ಗದಗ: ಕೊರೊನಾ ಶಂಕೆ ಇರುವ ಮೃತ ವ್ಯಕ್ತಿಯ ಶವ ಊರೊಳಗೆ ತರದಂತೆ ಸ್ಥಳೀಯರು ತಾಕೀತು ಮಾಡಿರುವ ಘಟನೆ ಜಿಲ್ಲೆಯ ರೋಣ ತಾಲೂಕಿನ ಬಾಸಲಾಪೂರದಲ್ಲಿ ನಡೆದಿದೆ.
ಗ್ರಾಮದ 62 ವರ್ಷದ ನಿವೃತ ಪೊಲೀಸ್ ಸಿಬ್ಬಂದಿಯೋರ್ವ ಬಾದಾಮಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ತಡರಾತ್ರಿ ಸಾವನ್ನಪ್ಪಿದ್ದಾರೆ. ಆದ್ರೆ ಕೊರೊನಾ ರಿಪೋರ್ಟ್ ಬರುವುದು ತಡವಾಗಿದೆ. ಆದರೆ ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಮಾತ್ರ ಕೋವಿಡ್ನ ಯಾವುದೇ ನಿಯಮ ಪಾಲಿಸದೆ, ಶವ ಹಸ್ತಾಂತರಿಸಿದ್ದಾರೆ. ಶವವನ್ನು ಹಾಸಿಗೆ ಹಾಗೂ ಹೊದಿಕೆಯಲ್ಲಿ ಸುತ್ತಿ ಹಾಗೇ ಕೊಟ್ಟಿದ್ದಾರೆ.
ಖಾಸಗಿ ಆಸ್ಪತ್ರೆಯ ಎಡವಟ್ಟು ನಿಂದ ಕುಟುಂಬಸ್ಥರು ಶವ ಊರಲ್ಲಿರುವ ಮನೆ ಬಳಿ ತರುವ ಪ್ರಯತ್ನ ಮಾಡಿದ್ದಾರೆ. ಇದಕ್ಕೆ ಗ್ರಾಮಸ್ಥರು ಅಡ್ಡಿಪಡಿಸಿದ್ದಾರೆ. ಅಂತ್ಯ ಸಂಸ್ಕಾರಕ್ಕೆಂದು ಬಂದ ಕುಟುಂಬಸ್ಥರಿಗೆ ಗ್ರಾಮಸ್ಥರು ಗ್ರಾಮದೊಳಗೆ ಬಿಡುತ್ತಿಲ್ಲ. ಅಂಬುಲೆನ್ಸ್ನಲ್ಲಿ ಬಂದ ಶವ ಊರಾಚೆ ಗಂಟೆಗಟ್ಟಲೆ ಕಾದಿದ್ದಾರೆ.
ರಸ್ತೆಯಲ್ಲಿಯೇ ಶವದ ಜೊತೆಗೆ ಕುಟುಂಬಸ್ಥರು ಕಣ್ಣೀರು ಹಾಕುವಂತಾಯಿತು. ಇಂದಲ್ಲಾ ನಾಳೆ ರಿಪೋರ್ಟ್ ಬರಬಹುದು. ಆದರೆ ಕೊರೊನಾ ಎಲ್ಲಾ ಲಕ್ಷಣಗಳು ಇರುವುದರಿಂದ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ನಡೆಸಲು ಬಿಡೋದಿಲ್ಲ ಎಂದು ಸ್ಥಳಿಯರು ಪಟ್ಟು ಹಿಡಿದಿದ್ದಾರೆ. ನಂತರ ಸ್ಥಳಕ್ಕೆ ಪಿಡಿಓ, ಆರ್.ಐ ಹಾಗೂ ಪೊಲೀಸ್ ಸಿಬ್ಬಂದಿಗಳು ಆಗಮಿಸಿ ಪರಸ್ಥಿತಿ ತಿಳಿಗೊಳಿಸಿದರು. ಅಧಿಕಾರಿಗಳ ಸಮ್ಮುಖದಲ್ಲಿ ಕೋವಿಡ್ ನಿಯಮಗಳ ಪ್ರಕಾರ ಊರಾಚೆ ಅವರ ಜಮೀನಿನಲ್ಲಿಯೇ ಅಂತ್ಯಕ್ರಿಯೆ ಮಾಡಿದ್ದಾರೆ.