ಕೊಲ್ಲಂ: ಇಡೀ ವಿಶ್ವವೇ ಕೊರೊನಾ ತೊಲಗಲಿ ಎಂದು ಬಯಸುತ್ತಿದ್ದರೆ ಕೇರಳ ರಾಜ್ಯದಲ್ಲೊಂದು ಕಡೆ ಮಾತ್ರ ಜನ ‘ಕೊರೊನಾಗೆ ಜೈ’, ‘ಕೊರೊನಾ ಗೆಲ್ಲಿಸಿ’ ಎಂದು ಜೈಕಾರ ಹಾಕುತ್ತಿದ್ದಾರೆ. ಈ ಜನರಿಗೇನಾಗಿದೆ. ನಾವೆಲ್ಲಾ ಸಾಕಪ್ಪಾ ಸಾಕು ಕೊರೊನಾ ಸಹವಾಸ ಅಂತಾ ಇದ್ರೆ, ಇವರು ಮಾತ್ರ ಸುಮ್ಮನೇ ಇರುತ್ತಿಲ್ಲ. ಅಷ್ಟಕ್ಕೂ ಇವರು ಯಾಕೆ ಕೊರೊನಾಗೆ ಜೈ ಅನ್ನುತ್ತಿದ್ದಾರೆ ಅನ್ನೋದು ನಿಮ್ಮ ಕುತೂಹಲವಾಗಿದ್ದರೆ ಈ ಸುದ್ದಿ ಮುಂದಕ್ಕೆ ಓದಿ.
ಕೇರಳದಲ್ಲೀಗ ಪಂಚಾಯತ್ ಚುನಾವಣೆಯ ಸೀಸನ್. ಡಿಸೆಂಬರ್ 8ರಿಂದ 14ರ ನಡುವೆ 3 ಹಂತಗಳಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಯ ಹೆಸರು ಕೊರೊನಾ ಥಾಮಸ್. ವಯಸ್ಸು 24. ಕೊಲ್ಲಂ ನಗರ ಪಾಲಿಕೆಯ ಮದಿಲಿಲ್ ವಾರ್ಡ್ ನ ಬಿಜೆಪಿ ಅಭ್ಯರ್ಥಿಯಾಗಿ ಕೊರೊನಾ ಸ್ಪರ್ಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚುನಾವಣೆ ಪ್ರಚಾರಕ್ಕಾಗಿ ಕಾರ್ಯಕರ್ತರು ಕೊರೊನಾಗೆ ಜೈ ಎನ್ನುತ್ತಿದ್ದಾರೆ.
ಕೊರೊನಾಳಿಗೂ ಬಂದಿತ್ತು ಕೊರೊನಾ ಸೋಂಕು!: ಕೊರೊನಾ ಎಂಬ ಹೆಸರಿದ್ದರೂ ಕೊರೊನಾ ಸೋಂಕು ತಡೆಯಲು ಈ ಕೊರೊನಾಗೆ ಸಾಧ್ಯವಾಗಿರಲಿಲ್ಲ. ಕಳೆದ ಅಕ್ಟೋಬರ್ ನಲ್ಲಿ ಕೊರೊನಾಗೆ ಕೋವಿಡ್ 19 ಸೋಂಕು ತಗುಲಿತ್ತು. ಈ ವೇಳೆ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆಗಲೂ ಕೊರೊನಾಗೆ ಬಂದ ಕೊರೊನಾ ವಿಚಾರ ಸುದ್ದಿಯಾಗಿತ್ತು. ಸದ್ಯ ತಾಯಿ ಮಗು ಆರಾಮಾಗಿದ್ದು, ಕೊರೊನಾ ಚುನಾವಣೆಗೆ ರೆಡಿಯಾಗುತ್ತಿದ್ದಾರೆ.
ಬಿಜೆಪಿ ಕಾರ್ಯಕರ್ತ ಜಿನು ಸುರೇಶ್ ಎಂಬವರನ್ನು ಮದುವೆಯಾಗಿರುವ ಕೊರೊನಾಗೆ ರಾಜಕೀಯ ಹೊಸದು. ಸುರೇಶ್ರನ್ನು ಮದುವೆಯಾದ ಬಳಿಕ ನನಗೆ ರಾಜಕೀಯದಲ್ಲಿ ಆಸಕ್ತಿ ಮೂಡಿತು. ಅಲ್ಲಿಯವರೆಗೆ ನನಗೆ ರಾಜಕೀಯದ ಬಗ್ಗೆ ಆಸಕ್ತಿ ಇರಲಿಲ್ಲ. ಮಗು ಹುಟ್ಟಿದ ಮೇಲೆ ಮನೆಗೆ ವಾಪಸ್ ಬಂದ ಮೇಲೆ ನನಗೆ ಬಿಜೆಪಿ ಟಿಕೆಟ್ ಆಫರ್ ಕೊಟ್ಟಿತ್ತು. ಮನೆಯವರ ಸಹಕಾರದಿಂದಾಗಿ ನಾನು ಈ ಆಫರ್ ಸ್ವೀಕರಿಸಿದೆ ಎಂದು ಕೊರೊನಾ ಥಾಮಸ್ ಹೇಳುತ್ತಾರೆ.
ಕಳೆದ ಬಾರಿಯ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಇಲ್ಲಿ ಎರಡನೇ ಸ್ಥಾನಕ್ಕೆ ತಲುಪಿತ್ತು. ಆರಂಭದಲ್ಲಿ ನನ್ನ ಹೆಸರು ಕೇಳಿ ಅಚ್ಚರಿ ವ್ಯಕ್ತಪಡಿಸುತ್ತಿದ್ದರು. ಅವರಿಗೆಲ್ಲಾ ನಾನು, ನಿಮಗೆ ಕೊರೊನಾ ಈಗಷ್ಟೇ ಗೊತ್ತು. ನನಗೆ ನನ್ನ ಅಪ್ಪ 24 ವರ್ಷದ ಹಿಂದೆಯೇ ಕೊರೊನಾ ಎಂದು ಹೆಸರಿಟ್ಟಿದ್ದರು ಎಂದು ಹೇಳುತ್ತಿದ್ದೆ. ಈಗ ಅವರೆಲ್ಲರೂ ನನಗೆ ಬೆಂಬಲ ನೀಡುತ್ತಿದ್ದು, ಇದು ನನಗೆ ಮತವಾಗಿ ಪರಿವರ್ತನೆಯಾಗಿ ನಾನು ಗೆಲ್ಲುತ್ತೇನೆ ಎಂಬ ತುಂಬು ವಿಶ್ವಾಸದಲ್ಲಿದ್ದಾರೆ ಕೊರೊನಾ ಥಾಮಸ್.
ನಮ್ಮಪ್ಪನಿಗೆ ನಾವು ಅವಳಿ ಜವಳಿ ಮಕ್ಕಳು. ನನಗಿಂತ 20 ನಿಮಿಷ ಮೊದಲು ಬಂದ ಗಂಡುವಿಗೆ ಅಪ್ಪ ಕೋರಲ್ ಎಂದು ಹೆಸರಿಟ್ಟರೆ ನನಗೆ ಕೊರೊನಾ ಎಂದು ಹೆಸರಿಟ್ಟರು. ಇಷ್ಟು ವರ್ಷ ನನಗೆ ಕೊರೊನಾ ಎಂಬ ಹೆಸರಿದ್ದರೂ ಯಾವುದೇ ಸಮಸ್ಯೆಯಾಗಿರಲಿಲ್ಲ. ಆದರೆ ಈ ವರ್ಷ ಕೊರೊನಾ ಬಂದ ಮೇಲೆ ಎಲ್ಲರೂ ನನ್ನನ್ನು ವಿಚಿತ್ರವಾಗಿ ನೋಡುತ್ತಿದ್ದಾರೆ. ಈಗಾಗಲೇ ನಾನು ಕೊರೊನಾ ಗೆದ್ದಿರುವುದರಿಂದ ಈ ಚುನಾವಣೆಯನ್ನು ಗೆಲ್ಲುವುದಾಗಿ ಕೊರೊನಾ ಹೇಳುತ್ತಾರೆ.