– ಸೇತುವೆ ದಾಟಲು ಏಣಿ ನಿರ್ಮಿಸಿಕೊಂಡ ಗ್ರಾಮಸ್ಥರು
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬೊಗರಿಬೈಲದಲ್ಲಿ ಅಘನಾಶಿನಿ ನದಿ ಸೇತುವೆಯ ಎರಡೂ ಬದಿ ಸಂಪರ್ಕಕ್ಕೆ ಸ್ಥಳೀಯರೇ ಅಡಿಕೆ ಮರ, ಕಟ್ಟಿಗೆ ಕಂಬ ಬಳಸಿ, ಶ್ರಮದಾನದ ಮೂಲಕ ಏಣಿ ನಿರ್ಮಿಸಿಕೊಂಡಿದ್ದಾರೆ. ಈ ಮೂಲಕ ಸೇತುವೆ ಮೇಲೆ ಓಡಾಡಲು ಅನುಕೂಲ ಕಲ್ಪಿಸಿಕೊಂಡಿದ್ದಾರೆ.
Advertisement
ಬೊಗರಿಬೈಲ, ಉಪ್ಪಿನಪಟ್ಟಣ ಧಕ್ಕೆ ನಡುವೆ ಸುಮಾರು 17 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗಿದೆ. ಆದರೆ ಎರಡೂ ಬದಿಗೆ ರಸ್ತೆ ಸಂಪರ್ಕಿಸುವ ಕೆಲಸ ಮಾತ್ರ ಮೂರು ವರ್ಷಗಳಿದಿಂದ ಬಾಕಿ ಉಳಿದಿದೆ.
Advertisement
ಸಿದ್ದಾಪುರ, ಹೊನ್ನಾವರ ಸಂಪರ್ಕ ರಸ್ತೆ
ಬ್ರಿಟಿಷರ ಕಾಲದಲ್ಲಿ ಎತ್ತಿನಗಾಡಿ ಓಡಾಡಿದ ಹೊನ್ನಾವರದ ಕತಗಾಲ ರಸ್ತೆಯನ್ನು ಈ ಸೇತುವೆ ಸಂಪರ್ಕಿಸುತ್ತದೆ. ಎರಡೂ ಕಡೆ ಮೂರು ಗ್ರಾಮ ಪಂಚಾಯಿತಿಗಳ ಹತ್ತಾರು ಊರುಗಳ ಸಂಪರ್ಕಕ್ಕೆ ಅತೀ ಸಮೀಪದ ಮಾರ್ಗ ಇದಾಗಿದೆ.
Advertisement
Advertisement
ಈ ಊರಿನ ರಸ್ತೆಯು ಸಿದ್ದಾಪುರ, ಹೊನ್ನಾವರ ತಾಲೂಕನ್ನು ಸಂಪರ್ಕಿಸುತ್ತದೆ. ವಾಹನ ಸವಾರರಿಗೆ ಇಂಧನ ಉಳಿಸುವ ಈ ರಸ್ತೆ ಎರಡು ತಾಲೂಕನ್ನು ಸಂಪರ್ಕಿಸುವ ರಸ್ತೆಯಾಗಿದೆ. ಈ ಭಾಗದಲ್ಲಿ ಸೇತುವೆ ನಿರ್ಮಾಣಕ್ಕೂ ಮೊದಲು ನದಿಯ ಎರಡೂ ಕಡೆ ಜನರ ಓಡಾಟಕ್ಕೆ ಪಾತಿ ದೋಣಿಗಳ ಬಳಕೆ ಇತ್ತು. ಬೇರೆ ಊರಿನ ಜನ ಇಲ್ಲಿ ದೋಣಿ ಬಳಸುತ್ತಿದ್ದರು. ಎರಡು ವರ್ಷಗಳಿಂದ ದೋಣಿ ಹಾಳಾಗಿದೆ. ಹಾಳಾದ ದೋಣಿಯಲ್ಲಿ ಮಳೆಗಾಲದ ಪ್ರವಾಹದಲ್ಲಿ ನದಿ ದಾಟುವುದು ಅಪಾಯಕಾರಿ.
ಕುಮಟಾ ಶಾಸಕ ದಿನಕರ್ ಶಟ್ಟಿ ಸೇರಿದಂತೆ ಜಿಲ್ಲಾಧಿಕಾರಿಗಳಿಗೂ ಇಲ್ಲಿನ ಸಮಸ್ಯೆ ಕುರಿತು ಮನವಿ ಸಹ ನೀಡಲಾಗಿದೆ. ಆದರೆ ಮೂರು ವರ್ಷಗಳು ಗತಿಸಿದರೂ ಊರಿಗೆ ಸೇತುವೆ ಸಂಪರ್ಕ ಕನಸಾಗಿ ಉಳಿದಿದೆ. ಹೀಗಾಗಿ ಗ್ರಾಮಸ್ಥರು ಸೇರಿ ಇದೀಗ ಎರಡು ದಿನ ಶ್ರಮದಾನ ಮಾಡುವ ಮೂಲಕ ಸೇತುವೆಗೆ ಏಣಿ ರೂಪದಲ್ಲಿ ಸಂಪರ್ಕ ಕಲ್ಪಿಸಿದ್ದಾರೆ.
ಸದ್ಯ ಮಳೆಗಾಲ ಪ್ರಾರಂಭವಾದ್ದರಿಂದ ಈ ಭಾಗದಲ್ಲಿ ಓಡಾಡುವುದು ಸ್ಥಳೀಯ ಜನರಿಗೆ ಕಷ್ಟಸಾಧ್ಯವಾಗಿದೆ. ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ವಾದರೂ ಇಲ್ಲಿನ ಜನರ ದಿನನಿತ್ಯದ ಗೋಳು ಮಾತ್ರ ಜನಪ್ರತಿನಿಧಿಗಳ, ಅಧಿಕಾರಿಗಳ ನಿರ್ಲಕ್ಷದಿಂದ ಬದಲಾಗಿಲ್ಲ.