ಚಿಕ್ಕಬಳ್ಳಾಪುರ: ಕೊರೊನಾ ಸೋಂಕಿನಿಂದ ಗುಣಮುಖವಾಗಿ ಮರಳಿ ಕರ್ತವ್ಯಕ್ಕೆ ಹಾಜರಾದ ಪೊಲೀಸ್ ಪೇದೆಗೆ ಚಿಕ್ಕಬಳ್ಳಾಪುರ ಎಸ್ಪಿ ಕಚೇರಿಯಲ್ಲಿ ಹೂ ಮಳೆ ಸ್ವಾಗತ ಕೋರಲಾಯಿತು.
ಚಿಕ್ಕಬಳ್ಳಾಪುರ ಎಸ್ಪಿ ಕಚೇರಿಯ ನಿಸ್ತಂತು ಕೊಠಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮುಖ್ಯ ಪೊಲೀಸ್ ಪೇದೆ ಕೊರೊನಾ ಸೋಂಕಿಗೆ ಗುರಿಯಾಗಿದ್ದ. ಈಗ ಮುಖ್ಯ ಪೊಲೀಸ್ ಪೇದೆಯ ವರದಿ ನೆಗೆಟಿವ್ ಬಂದಿದ್ದು, ಪೇದೆಯನ್ನು ಸಂಭ್ರಮದಿಂದ ಕರ್ತವ್ಯಕ್ಕೆ ಬರ ಮಾಡಿಕೊಳ್ಳಲಾಯಿತು. ಸ್ವತಃ ಕೇಂದ್ರ ವಲಯ ಐಜಿಪಿ ಶರತ್ ಚಂದ್ರ ಮಾಲೆ ಹಾಕಿ ಸಹೋದ್ಯೋಗಿಗಳೆಲ್ಲ ಪುಷ್ಪವೃಷ್ಠಿ ಸುರಿಸುವ ಮೂಲಕ ತಮ್ಮ ಸಹೋದ್ಯೋಗಿಯನ್ನು ಎಸ್ಪಿ ಕಚೇರಿಗೆ ಬರಮಾಡಿಕೊಂಡರು.
Advertisement
Advertisement
ಪೇದೆಗೆ ಸೋಂಕು ತಗುಲಿದ್ದರಿಂದ ಪೊಲೀಸರು ಸಹ ಆತಂಕಗೊಂಡಿದ್ದರು. ಈ ಪೊಲೀಸ್ ಪೇದೆಯ ಸಂಪರ್ಕಿತರಾಗಿದ್ದ ಕಚೇರಿಯ ಇತರೆ ಪೊಲೀಸರನ್ನು ಸಹ ಕ್ವಾರಂಟೈನ್ ಮಾಡಲಾಗಿತ್ತು, ಅವರ ವರದಿ ಸಹ ನೆಗಟಿವ್ ಆಗಿತ್ತು. ಸದ್ಯ ಮುಖ್ಯ ಪೇದೆ ಕೊರೊನಾ ಗೆದ್ದು ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದು, ಜಿಲ್ಲೆಯ ಎಲ್ಲ ಪೊಲೀಸರು ನಿರಾಳರಾಗುವಂತೆ ಮಾಡಿದೆ. ಎಸ್ಪಿ ಮಿಥುನ್ ಕುಮಾರ್ ಸಹ ಸಂತಸ ವ್ಯಕ್ತಪಡಿಸಿ, ಎಲ್ಲ ಪೊಲೀಸರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದ್ದಾರೆ.