ಮಂಗಳೂರು: ಪುತ್ತೂರು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಅಡುಗೆ ಸಹಾಯಕಿಯಾಗಿದ್ದ ಮಹಿಳೆಗೆ ಕೋವಿಡ್ ಸೋಂಕು ತಗುಲಿ ಜೀವನ ಸಾಗಿಸುವುದೇ ಕಷ್ಟವಾಗಿದ್ದಾಗ ಪಬ್ಲಿಕ್ ಟಿವಿಯ ಮನೆಯೇ ಮಂತ್ರಾಲಯ ಕಾರ್ಯಕ್ರಮ ಕುಟುಂಬಕ್ಕೆ ನೆರವಾಗಲು ಸಹಕಾರಿಯಾಗಿದೆ.
ಪುತ್ತೂರು ತಾಲೂಕಿನ ಶಾಂತಿಗೋಡು ನಿವಾಸಿಯಾಗಿರುವ ಬಡ ಮಹಿಳೆಯ ಪುತ್ರಿ ಉಷಾ ಪಬ್ಲಿಕ್ ಟಿವಿಯ ಮನೆಯೇ ಮಂತ್ರಾಲಯ ಕಾರ್ಯಕ್ರಮಕ್ಕೆ ಕರೆ ಮಾಡಿ ಸಂಕಷ್ಟ ಹೇಳಿಕೊಂಡಿದ್ದರು. ಸೋಂಕಿತ ತಾಯಿ ತಾಲೂಕು ಆಸ್ಪತ್ರೆಯಲ್ಲಿ ಅಡುಗೆ ಸಹಾಯಕಿಯಾಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಕೋವಿಡ್ ಸೋಂಕು ತಗುಲಿ ಚಿಕಿತ್ಸೆ ಪಡೆದು ಹೋಂ ಕ್ವಾರಂಟೈನ್ ನಲ್ಲಿದ್ದರು. ಎರಡು ತಿಂಗಳಿಂದ ಸಂಬಳ ಆಗಿಲ್ಲ, ತಂದೆಗೂ ಕೆಲಸವಿಲ್ಲ. ಜೀವನ ನಿರ್ವಹಣೆ ಕಷ್ಟ ಅಗಿದೆ ಅಂತ ಅಳಲು ತೋಡಿಕೊಂಡಿದ್ದರು. ಕೊರೊನಾ ಭೀತಿಯಿಂದ ಸ್ಥಳೀಯವಾಗಿ ಯಾರೂ ಹತ್ತಿರ ಬರುತ್ತಿಲ್ಲ. ದಯವಿಟ್ಟು ಏನಾದ್ರೂ ಸಹಾಯ ಮಾಡಿ ಅಂತ ಮನವಿ ಮಾಡಿದ್ದರು.
Advertisement
Advertisement
ಕಾರ್ಯಕ್ರಮ ವೀಕ್ಷಿಸಿದ ಕಡಬ ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಜಿ ಮಹಮ್ಮದ್ ರಫೀಕ್ ಕೊಡಾಜೆ, ಇವರು ಸೋಂಕಿತ ನೊಂದ ಮಹಿಳೆಯ ಕುಟುಂಬಕ್ಕೆ ನೆರವಾಗಲು ಮುಂದೆ ಬಂದರು. ಶಾಂತಿಗೋಡಿನಲ್ಲಿರುವ ಮಹಿಳೆಯ ಮನೆಗೆ ತೆರಳಿ ಆತ್ಮಸ್ಥೈರ್ಯ ತುಂಬಿದ ರೊಟೇರಿಯನ್ ರಫೀಕ್ ಹಾಜಿ, ಮಹಿಳೆಯ ಕುಟುಂಬಕ್ಕೆ 25 ಕೆಜಿ. ಅಕ್ಕಿ ಹಾಗೂ ತಿಂಗಳಿಗಾಗುವಷ್ಟು ದಿನಸಿ ಸಾಮಗ್ರಿಗಳನ್ನು ನೀಡಿ ನೆರವಾಗಿದ್ದಾರೆ.
Advertisement
Advertisement
ಸಂಕಷ್ಟದಲ್ಲಿದ್ದಾಗ ಯಾರೂ ನೆರವಾಗದೇ ಕಂಗಾಲಾಗಿದ್ದ ನಮಗೆ ಪಬ್ಲಿಕ್ ಟಿವಿಯಿಂದಾಗಿ ಹೋದ ಜೀವ ಬಂದಂತಾಗಿದೆ ಎಂದು ಸೋಂಕಿತ ಮಹಿಳೆ ಹೇಳಿದರು. ಕಷ್ಟ ಕಾಲದಲ್ಲಿ ನೆರವಾದ ರಫೀಕ್ ಹಾಜಿಯವರಿಗೂ ಮಹಿಳೆ ಹೃದಯಾಳದ ಕೃತಜ್ಞತೆ ಸಲ್ಲಿಸಿದರು. ಪಬ್ಲಿಕ್ ಟಿವಿ ಪ್ರತಿನಿಧಿಯ ಮಧ್ಯಪ್ರವೇಶದಿಂದ ಈಗ ಮಹಿಳೆಗೆ ಅಡುಗೆ ಗುತ್ತಿಗೆದಾರರು ಒಂದು ತಿಂಗಳ ಸಂಬಳ ನೀಡಿದ್ದು, ಬಾಕಿ ಹಣವನ್ನು ಶೀಘ್ರವೇ ನೀಡುವುದಾಗಿ ಭರವಸೆ ನೀಡಿದ್ದಾರೆ. ಕೊರೊನಾ ಸೋಂಕು ತಗುಲಿ ಸಂಕಷ್ಟದಲ್ಲಿದ್ದ ಬಡ ಮಹಿಳೆಯ ಕುಟುಂಬಕ್ಕೆ ಕಿರು ಸಹಾಯ ಮಾಡಲು ಅವಕಾಶ ನೀಡಿದ ಪಬ್ಲಿಕ್ ಟಿವಿ ಸಂಸ್ಥೆಗೆ ನಾನು ಆಭಾರಿಯಾಗಿದ್ದೇನೆ ಎಂದು ರೊಟೇರಿಯನ್ ಹಾಜಿ ರಫೀಕ್ ಕೊಡಾಜೆ ಧನ್ಯವಾದ ತಿಳಿಸಿದ್ದಾರೆ.