ನವದೆಹಲಿ: ಐಪಿಎಲ್-2020ರ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮುಂದಿನ ವಾರದಲ್ಲಿ ಐಪಿಎಲ್ ಹಂಗಾಮ ಶುರುವಾಗಲಿದೆ. ಈ ಚುಟುಕು ಪಂದ್ಯಗಳಲ್ಲಿ ಆ ಆವೃತ್ತಿಯಲ್ಲಿ ಹೆಚ್ಚು ರನ್ ಗಳಿಸಿದವರಿಗೆ ಆರೆಂಜ್ ಕ್ಯಾಪ್ ಮತ್ತು ಹೆಚ್ಚು ವಿಕೆಟ್ ಗಬಳಿಸಿದ ಬೌಲರ್ ಗೆ ಪರ್ಪಲ್ ಕ್ಯಾಪ್ ನೀಡಲಾಗುತ್ತದೆ. ಹೆಚ್ಚು ಆರೆಂಜ್ ಕ್ಯಾಪ್ ಅನ್ನು ಆಸೀಸ್ ನ ಸ್ಫೋಟಕ ಬ್ಯಾಟ್ಸ್ ಮ್ಯಾನ್ ಡೇವಿಡ್ ವಾರ್ನರ್ ಅವರು ಗೆದ್ದಿದ್ದಾರೆ.
ಆರೆಂಜ್ ಕ್ಯಾಪ್ ಸ್ಪರ್ಧೆಯಲ್ಲಿ ಆಸೀಸ್ ಆಟಗಾರರೇ ಮೇಲುಗೈ ಸಾಧಿಸಿದ್ದಾರೆ. ಡೇವಿಡ್ ವಾರ್ನರ್ ಮೂರು ಬಾರಿ ಕ್ಯಾಪ್ ಗೆದ್ದುಕೊಂಡರೆ, ಶಾನ್ ಮಾರ್ಷ್, ಮೈಕ್ ಹಸ್ಸಿ, ಮ್ಯಾಥ್ಯೂ ಹೇಡನ್ ತಲ ಒಂದು ಬಾರಿ ಆರೆಂಜ್ ಕ್ಯಾಪ್ ಗೆದ್ದುಕೊಂಡಿದ್ದಾರೆ. ಈ ಆರೆಂಜ್ ಕ್ಯಾಪ್ ಸ್ಪರ್ಧೆಯಲ್ಲಿ ಭಾರತೀಯ ಆಟಗಾರ ವಿರಾಟ್ ಕೊಹ್ಲಿ ದಾಖಲೆ ಬರೆದಿದ್ದು, ಆರೆಂಜ್ ಕ್ಯಾಪ್ ಪಡೆದವರ ಪಟ್ಟಿಯಲ್ಲಿ ಅತೀ ಹೆಚ್ಚು ರನ್ (973) ಭಾರಿಸಿ ದಾಖಲೆ ನಿರ್ಮಿಸಿದ್ದಾರೆ.
Advertisement
Advertisement
1. 2008ರಲ್ಲಿ ಮೊದಲ ಬಾರಿಗೆ ಐಪಿಎಲ್ ಆರಂಭವಾಗಿತ್ತು. ಈ ಚೊಚ್ಚಲ ಐಪಿಎಲ್ ಟ್ರೋಫಿಯನ್ನು ರಾಜಸ್ಥಾನ್ ರಾಯಲ್ಸ್ ತಂಡ ಗೆದ್ದುಕೊಂಡಿತ್ತು. ಆದರೆ ಈ ಆವೃತ್ತಿಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಆಡಿದ್ದ ಆಸ್ಟ್ರೇಲಿಯಾದ ಶಾನ್ ಮಾರ್ಷ್ ಆರೆಂಜ್ ಕ್ಯಾಪ್ ವಿನ್ ಆಗಿದ್ದರು. ಇವರು ಟೂರ್ನಿಯಲ್ಲಿ ಒಟ್ಟು 616 ರನ್ ಸಿಡಿಸಿದ್ದರು.
Advertisement
Advertisement
2. 2009ರ ಐಪಿಎಲ್ ಟ್ರೋಫಿಯನ್ನು ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ತಂಡ ಗೆದ್ದುಕೊಂಡಿತ್ತು. ಆಗ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡುತ್ತಿದ್ದ ದೈತ್ಯ ಆರಂಭಿಕ ಬ್ಯಾಟ್ಸ್ ಮ್ಯಾನ್ ಮ್ಯೂಥ್ಯೂ ಹೇಡನ್ ಅವರು ಆರೆಂಜ್ ಕ್ಯಾಪ್ ಗೆದ್ದಿದ್ದರು. ಹೇಡನ್ ಆ ಟೂರ್ನಿಯಲ್ಲಿ ಒಟ್ಟು 572 ರನ್ ಭಾರಿಸಿದ್ದರು.
3. 2010ರ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಪ್ ಗೆದ್ದಿತ್ತು. ಆದರೆ ಅಂದು ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿದ್ದ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರು ಆರೆಂಜ್ ಕ್ಯಾಪ್ ಗೆದ್ದುಕೊಂಡಿದ್ದರು. ಈ ಮೂಲಕ ಆರೆಂಜ್ ಕ್ಯಾಪ್ ಗೆದ್ದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡಿದ್ದರು. ಇವರು ಟೂರ್ನಿಯಲ್ಲಿ ಒಟ್ಟು 618 ರನ್ ಗಳಿಸಿದ್ದರು.
4. 2011ರ ಐಪಿಎಲ್ನಲ್ಲಿ ಮತ್ತೆ ಎರಡನೇ ಬಾರಿಗೆ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ ಆಗಿತ್ತು. ಆದರೆ ಅಂದಿನ ಅವೃತ್ತಿಯಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ರಿಸ್ ಗೇಲ್ ಆರೆಂಜ್ ಕ್ಯಾಪ್ ಗೆದ್ದುಕೊಂಡಿದ್ದರು. ಅಂದು ಗೇಲ್ ಟೂರ್ನಿಯಲ್ಲಿ 608 ರನ್ ಚಚ್ಚಿದ್ದರು.
5. 2012 ಐಪಿಎಲ್ನಲ್ಲಿ ಮೊದಲ ಬಾರಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಟ್ರೋಫಿಯನ್ನು ಗೆದ್ದುಕೊಂಡಿತ್ತು. ಆದರೆ ತನ್ನ ಅಬ್ಬರದ ಬ್ಯಾಟಿಂಗ್ ಮುಂದುವರಿಸಿದ್ದ ಗೇಲ್ ಅಂದು ಕೂಡ ಸತತ ಎರಡನೇ ಬಾರಿಗೆ ಆರೆಂಜ್ ಕ್ಯಾಪ್ ಗೆದ್ದುಕೊಂಡಿದ್ದರು. ಅಂದು ಅವರು ಬರೋಬ್ಬರಿ 733 ರನ್ ಸಿಡಿಸಿದ್ದರು.
6. 2013ರ ಐಪಿಎಲ್ನಲ್ಲಿ ಮೊದಲ ಬಾರಿಗೆ ಮುಂಬೈ ಇಂಡಿಯನ್ಸ್ ತಂಡ ಟ್ರೋಫಿಯನ್ನು ಗೆದ್ದುಕೊಂಡಿತ್ತು. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಬ್ಯಾಟ್ಸ್ ಮ್ಯಾನ್ ಮೈಕ್ ಹಸ್ಸಿಯವರು ಆರೆಂಜ್ ಕ್ಯಾಪ್ ವಿನ್ನರ್ ಆಗಿದ್ದರು. ಇವರು 16 ಪಂದ್ಯಗಳನ್ನಾಡಿ 733 ರನ್ ಬಾರಿಸಿದ್ದರು.
7. 2014ರಲ್ಲಿ ಮತ್ತೆ ಎರಡನೇ ಬಾರಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ಟ್ರೋಫಿಯನ್ನು ಗೆದ್ದುಕೊಂಡಿತ್ತು. ಈ ವೇಳೆ ಇದೇ ತಂಡದಲ್ಲಿ ಆರಂಭಿಕ ಬ್ಯಾಟ್ಸ್ ಮ್ಯಾನ್ ಆಗಿ ಮಿಂಚಿದ್ದ ಕನ್ನಡಿಗ ರಾಬಿನ್ ಉತ್ತಪ್ಪ ಅವರು ಆರೆಂಜ್ ಕ್ಯಾಪ್ ತನ್ನದಾಗಿಸಿಕೊಂಡಿದ್ದರು. ಅಂದು ಭರ್ಜರಿಯಾಗಿ ಬ್ಯಾಟ್ ಬೀಸಿದ್ದ ಉತ್ತಪ್ಪ 660 ರನ್ ಗಳಿಸಿದ್ದರು.
8. 2015 ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಎರಡನೇ ಬಾರಿಗೆ ಚಾಂಪಿಯನ್ ಆಗಿತ್ತು. ಈ ವೇಳೆ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಆಡುತ್ತಿದ್ದ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ ಮ್ಯಾನ್ ಡೇವಿಡ್ ವಾರ್ನರ್ ಅವರು ಆರೆಂಜ್ ಕ್ಯಾಪ್ ಗೆದ್ದು ಬೀಗಿದ್ದರು. ಅವರು ಅಂದಿನ ಟೂರ್ನಿಯಲ್ಲಿ ಒಟ್ಟು 562 ರನ್ ಗಳಿಸಿದ್ದರು.
9. 2016ರ ಐಪಿಎಲ್ ಟೂರ್ನಿಯಲ್ಲಿ ಮೊದಲ ಬಾರಿಗೆ ಸನ್ ರೈಸರ್ಸ್ ಹೈದರಾಬಾದ್ ಟ್ರೋಫಿ ಎತ್ತಿ ಹಿಡಿದಿತ್ತು. ಆದರೆ ಆ ಟೂರ್ನಿಯಲ್ಲಿ ದಾಖಲೆ ಬರೆದಿದ್ದ ಭಾರತದ ನಾಯಕ ಕಿಂಗ್ ಕೊಹ್ಲಿ, ಶತಕಗಳ ಮೇಲೆ ಶತಕ ಸಿಡಿಸಿ ಆರೆಂಜ್ ಕ್ಯಾಪ್ ತನ್ನದಾಗಿಸಿಕೊಂಡಿದ್ದರು. ಒಟ್ಟು 16 ಪಂದ್ಯಗಳನ್ನಾಡಿ ದಾಖಲೆಯ 973 ರನ್ ಸಿಡಿಸಿದ್ದರು. ಈ ಮೂಲಕ ಐಪಿಎಲ್ನ ಒಂದೇ ಆವೃತ್ತಿಯಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ಆಟಗಾರ ಎಂಬ ದಾಖಲೆ ಬರೆದಿದ್ದರು.
10. 2017ರ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಮೂರನೇ ಬಾರಿಗೆ ಚಾಂಪಿಯನ್ ಆಗಿ ದಾಖಲೆ ಬರೆದಿತ್ತು. ಅಂದಿನ ಈ ಆವೃತ್ತಿಯಲ್ಲಿ ಮತ್ತೆ ಎರಡನೇ ಬಾರಿಗೆ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಅವರು ಆರೆಂಜ್ ಕ್ಯಾಪ್ ಗೆದ್ದುಕೊಂಡಿದ್ದರು.
11. 2018 ಐಪಿಎಲ್ನಲ್ಲಿ ಮೂರನೇ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಾಪಿಂಯನ್ ಆಗಿತ್ತು. ಈ ಟೂನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ನಾಯಕನಾಗಿದ್ದ ಕೀವೀಸ್ ಆಟಗಾರ ಕೇನ್ ವಿಲಿಯಮ್ಸನ್ ಅರೆಂಜ್ ಕ್ಯಾಪ್ ಗೆದ್ದುಕೊಂಡಿದ್ದರು. ಅಂದು ಅವರು ಬರೋಬ್ಬರಿ 735 ರನ್ ಕಬಳಿಸಿದ್ದರು.
12. ಕಳೆದ ವರ್ಷ ನಡೆದ 2019ರ ಐಪಿಎಲ್ ಟೂರ್ನಿಯಲ್ಲಿ ನಾಲ್ಕನೇ ಬಾರಿಗೆ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಟ್ರೋಫಿಗೆ ಮತ್ತಿಕ್ಕಿತ್ತು. ಈ ಟೂರ್ನಿಯಲ್ಲಿ ಡೇವಿಡ್ ವಾರ್ನರ್ ಅವರು ಆರೆಂಜ್ ಕ್ಯಾಪ್ ಗೆಲ್ಲುವ ಮೂಲಕ, ಮೂರನೇ ಬಾರಿ ಆರೆಂಜ್ ಕ್ಯಾಪ್ ಗೆದ್ದ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಈ ಆವೃತ್ತಿಲ್ಲಿ ವಾರ್ನರ್ 691 ರನ್ ಸಿಡಿಸಿದ್ದರು.