತ್ತಿದ್ದು, ಅವರ ವರ್ತನೆಗಳು ಸರ್ವಾಧಿಕಾರಿಯಂತೆ ಕಂಡುಬರುತ್ತಿದೆ. ಬೇರೆ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಅವರಿಗೆ ಕಳಕಳಿ ಇಲ್ಲ. ಅವರು ಅವರ ಕ್ಷೇತ್ರಕ್ಕೆ ಮತ್ತು ವಿಧಾನಸೌಧದ ಮೂರನೇ ಕೊಠಡಿಗೆ ಸೀಮಿತವಾಗಿದ್ದಾರೆ. ಜನರು ಅಧಿಕಾರ ಕೊಟ್ಟದ್ದು ಜನರ ಸೇವೆಗೆ, ಲಾಭದಾಯಕ ಹುದ್ದೆ ಪಡೆಯೋದಕ್ಕೆ ಅಲ್ಲ ಎಂದು ಗುಡುಗಿದ್ದಾರೆ.
Advertisement
Advertisement
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ನಾನು ರೆಸಾರ್ಟ್ ನಲ್ಲಿ ಕೆಲ ಶಾಸಕರೊಂದಿಗೆ ಮಾತುಕತೆ ಮಾಡಿದ್ದೇನೆ. ಆದರೆ ಇದೀಗ ಕೆಲವು ಸಚಿವರ ದುರಹಂಕಾರ ನನಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಈ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾನು ಮಾತನಾಡ್ತೇನೆ. ಬಿಜೆಪಿ ಒಳ್ಳೆಯ ಆಡಳಿತ ನೀಡಲಿ ಎನ್ನವುದು ಜನರ ಬಯಕೆ ಆಗಿದೆ. ಅದರಂತೆ ರಾಜ್ಯದಲ್ಲಿ ಸಿಎಂ ಉತ್ತಮ ಆಡಳಿತ ನಡೆಸುತ್ತಿದ್ದಾರೆ. ಆದರೆ ಕ್ಯಾಬಿನೆಟ್ ನಲ್ಲಿ ಕೆಲವು ಸಚಿವರಿಂದ ಸರ್ಕಾರಕ್ಕೆ ಕೇಡು ಬರುತ್ತಿದೆ. ನಿನ್ನೆ ಬಿಜೆಪಿ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಬೇಕಿತ್ತು ಕಾರಣಾಂತರಗಳಿಂದ ಆಗಿಲ್ಲ ಎಂದರು.
Advertisement
ಕೆಲ ಕ್ಯಾಬಿನೆಟ್ ಸಚಿವರಿಗೆ ಬಿಜೆಪಿ ಶಾಸಕರು ಯಾರು ಅಂತ ಸರಿಯಾಗಿ ಹೆಸರು ಗೊತ್ತಿಲ್ಲ. ಕೆಲದಿನಗಳ ಹಿಂದೆ ರಾಜ್ಯದ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿ ಸಚಿವರ ವರ್ತನೆ ಬಗ್ಗೆ ಮಾತನಾಡಿದ್ದೆ. ಅವರು ಕ್ರಮಕ್ಕೆ ಮುಂದಾಗುತ್ತಾರೆ ಎನ್ನುವ ಭರವಸೆ ಇದೆ. ದುರಹಂಕಾರಿ ಸಚಿವರಿಗೆ ನಾನು ವಿನಂತಿ ಮಾಡಲ್ಲ, ಅವರು ತಿಳಿದುಕೊಳ್ಳಬೇಕು ಈ ಸರ್ಕಾರ ಬರುವುದಕ್ಕೆ ಒಬ್ಬಿಬ್ಬರ ಪಾತ್ರ ಅಲ್ಲ, ಪ್ರತಿಯೊಬ್ಬರ ಶ್ರಮ ಇದೆ ಎನ್ನುವುದನ್ನು ಮೊದಲು ಅರ್ಥಮಾಡಿಕೊಳ್ಳಲಿ. ಯಡಿಯೂರಪ್ಪ ಅವರ ವರ್ಚಸ್ಸು, ಮೋದಿ ಅವರ ವರ್ಚಸ್ಸು ಮತ್ತು ಬಿಜೆಪಿ ಕಾರ್ಯಕರ್ತರ ಶ್ರಮದಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದರು.