– ತಾಲೂಕು ಅಧಿಕಾರಿಯೊಂದು ಹೇಳಿಕೆ, ಜಿಲ್ಲಾ ಆರೋಗ್ಯಾಧಿಕಾರಿ ಒಂದು ಹೇಳಿಕೆ
– ಆರೋಗ್ಯಾಧಿಕಾರಿಗಳ ಹೇಳಿಕೆಯಿಂದ ವೃದ್ಧನ ಕುಟುಂಬ ಕಂಗಾಲು
ಶಿವಮೊಗ್ಗ: ಕೋವಿಡ್-19 ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿಕಾರಿಪುರದ 85 ವರ್ಷದ ವೃದ್ಧರೊಬ್ಬರ ಪ್ರಕರಣ ಇದೀಗ ಜಿಲ್ಲಾಡಳಿತಕ್ಕೆ ತಲೆ ನೋವಾಗಿ ಪರಿಣಮಿಸಿದರೆ. ಇದರಿಂದಾಗಿ ವೃದ್ಧನ ಕುಟುಂಬಸ್ಥರು ಸಹ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ತಾಲೂಕು ಆರೋಗ್ಯ ಅಧಿಕಾರಿ ಪ್ರಕಾರ ವೃದ್ಧ ಮೃತಪಟ್ಟಿದ್ದಾರೆ, ಸಿಬ್ಬಂದಿಯೇ ಅಂತ್ಯಕ್ರಿಯೆ ನಡೆಸಿದ್ದಾರೆ ಎಂದು ಹೇಳುತ್ತಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಪ್ರಕಾರ ವೃದ್ಧ ಕೋವಿಡ್-19 ಆಸ್ಪತ್ರೆಯಿಂದ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಗೊಂದಲ ಉಂಟಾಗಿದೆ. ಶಿಕಾರಿಪುರದ 85 ವರ್ಷದ ವೃದ್ಧ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಕಾರಣ ಜು.18 ರಂದು ಕುಟುಂಬಸ್ಥರು ಚಿಕಿತ್ಸೆಗಾಗಿ ಶಿಕಾರಿಪುರದ ಸಾರ್ವಜನಿಕ ಆಸ್ಪತ್ರೆಗೆ ಕರೆ ತಂದಿದ್ದರು. ಈ ವೇಳೆ ವೈದ್ಯರು ಚಿಕಿತ್ಸೆಗೂ ಮೊದಲು ಕೋವಿಡ್-19 ಪರೀಕ್ಷೆಗೆ ಒಳಪಡಿಸಿದ್ದರು. 22 ರಂದು ಕೊರೊನಾ ಸೋಂಕು ಪತ್ತೆಯಾಗಿತ್ತು. ಸೋಂಕು ಕಾಣಿಸಿಕೊಂಡ ಪರಿಣಾಮ ಜು.23 ರಂದು ಸೋಂಕಿತ ವೃದ್ಧನನ್ನು ಕೋವಿಡ್-19 ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
Advertisement
Advertisement
ಆಸ್ಪತ್ರೆಗೆ ದಾಖಲಾದ ನಂತರ ವೃದ್ಧನ ಆರೋಗ್ಯ ವಿಚಾರಿಸಲು ಅವರ ಮನೆಯವರು ಆಸ್ಪತ್ರೆಗೆ, ಕೋವಿಡ್ ಸೆಂಟರ್ ಗಳಿಗೆ ಅಲೆದಾಡಿದ್ದಾರೆ. ಆದರೆ ವೃದ್ಧನ ಕುಟುಂಬಸ್ಥರಿಗೆ ಯಾವುದೇ ಮಾಹಿತಿ ದೊರೆಯಲಿಲ್ಲ. ಆದರೆ ಜು.29 ರಂದು ತಾಲೂಕು ಆರೋಗ್ಯಾಧಿಕಾರಿ ಮೃತನ ಮೊಮ್ಮಗನಿಗೆ ದೂರವಾಣಿ ಕರೆ ಮಾಡಿ ನಿಮ್ಮ ಅಜ್ಜ ಮೃತಪಟ್ಟಿದ್ದಾರೆ, ಅವರ ಅಂತ್ಯಕ್ರಿಯೆಯನ್ನು ಆರೋಗ್ಯ ಇಲಾಖೆ ಸಿಬ್ಬಂದಿಯೇ ನೆರವೇರಿಸಿದ್ದಾರೆ ಎಂದಿದ್ದಾರೆ. ಇದರಿಂದ ಆತಂಕಕ್ಕೊಳಗಾದ ಕುಟುಂಬಸ್ಥರು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ನಮಗೆ ತಿಳಿಸದೆ, ನಮ್ಮ ಗಮನಕ್ಕೆ ಬಾರದೇ ಹೇಗೆ ಅಂತ್ಯಕ್ರಿಯೆ ನಡೆಸಿದಿರಿ ಎಂದು ಪ್ರಶ್ನಿಸಿದ್ದಾರೆ.
Advertisement
ಒಂದೆಡೆ ತಾಲೂಕು ಅಧಿಕಾರಿಗಳು ಈ ರೀತಿ ಹೇಳುತ್ತಿದ್ದರೆ, ಇತ್ತ ಜಿಲ್ಲಾ ಆರೋಗ್ಯಾಧಿಕಾರಿಗಳದ್ದು ಬೇರೆಯದೇ ಉತ್ತರವಾಗಿದೆ. ನಿಮ್ಮ ಅಜ್ಜ ಮೃತಪಟ್ಟಿಲ್ಲ, ಕೋವಿಡ್-19 ಆಸ್ಪತ್ರೆಯಿಂದ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮೆಗ್ಗಾನ್ ಆಸ್ಪತ್ರೆಯವರು ಜು.28 ರಂದು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೆ ಇಂದು ಸುದ್ದಿಗೋಷ್ಠಿ ನಡೆಸಿದ ಜಿಲ್ಲಾಧಿಕಾರಿ, ಸೋಂಕಿತ ವೃದ್ಧ ಮೃತಪಟ್ಟಿಲ್ಲ, ಆಸ್ಪತ್ರೆಯಿಂದ ನಾಪತ್ತೆಯಾಗಿದ್ದಾರೆ. ತಾಲೂಕು ಆರೋಗ್ಯಾಧಿಕಾರಿ ಕುಟುಂಬಸ್ಥರಿಗೆ ಏಕೆ ಆ ರೀತಿ ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಈ ಬಗ್ಗೆ ವಿಚಾರಿಸುತ್ತೇನೆ ಎಂದು ತಿಳಿಸಿದ್ದಾರೆ.
Advertisement
ಕೋವಿಡ್-19 ಆಸ್ಪತ್ರೆಯಲ್ಲಿ ಯಾವುದೂ ಸರಿಯಿಲ್ಲ ಎಂಬ ಆರೋಪ ಕೇಳಿ ಬರುತಿತ್ತು. ಇದಕ್ಕೆ ಈ ಪ್ರಕರಣ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ. ಈ ಹಿಂದೆ ಸಹ ಕೋವಿಡ್-19 ಮೆಗ್ಗಾನ್ ಆಸ್ಪತ್ರೆಯಿಂದ ಮೂರು ಮಂದಿ ಸೋಂಕಿತರು ತಪ್ಪಿಸಿಕೊಂಡು ಹೋಗಿದ್ದರು. ನಂತರ ಅಧಿಕಾರಿಗಳು ಪತ್ತೆ ಹಚ್ಚಿ ಆಸ್ಪತ್ರೆಗೆ ಕರೆ ತಂದಿದ್ದರು. ಆದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಹೀಗಾಗಿ ವೃದ್ಧನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.