ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾಗರಿಕರ ರೋಗನಿರೋಧಕ ಶಕ್ತಿ ಹೆಚ್ಚಿಸುವ ಸಲುವಾಗಿ ಆಯುರ್ವೇದ ಕಿಟ್ ವಿತರಣೆ ಮಾಡುತ್ತಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಇಂದು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ 85 ಸಾವಿರ ಮನೆಗಳಿದ್ದು, ಸುಮಾರು 4 ಲಕ್ಷ ಜನರಿಗೆ ಆಯುರ್ವೇದ ಕಿಟ್ ವಿತರಣೆ ಮಾಡಲು ಉದ್ದೇಶಿಸಲಾಗಿದೆ. ಇದೇ 29 ರಂದು ಕಿಟ್ ವಿತರಣಾ ಕಾರ್ಯಕ್ಕೆ ಆಯುರ್ವೇದ ತಜ್ಞ ಡಾ.ಗಿರಿಧರ್ ಕಜೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
Advertisement
Advertisement
ಆಯುರ್ವೇದ ಕಿಟ್ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಾಗಿದ್ದು, ಯಾರ ಬಳಿ ಆದರೂ ಆಧಾರ್ ಕಾರ್ಡ್ ಇಲ್ಲದಿದ್ದರೆ ಅದನ್ನು ಮಾಡಿಕೊಡುತ್ತೇವೆ. ಜುಲೈ 29 ರಿಂದ ಆಯುರ್ವೇದ ಕಿಟ್ ವಿತರಣೆ ಮಾಡುವ ಕಾರ್ಯ ಆರಂಭವಾಗಲಿದೆ. ಒಮ್ಮೆಗೆ 4 ಲಕ್ಷ ಕಿಟ್ ನೀಡುವುದು ಕಷ್ಟ ಎಂದು ಹೇಳಿದ ಹಿನ್ನೆಲೆಯಲ್ಲಿ ವಾರ್ಡ್ ಹಂತದಲ್ಲಿ ವಿತರಣೆ ಕಾರ್ಯ ಮಾಡಲಿದ್ದೇವೆ. ಈ ಕಾರ್ಯಕ್ರಮ ದೇಶದಲ್ಲೇ ಮೊದಲು ಎಂದು ಭಾವಿಸಿದ್ದೇನೆ. ಪ್ರತಿ ಕಿಟ್ ಬೆಲೆ 380 ರೂ. ಇದ್ದು, ನಮ್ಮ ಮನವಿ ಮೇರೆಗೆ ಕೇವಲ 100 ರೂ.ಗೆ ನೀಡಲಾಗುತ್ತಿದೆ ಎಂದು ವಿವರಿಸಿದರು.