ನವದೆಹಲಿ: ಕೋವಿಡ್ 19 ಹಿನ್ನೆಲೆಯಲ್ಲಿ ಸಂಸದರ ಒಂದು ವರ್ಷದ ವೇತನ ಮತ್ತು ಭತ್ಯೆ ಕಡಿತಗೊಂಡಿದೆ. ಒಂದು ವರ್ಷದ ಅವಧಿಗೆ ಸಂಸದರ ವೇತನ ಶೇ.30ರಷ್ಟು ಕಡಿತಗೊಂಡರೆ, ಸಚಿವರ ಭತ್ಯೆ ಶೇ.30ರಷ್ಟು ಕಡಿತಗೊಂಡಿದೆ.
ಈ ಬದಲಾವಣೆ ಈ ವರ್ಷದ ಏಪ್ರಿಲ್ 1ರಿಂದ ಒಂದು ವರ್ಷದವರಗೆ ಇರಲಿದೆ. ವೇತನ ಮತ್ತು ಭತ್ಯೆ ಕಡಿತದಿಂದ ಒಟ್ಟು 54 ಕೋಟಿ ರೂ. ಉಳಿತಾಯವಾಗಲಿದೆ.
Advertisement
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಏಪ್ರಿಲ್ 6 ರಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ವೇತನ ಕಡಿತದ ನಿರ್ಧಾರ ಕೈಗೊಳ್ಳಲಾಗಿತ್ತು.1954 ರ ತಿದ್ದುಪಡಿ ಪ್ರಕಾರ ಸಂಸತ್ತಿನ ಸದಸ್ಯರಿಗೆ ನೀಡುತ್ತಿದ್ದ ವೇತನ, ಭತ್ಯೆ ಮತ್ತು ಪಿಂಚಣಿಯನ್ನು ಶೇ.30 ರಷ್ಟು ಕಡಿಮೆ ಮಾಡುವ ಸುಗ್ರೀವಾಜ್ಞೆಗೆ ಕ್ಯಾಬಿನೆಟ್ ಅನುಮೋದನೆ ನೀಡಿತ್ತು. ಈ ಸುಗ್ರೀವಾಜ್ಞೆಗೆ ಈ ಬಾರಿಯ ಕಲಾಪದಲ್ಲಿ ಅನುಮೋದನೆ ಸಿಕ್ಕಿದೆ.
Advertisement
Advertisement
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ್ದ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವ್ಡೇಕರ್, ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ (ಎಂಪಿಎಲ್ಎಡಿಎಸ್)ಯನ್ನು ಎರಡು ವರ್ಷಗಳ ಕಾಲ ಸ್ಥಗಿತಗೊಳಿಸಲಾಗಿದೆ. ಈ ಹಣವನ್ನು ಕೊರೊನಾ ವಿರುದ್ಧದ ಹೋರಾಟದ ನಿಧಿಗೆ ವರ್ಗಾಯಿಸಲು ಕ್ಯಾಬಿನೆಟ್ ನಿರ್ಧರಿಸಿದೆ. ಎಂಪಿಎಲ್ಎಡಿಎಸ್ ಅಡಿಯಲ್ಲಿರುವ ಹಣವು ಎರಡು ವರ್ಷಗಳವರೆಗೆ ಸುಮಾರು 7,900 ಕೋಟಿ ರೂ. ಆಗಲಿದೆ ಎಂದು ತಿಳಿಸಿದ್ದರು.
Advertisement
ರಾಷ್ಟ್ರಪತಿ ರಾಮ್ನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ರಾಜ್ಯಪಾಲರು ಸಹ ಶೇ.30 ರಷ್ಟು ಸಂಬಳ ಕಡಿತಕ್ಕೆ ಒಪ್ಪಿಗೆ ಸೂಚಿಸಿದ್ದರು.
ಮೊದಲು ಎಷ್ಟಿತ್ತು? ಈಗ ಎಷ್ಟು ಕಡಿತಗೊಂಡಿದೆ?
ತಿಂಗಳಿಗೆ ವೇತನ 1 ಲಕ್ಷ ರೂ. ಇದ್ದರೆ ಈಗ 70,000 ರೂ.ಗೆ ಇಳಿಕೆಯಾಗಿದೆ. ಕ್ಷೇತ್ರ ಭತ್ಯೆ 70,000 ರೂ. ಇದ್ದರೆ ಈಗ ಇದು 49,000 ರೂ.ಗೆ ಇಳಿಕೆಯಾಗಿದೆ.
ಸರ್ಕಾರಿ ಕಚೇರಿ ಖರ್ಚುಗಳ ಭತ್ಯೆ ಈಗ 54,000 ರೂ.ಗಳಿಗೆ ಇಳಿಕೆಯಾಗಿದ್ದರೆ ಮೊದಲು 60,000 ರೂ. ಇತ್ತು. ಇದರಲ್ಲಿ 20,000 ರೂ. ಇದ್ದ ಕಚೇರಿ ಖರ್ಚು 14,000 ರೂ. ಗಳಿಗೆ ಇಳಿಕೆಯಾಗಿದೆ. ಕಾರ್ಯದರ್ಶಿಗಳ ಅನುದಾನ 40,000 ರೂ. ಹಾಗೆಯೇ ಮುಂದುವರಿಯಲಿದೆ.
3,000 ರೂ. ಇದ್ದ ಪ್ರಧಾನಮಂತ್ರಿಗಳ ಭತ್ಯೆ 2,100 ರೂ., ಸಂಪುಟ ಸಚಿವರುಗಳ ಭತ್ಯೆ 2,000 ರೂ. ಗಳಿಂದ 1,400 ರೂ.ಗಳಿಗೆ ಇಳಿಕೆಯಾಗಿದೆ. ರಾಜ್ಯ ಖಾತೆ ಸಚಿವರುಗಳ ಭತ್ಯೆ 1,000 ರೂ. ನಿಂದ 700 ರೂ.ಗಳಿಗೆ ಇಳಿಕೆಯಾಗಿದೆ. ಉಪ ಸಚಿವರುಗಳ ಭತ್ಯೆ 600 ರೂ. ನಿಂದ 420 ರೂ.ಗಳಿಗೆ ಇಳಿದಿದೆ.