– ದೇಶದಲ್ಲೇ ಇದು ಎರಡನೇ ಕೇಸ್
ದಾವಣಗೆರೆ: ಕೋವಿಡ್ ಸೂಂಕಿತರಲ್ಲಿ ಕಂಡು ಬರುವ, ದೇಶದಲ್ಲಿ ಅಪರೂಪ ಎನ್ನುವಂತಹ ಎ-ನೆಕ್ (Acute necrotizing encephalopathy of childhood) ಎಂಬ ಕಾಯಿಲೆ ನಗರದಲ್ಲಿ ಪತ್ತೆಯಾಗಿದ್ದು, ದೇಶದಲ್ಲೇ ಇದು 2ನೇ ಪ್ರಕರಣವಾಗಿದೆ. ನಗರದ ಎಸ್ಎಸ್ ವೈದ್ಯಕೀಯ ಸಂಶೋಧನಾ ಸಂಸ್ಥೆಯ ವೈದ್ಯರು ಈ ಪ್ರಕರಣವನ್ನು ಪತ್ತೆಹಚ್ಚಿದ್ದಾರೆ.
ಬ್ಲ್ಯಾಕ್ ಫಂಗಸ್ ರೀತಿಯಲ್ಲಿ ಒಂದು ಮಿಸ್ಸಿ ಪ್ರಕರಣ ಕಂಡು ಬಂದಿದ್ದು, ಇದರಲ್ಲಿ ಎ-ನೆಕ್ ಎಂಬ ಕಾಯಿಲೆ ಪತ್ತೆ ಆಗಿದೆ. ಎ-ನೆಕ್ ಕಾಯಿಲೆ ವಯಸ್ಕರಲ್ಲಿ ಕಾಣಿಸಿಕೊಳ್ಳುತ್ತಿತ್ತು. ಆದರೆ ಇದೀಗ ಮಕ್ಕಳಲ್ಲಿ ಮೊದಲ ಸಲ ಕಂಡು ಬಂದಿದೆ. ಎಸ್ಎಸ್ ವೈದ್ಯಕೀಯ ನಿರ್ದೇಶಕ ಡಾ.ನಿಜಲಿಂಗಪ್ಪ ಕಾಳಪ್ಪನವರ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಯವರ ಸಮ್ಮುಖದಲ್ಲಿ ಮಾಹಿತಿ ನೀಡಿದ್ದು, ಇಂತಹ ಪ್ರಕರಣಗಳಲ್ಲಿ ಶೇ.60ರಷ್ಟು ಸಾವಿನ ಸಾಧ್ಯತೆ ಇದೆ, ಇಂತಹದ್ದೇ ಒಂದು ವಯಸ್ಕರ ಪ್ರಕರಣ ದೆಹಲಿಯ ಏಮ್ಸ್ ನಲ್ಲಿ ಪತ್ತೆಯಾಗಿತ್ತು. ಆದರೆ ಮಗುವಿನಲ್ಲಿ ಕಂಡುಬಂದಿರುವುದು ಇದೇ ಮೊದಲ ಪ್ರಕರಣವಾಗಿದೆ.
ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ಮೂಲದ 13 ವರ್ಷದ ಬಾಲಕನಲ್ಲಿ ಇಂತಹ ಲಕ್ಷಣಗಳು ಕಂಡುಬಂದಿದ್ದು, 8 ದಿನಗಳ ಹಿಂದೆ ಎಸ್ಎಸ್ ಹೈಟೆಕ್ ಆಸ್ಪತ್ರೆಗೆ ಈ ಮಗುವನ್ನು ದಾಖಲಿಸಲಾಗಿತ್ತು. ಬಾಲಕನನ್ನು ಪರೀಕ್ಷೆ ಮಾಡಿದಾಗ ಮಿದುಳು ನಿಷ್ಕ್ರಿಯ ಹಂತದಲ್ಲಿತ್ತು. ವೆಂಟಲೇಟರ್ನಲ್ಲಿ ಇರಿಸಿ ಮೂರು ದಿನ ಚಿಕಿತ್ಸೆ ಕೊಡಲಾಯಿತು. ಸ್ವಲ್ಪ ಚೇತರಿಕೆ ಕಂಡಿದ್ದು, ಐಸಿಯುನಲ್ಲಿ ಇಡಲಾಗಿದೆ. ಆಮ್ಲಜನಕ ನೀಡುವುದನ್ನು ನಿಲ್ಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಎಸ್ಎಸ್ ಆಸ್ಪತ್ರೆಯ ಮಕ್ಕಳ ತಜ್ಞ ಕಾಳಪ್ಪನವರ್ ಮಾಹಿತಿ ನೀಡಿದ್ದಾರೆ.
ಕೊರೊನಾ ಸೋಂಕು ತಗಲಿ, ಗುಣಮುಖರಾದವರಿಗೆ ಬರುವ ಕಾಯಿಲೆ ಆಗಿದ್ದು, ಬಾಲಕ ಈಗ ಚೇತರಿಸಿಕೊಳ್ಳುತ್ತಿದ್ದಾನೆ. ಇಮ್ಮ್ಯೂನೋಗ್ಲೋಬಲಿನ್ ಇಂಜೆಕ್ಷನ್ ನೀಡಿದರೆ ಚೇತರಿಕೆ ಕಂಡು ಬರುತ್ತಿದೆ. ಆದರೆ ಇಮ್ಮ್ಯೂನೋಗ್ಲೋಬಲಿನ್ ಔಷಧಿ ದುಬಾರಿಯಾಗಿದ್ದು, 30 ಕೆ.ಜಿ.ಮಗುವಿಗೆ ಕನಿಷ್ಟ 75 ಸಾವಿರದಿಂದ ಒಂದು ಲಕ್ಷ ರೂ. ಈ ಇಮ್ಮ್ಯೂನೋಗ್ಲೋಬಲಿನ್ ಔಷಧಿಗೆ ವೆಚ್ಚವಾಗಲಿದೆ. 5 ಗ್ರಾಂ.ಗೆ 14 ಸಾವಿರ ರೂ. ಇರುವ ಇಮ್ಮ್ಯೂನೋಗ್ಲೋಬಲಿನ್ ಇಂಜೆಕ್ಷನ್ ನೀಡಲಾಗುತ್ತಿದೆ. ಮಗುವಿನ ದೇಹದ ತೂಕಕ್ಕೆ ಅನುಗುಣವಾಗಿ ಒಂದು ಕೆ.ಜಿ.ಗೆ 2 ಗ್ರಾಂ.ನಂತೆ ನೀಡಬೇಕಾಗುತ್ತದೆ ಎಂದು ಕಾಳಪ್ಪನವರ್ ತಿಳಿಸಿದರು.