ಕೋಲಾರ: ಬಿಗ್ಬಾಸ್ ಸೀಸನ್ ಏಳರ ಸ್ಪರ್ಧಿ ಚೈತ್ರಾ ಕೊಟ್ಟೂರು ಮದುವೆ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಪೊಲೀಸರು ರಾತ್ರಿ ಎರಡೂ ಕುಟುಂಬ ಮತ್ತು ನವ ದಂಪತಿಯ ವಿಚಾರಣೆ ನಡೆಸಿದ್ದರು. ಎರಡೂ ಕುಟುಂಬದವರಿಗೆ ಕುಳಿತು ಮಾತನಾಡಿ ನಿರ್ಧಾರಕ್ಕೆ ಬರುವಂತೆ ಪೊಲೀಸರು ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಬುಧವಾರದೊಳಗೆ ನಿರ್ಧಾರವನ್ನ ತಿಳಿಸಬೇಕೆಂದು ಪೊಲೀಸರು ನವ ದಂಪತಿಗೆ ಸೂಚಿಸಿದ್ದಾರೆ. ತಡರಾತ್ರಿ ಚೈತ್ರಾ ಅವರನ್ನ ಕೋಲಾರದಲ್ಲಿಯೇ ಬಿಟ್ಟು ನಾಗಾರ್ಜುನ್ ತಮ್ಮ ಪೋಷಕರ ಜೊತೆ ಮಂಡ್ಯಕ್ಕೆ ತೆರಳಿದ್ದಾರೆ. ಸದ್ಯ ಚೈತ್ರಾ ಕೋಲಾರದಲ್ಲಿರುವ ತಮ್ಮ ಮನೆಗೆ ವಾಪಸ್ ಆಗಿದ್ದಾರೆ.
Advertisement
Advertisement
ಬೆಳಗ್ಗೆ ಮದ್ವೆ, ಸಂಜೆ ಪೊಲೀಸ್ ಠಾಣೆ: ಚೈತ್ರಾ ಕೊಟ್ಟೂರು ಹಾಗೂ ನಾಗಾರ್ಜುನ್ ಭಾನುವಾರ ಬೆಂಗಳೂರಿನ ಬ್ಯಾಟರಾಯನಪುರದ ಗಣಪತಿ ದೇವಸ್ಥಾನದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಹಲವು ವರ್ಷಗಳಿಂದ ಚೈತ್ರಾ ಹಾಗೂ ನಾಗರ್ಜುನ್ ಇಬ್ಬರು ಪ್ರೀತಿಸುತ್ತಿದ್ದರು. ಬಳಿಕ ವಿವಾಹವಾಗಿದ್ದಾರೆ ಎನ್ನಲಾಗಿತ್ತು. ಆದ್ರೆ ಸಂಜೆ ವೇಳೆ ಇಬ್ಬರ ಮದುವೆ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು.
Advertisement
Advertisement
ಬಲವಂತದ ಮದುವೆನಾ?: ನಾಗಾರ್ಜುನ್ ಗೆ ಚೈತ್ರಾ ಜೊತೆ ಮದುವೆಯಾಗುವುದು ಇಷ್ಟವಿರಲಿಲ್ಲ. ಸಂಘಟನೆಗಳ ಜೊತೆಗೂಡಿ ಬಲವಂತವಾಗಿ ನಾಗಾರ್ಜುನ್ ಅವರನ್ನ ಕೂಡಿ ಹಾಕಿ ದೇಗುಲದಲ್ಲಿ ವಿವಾಹ ಮಾಡಿಸಲಾಗಿದೆ. ಸಂಘಟನೆಗಳ ಬೆದರಿಕೆಗೆ ಬಗ್ಗಿದ ನಾಗಾರ್ಜುನ್, ಬಲವಂತವಾಗಿ ಚೈತ್ರಾಗೆ ತಾಳಿ ಕಟ್ಟಿದ್ದಾರೆ. ನಾಗಾರ್ಜುನ್ ಸೇರಿ ಮನೆಯವರಿಗೆ ಚೈತ್ರಾ ಜೊತೆ ಮದುವೆ ಇಷ್ಟವಿರಲಿಲ್ಲ ಎಂದು ಕೋಲಾರದ ಕುರುಬರಪೇಟೆಯ ಚೈತ್ರಾ ಮನೆಗೆ ಬಂದು ನಾಗಾರ್ಜುನ್ ಕುಟುಂಬದವರು ತಗಾದೆ ತೆಗೆದಿದ್ದಾರೆ ಎನ್ನಲಾಗಿದೆ.
ಭಾನುವಾರ ರಾತ್ರಿ ನಾಗಾರ್ಜುನ್ ಕುಟುಂಬದವರು ಕೋಲಾರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಾದ ಬಳಿಕ ಚೈತ್ರಾ ಕೊಟ್ಟೂರು ಹಾಗೂ ನಾಗಾರ್ಜುನ್ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಈ ವೇಳೆ ಚೈತ್ರಾ ಜೊತೆ ಮದುವೆ ಇಷ್ಟವಿಲ್ಲ ಎಂದು ನಾಗಾರ್ಜುನ್ ಪಟ್ಟು ಹಿಡಿದಿದ್ದರು. ಆದರೆ ಚೈತ್ರಾ ಕೊಟ್ಟೂರು ಮಾತ್ರ ನನಗೆ ನಾಗಾರ್ಜುನ್ ಇಷ್ಟ, ಅವನ ಜೊತೆಯೇ ಹೋಗುತ್ತೇನೆ ಎಂದು ಬಿಗಿಪಟ್ಟು ಹಿಡಿದಿದ್ದರು ಎಂದು ತಿಳಿದು ಬಂದಿದೆ.