– ತಜ್ಞರು, ಅಧಿಕಾರಿಗಳೊಂದಿಗೆ ಸಚಿವ ಡಾ.ಕೆ.ಸುಧಾಕರ್ ಸಭೆ
ಬೆಂಗಳೂರು: ಕೋವಿಡ್ ಪಾಸಿಟಿವ್ ಆದ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಬೇಕೆ. ಮನೆ ಆರೈಕೆಗೆ ಒಳಪಡಬೇಕೆ ಅಥವಾ ಕೋವಿಡ್ ಕೇರ್ ಕೇಂದ್ರಕ್ಕೆ ದಾಖಲಾಗಬೇಕೆ ಎಂದು ಕೂಡಲೇ ನಿರ್ಧರಿಸಲು ಸಾಧ್ಯವಾಗುವಂತಹ ತಂತ್ರಜ್ಞಾನ ಆಧಾರಿತ ಕೇಂದ್ರೀಕೃತ ವ್ಯವಸ್ಥೆ ನಿರ್ಮಿಸಲು ನಿರ್ಧರಿಸಲಾಗಿದೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಹಿರಿಯ ಅಧಿಕಾರಿಗಳು ಮತ್ತು ತಜ್ಞರೊಂದಿಗೆ ಮಂಗಳವಾರ ನಡೆಸಿದ ವೀಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಯಿತು.
Advertisement
Advertisement
ಕೋವಿಡ್ಗೆ ಸಂಬಂಧಿಸಿದಂತೆ ಸರ್ಕಾರ ಬಳಸುತ್ತಿರುವ ಎಲ್ಲ ಆ್ಯಪ್, ತಂತ್ರಜ್ಞಾನಗಳನ್ನು ಒಟ್ಟು ಮಾಡಿ ಕೇಂದ್ರೀಕೃತ ವ್ಯವಸ್ಥೆ ನಿರ್ಮಿಸುವುದರಿಂದ ಕೋವಿಡ್ ರೋಗಿಯು ಎಲ್ಲಿ ದಾಖಲಾಗಬೇಕು ಅಥವಾ ಯಾವ ರೀತಿಯ ಚಿಕಿತ್ಸೆಗೆ ಒಳಪಡಬೇಕು ಎಂಬುದನ್ನು ತಕ್ಷಣ ತೀರ್ಮಾನಿಸಬಹುದು. ಇದರಿಂದಾಗಿ ಚಿಕಿತ್ಸೆ ಪಡೆಯುವಲ್ಲಿನ ಗೊಂದಲ ನಿವಾರಣೆಯಾಗಲಿದೆ ಎಂದು ಸಚಿವರು ಸಭೆಗೆ ಸೂಚಿಸಿದರು.
Advertisement
ಸದ್ಯಕ್ಕೆ ಆಪ್ತಮಿತ್ರ ಸೇರಿದಂತೆ ಹಲವು ಆ್ಯಪ್ಗಳು ಬಳಕೆಯಲ್ಲಿವೆ. ರಾಜ್ಯದಲ್ಲಿ ಕೋವಿಡ್ ಅಂಕಿ ಅಂಶವನ್ನು ನೀಡುವ ಡ್ಯಾಶ್ ಬೋರ್ಡ್ ಕೂಡ ಇದೆ. ಆದರೆ ಡ್ಯಾಶ್ ಬೋರ್ಡ್ ನಲ್ಲಿ ರಿಯಲ್ ಟೈಮ್ನಲ್ಲಿ ಮಾಹಿತಿ ದೊರೆಯುವಂತಾಗಬೇಕು. ಯಾವ ಆಸ್ಪತೆಯಲ್ಲಿ ಎಷ್ಟು ಹಾಸಿಗೆ ಖಾಲಿ ಇದೆ. ಪ್ರತಿ ಆಸ್ಪತ್ರೆಯಲ್ಲಿರುವ ಕೋವಿಡ್ ಮತ್ತು ನಾನ್ ಕೋವಿಡ್ ರೋಗಿಗಳೆಷ್ಟು ಎಂಬುದು ಡ್ಯಾಶ್ ಬೋರ್ಡಿನಲ್ಲಿ ತಿಳಿಯುವಂತಾಗಬೇಕು. ಕೋವಿಡ್ ಖಚಿತಪಟ್ಟ ನಂತರ ವ್ಯಕ್ತಿಯು ದೂರವಾಣಿ ಕರೆ ಮಾಡಿದ ಕೂಡಲೇ ಆಸ್ಪತ್ರೆ ಅಥವಾ ಕೋವಿಡ್ ಕೇರ್ ಕೇಂದ್ರಕ್ಕೆ ದಾಖಲಾಗುವಂತೆ ಸಹಾಯ ದೊರೆಯಬೇಕು. ಇಂತಹ ಕೇಂದ್ರೀಕೃತ ವ್ಯವಸ್ಥೆಯನ್ನು ರಾಜ್ಯದಲ್ಲಿ ತರಬೇಕು ಎಂದು ಸೂಚಿಸಿದರು.
Advertisement
ಹೊಸದೆಹಲಿ ಮತ್ತು ಮಧ್ಯ ಪ್ರದೇಶದಲ್ಲಿ ‘ಸ್ಟೆಪ್ 1’ ಎಂಬ ಸಂಸ್ಥೆ ಯಶಸ್ವಿಯಾಗಿ ಸೇವೆ ನೀಡುತ್ತಿದೆ. ಈ ಸಂಸ್ಥೆ ತನ್ನದೇ ಆದ ವೈದ್ಯ, ನರ್ಸ್ ಮತ್ತು ಅರೆವೈದ್ಯಕೀಯ ಸಿಬ್ಬಂದಿಯನ್ನು ಹೊಂದಿದ್ದು, ಕೋವಿಡ್ ರೋಗಿಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಲಭ್ಯವಾಗುವಂತೆ ಮಾಡುತ್ತಿದೆ. ಈ ಸಂಸ್ಥೆಯಿಂದ ಮಾಹಿತಿ ಪಡೆದುಕೊಂಡು ಆ ಮಾದರಿಯನ್ನು ಕೂಡ ರಾಜ್ಯದಲ್ಲಿ ಅನುಷ್ಠಾನಕ್ಕೆ ತರಬಹುದು ಎಂದು ಸಚಿವ ಡಾ.ಕೆ.ಸುಧಾಕರ್ ಸೂಚಿಸಿದರು.
ನಂತರ ಮಾತನಾಡಿದ ಐಟಿಬಿಟಿ ಇಲಾಖೆಯ ಕಾರ್ಯದರ್ಶಿ ಅಜಯ್ ಸೇಠ್, ಕೇಂದ್ರೀಕೃತ ವ್ಯವಸ್ಥೆಯನ್ನು ಕಲ್ಪಿಸಲು ಶೀಘ್ರದಲ್ಲೇ ಸಭೆ ನಡೆಸಲಾಗುವುದು ಎಂದು ತಿಳಿಸಿದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಸಭೆಯಲ್ಲಿ ಪಾಲ್ಗೊಂಡಿದ್ದರು.
ಇತರೆ ಅಂಶಗಳು:
ಕೊರೊನಾ ರೋಗಿಯ ರೋಗದ ಗಂಭೀರತೆಯನ್ನು ನಿರ್ಧರಿಸಿ ಆತನನ್ನು ಕೋವಿಡ್ ಆರೈಕೆ ಕೇಂದ್ರ ಅಥವಾ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಲಕ್ಷಣ ರಹಿತ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಬಾರದು ಎಂದು ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ಸಭೆಗೆ ವಿವರಿಸಿದರು.
ಕೊರೊನಾ ರೋಗಿಯ ರೋಗದ ಗಂಭೀರತೆಯನ್ನು ಅರಿತು ಅವರನ್ನು ಕೋವಿಡ್ ಆರೈಕೆ ಕೇಂದ್ರ ಅಥವಾ ಆಸ್ಪತ್ರೆಗೆ ದಾಖಲಿಸಲಾಗುವುದು. ರೋಗಿಯನ್ನು ಗೂಗಲ್ ಮ್ಯಾಪ್ ಸಹಾಯದಿಂದಲೇ ಪತ್ತೆ ಮಾಡಿ ಅವರಿರುವಲ್ಲಿಗೆ ವೈದ್ಯರನ್ನು ಕಳುಹಿಸಿ ರೋಗದ ಗಂಭೀರತೆಯನ್ನು ಪರೀಕ್ಷಿಸಲಾಗುವುದು. ನಂತರ ವೈದ್ಯರು ಅವರನ್ನು ಆಸ್ಪತ್ರೆ ಅಥವಾ ಆರೈಕೆ ಕೇಂದ್ರಕ್ಕೆ ದಾಖಲಿಸುವ ಕುರಿತು ನಿರ್ಧರಿಸುತ್ತಾರೆ. ಹೊಸ ಕೇಂದ್ರೀಕೃತ ವ್ಯವಸ್ಥೆಯು ಇದನ್ನು ಒಳಗೊಳ್ಳಲಿದೆ ಎಂದು ಅಧಿಕಾರಿಗಳು ವಿವರಿಸಿದರು.
ರಾಜ್ಯದಲ್ಲಿ ಇಂದು 5,536 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು ಬೆಂಗಳೂರಿನಲ್ಲಿ 1,898 ಪ್ರಕರಣಗಳು ಪತ್ತೆಯಾಗಿವೆ. ಇಂದು ರಾಜ್ಯದಲ್ಲಿ 37,720 ಕೋವಿಡ್ ಪರೀಕ್ಷೆ ನಡೆಸಲಾಗಿದ್ದು ಈವರೆಗೂ ಒಟ್ಟು 12,42,771 ಟೆಸ್ಟ್ ನಡೆಸಲಾಗಿದೆ. ರಾಜ್ಯದಲ್ಲಿ ಇಂದು ಒಟ್ಟು 2,819 ಜನ ಗುಣಮುಖರಾಗಿದ್ದು ಬೆಂಗಳೂರಿನಲ್ಲಿ 572 ಜನ ಗುಣಮುಖ ಹೊಂದಿದ್ದಾರೆ. pic.twitter.com/EwW92ELcbC
— Dr Sudhakar K (@mla_sudhakar) July 28, 2020
ಬೇರೆ ಜಿಲ್ಲೆಗಳಲ್ಲಿ ಕೊರೊನಾ ಪರೀಕ್ಷೆ ಸಂಖ್ಯೆ ಹೆಚ್ಚಿದೆ. ಆದರೆ ಬೆಂಗಳೂರಿನಲ್ಲಿ ಪರೀಕ್ಷೆ ಸಂಖ್ಯೆ ಕಡಿಮೆಯಾಗುತ್ತಿದೆ. ಪರೀಕ್ಷೆ ಸಂಖ್ಯೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಸಚಿವ ಡಾ.ಕೆ.ಸುಧಾಕರ್ ಸೂಚನೆ ನೀಡಿದರು.
ನಿಯಮಗಳ ಕಟ್ಟನಿಟ್ಟು ಪಾಲನೆಗೆ ಸೂಚನೆ:
ಈ ಸಭೆಗೂ ಮುನ್ನ ಖಾಸಗಿ ವೈದ್ಯಕೀಯ ಮೆಡಿಕಲ್ ಕಾಲೇಜುಗಳ ಮುಖ್ಯಸ್ಥರೊಂದಿಗೆ ಸಚಿವ ಡಾ.ಕೆ.ಸುಧಾಕರ್ ಸಭೆ ನಡೆಸಿದರು. ಪ್ರತಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಮೀಸಲಿಡುವ ಸಂಬಂಧ ಇರುವ ನಿಯಮಗಳನ್ನು ಪಾಲಿಸಬೇಕು. ಲಕ್ಷಣ ರಹಿತ ರೋಗಿಗಳನ್ನು (ಎ ಸಿಂಪ್ಟಮ್ಯಾಟಿಕ್) ಆಸ್ಪತ್ರೆಗೆ ಸೇರಿಸದಿರಲು ಕ್ರಮ ವಹಿಸಬೇಕು ಎಂದು ಸಚಿವರು ಸೂಚಿಸಿದರು.