ತುಮಕೂರು: ಕೊರೊನಾ ಸೋಂಕಿಗೆ ಸಿಲುಕಿ ದೇಶವೇ ನಲುಗಿ ಹೋಗಿದೆ. ಇಂಥಾ ಸಮಯದಲ್ಲಿ ಗಂಡ, ಮನೆ, ಮಕ್ಕಳನ್ನ ಬಿಟ್ಟು ಮನೆ ಮನೆಗೆ ತೆರಳಿ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ನರ್ಸ್ಗಳು ಶ್ರಮಿಸುತ್ತಿದ್ದಾರೆ. ಈ ಕೊರೊನಾ ವಾರಿಯರ್ಸ್ಗಳ ಪಾದ ತೊಳೆದು ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ಕೃತಜ್ಞತೆ ಸಲ್ಲಿಸಿದ್ದಾರೆ.
Advertisement
ಸಿದ್ದಗಂಗಾ ಶ್ರೀಗಳ ದಿವ್ಯ ಸಾನ್ನಿದ್ಯದೊಂದಿಗೆ ನೂರಾರು ಕೊರೊನಾ ವಾರಿಯರ್ಸ್ಗಳಿಗೆ ತುಮಕೂರಿನ ಕೈದಾಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾದ ಪೂಜೆ ನೆರವೇರಿಸಿ ಶಾಸಕ ಗೌರಿಶಂಕರ್ ಅಭಿನಂದನೆ ಸಲ್ಲಿಸಿದ್ದಾರೆ. ಸ್ವತಃ ಶಾಸಕ ಗೌರಿಶಂಕರ್ ಅವರೇ ಅಂಗನವಾಡಿ ಕಾರ್ಯಕರ್ತೆಯರ ಕಾಲು ತೊಳೆದು, ಅರಿಶಿನ-ಕುಂಕುಮ, ಹೂಗಳನ್ನ ಹಾಕಿ ಸತ್ಕರಿಸಿದ್ದಾರೆ. ಈ ವೇಳೆ ಮಾತನಾಡಿದ ಶಾಸಕ ಗೌರಿಶಂಕರ್, ನನ್ನ ಜೀವನ ಇರೋವರೆಗೂ ನಿಮ್ಮ ಸೇವೆಗೆ ಸಿದ್ಧ. ಯಾರಿಗೆ ಏನೇ ಸಮಸ್ಯೆಯಿದ್ದರೂ ನನ್ನ ಬಳಿ ಹೇಳಿಕೊಳ್ಳಿ. ಕೊರೊನಾದಿಂದ ಯಾರಿಗೂ ಸಾವು ಬರದಿರಲಿ ಎಂದು ಆಶಿಸಿದರು.
Advertisement
Advertisement
ಈ ಅಪರೂಪದ ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಉಪಸ್ಥಿತರಿದ್ದರು. ಸಿದ್ಧಲಿಂಗ ಸ್ವಾಮೀಜಿಗೆ ಪಾದ ಪೂಜೆ ಮಾಡೋ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶ್ರೀಗಳು ಹಾಗೂ ಶಾಸಕರು ಜೊತೆಯಾಗಿ ಅಂಗನಾವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಪೊಲೀಸರು, ವೈದ್ಯರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
Advertisement
ಈ ಬಗ್ಗೆ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಗೌರಿಶಂಕರ್ ಕುಟುಂಬ ಜನರ ಸೇವೆಗಾಗಿಯೇ ಹುಟ್ಟಿದೆ. ಅವರ ಸೇವೆಯಲ್ಲಿ ಎಲ್ಲೂ ಯಾವ ಸ್ವಾರ್ಥವಿಲ್ಲ. ಇವರ ತಂದೆ ಚೆನ್ನಿಗಪ್ಪ ಅವರು ಶ್ರೀ ಮಠಕ್ಕೆ ಮೊದಲಿನಿಂದಲೂ ಭಕ್ತರು, ಅವರ ಪುತ್ರನಾಗಿ ಅವರ ಹಾದಿಯಲ್ಲೇ ನಡೆಯುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.