ಹಾಸನ: ಕೊರೊನಾ ಮೂರನೇ ಅಲೆ ಮಕ್ಕಳನ್ನು ಹೆಚ್ಚು ಕಾಡುವ ಹಿನ್ನೆಲೆ ಅಗತ್ಯ ವೆಂಟಿಲೇಟರ್ ಸೌಲಭ್ಯದ ಬೆಡ್ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ಹಳ್ಳಿಯ ಕಡೆ ಮಕ್ಕಳ ತಜ್ಞರ ನಡೆ ಎಂಬ ಯೋಜನೆ ಆರಂಭಿಸಲಾಗಿದೆ ಎಂದು ಆರ್.ಅಶೋಕ್ ತಿಳಿಸಿದರು.
ಜಿಲ್ಲಾ ಪಂಚಾಯತಿ ಹೊಯ್ಸಳ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹಾಗೂ ಕಂದಾಯ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಕೋವಿಡ್ ನಿಯಂತ್ರಣ ಕುರಿತು ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಕೊರೊನಾ ಮೂರನೇ ಅಲೆ ಮಕ್ಕಳಿಗೆ ಹೆಚ್ಚು ಬಾಧಿಸುವುದರಿಂದ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ ಯೋಜನೆ ಮೂಲಕ ಮಕ್ಕಳಿಗೆ ಅರ್ಧ ಕೆ.ಜಿ. ಹಾಲಿನ ಪುಡಿ, 200 ಗ್ರಾಂ. ಬಾದಾಮಿ, ಮೊಟ್ಟೆ ಸೇರಿದಂತೆ ಮಲ್ಟಿವಿಟಮಿನ್ ಸಿರಪ್ ಮತ್ತು ಸಾಬೂನನ್ನು ನೀಡುವ ಯೋಜನೆ ಇದಾಗಿದ್ದು, ರಾಜ್ಯಾದ್ಯಂತ ಜಾರಿಗೆ ಬರಲಿದೆ. ಆರೋಗ್ಯ ರಕ್ಷಣೆಗೆ ಅಗತ್ಯ ಹಣಕಾಸು ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.
Advertisement
Advertisement
ಕೊರೊನಾ ಮೂರನೇ ಅಲೆ ಕುರಿತು ಶಾಸಕರೆಲ್ಲರೂ ಸಲಹೆ ನೀಡಿದ್ದಾರೆ. ಮಕ್ಕಳ ತಜ್ಞರ ಕೊರತೆ ದೇಶದಲ್ಲೇ ಇದೆ. ಮುಂದಿನ 10 ದಿನದಲ್ಲಿ ಎಲ್ಲ ವೈದ್ಯರಿಗೆ ತರಬೇತಿ ನೀಡಿ, ಮಕ್ಕಳಿಗೆ ಹೇಗೆ ಚಿಕಿತ್ಸೆ ನೀಡಬೇಕು ಎಂದು ಅಗತ್ಯ ಮಾಹಿತಿ ನೀಡಲಾಗುವುದು. ಮಕ್ಕಳ ತಜ್ಞರನ್ನು ಕೂಡಲೇ ಒದಗಿಸಲಾಗದು, ಶಿಕ್ಷಣ ಪಡೆದು ಹೊರಬರಲು ಇನ್ನೂ 7 ವರ್ಷ ಬೇಕಿದೆ. ಆದ್ದರಿಂದ ಇರುವ ವೈದ್ಯರಿಗೆ ಮಕ್ಕಳ ಚಿಕಿತ್ಸೆ ಬಗ್ಗೆ ತರಬೇತಿ ನೀಡುವುದು ಒಂದೇ ಮಾರ್ಗ ಎಂದರು.
Advertisement
ಮೂರನೇ ಅಲೆ ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಮಕ್ಕಳಲ್ಲಿ ಆರೋಗ್ಯ ಸಮಸ್ಯೆ, ಅಪೌಷ್ಟಿಕತೆಯ ಬಗ್ಗೆ ಮಾಹಿತಿ ಪಡೆದು ಸೂಕ್ತ ಚಿಕಿತ್ಸೆ ನೀಡಬೇಕಿದೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಅಗತ್ಯ ಪೌಷ್ಠಿಕಾಂಶದ ಆಹಾರ ನೀಡಬೇಕು ಎಂದು ಸೂಚನೆ ನೀಡಿದರು.
Advertisement
ಬೇಲೂರು ತಾಲೂಕಿನ ಆರೋಗ್ಯ ಕೇಂದ್ರಗಳಲ್ಲಿ ಮಕ್ಕಳ ತಜ್ಞರ ಕೊರತೆಯಿದೆ. ಆದ್ದರಿಂದ ಅಗತ್ಯ ವೈದ್ಯರ ನೇಮಕಾತಿ ಮಾಡುವಂತೆ ಹಾಗೂ ಮಕ್ಕಳಿಗೆ ಪ್ರತ್ಯೇಕವಾಗಿ ಬೆಡ್ ಗಳನ್ನು ಒದಗಿಸುವಂತೆ ಶಾಸಕ ಲಿಂಗೇಶ್ ಒತ್ತಾಯಿಸಿದರು.
ಅರಸೀಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಕ್ಕಳ ವೈದ್ಯರ ಕೊರತೆಯಿದೆ ಹಿಂದಿನ ಪಂಚಾಯಿತಿ ಸಭೆಯಲ್ಲಿ ವೈದ್ಯರ ಕೊರತೆ ಬಗ್ಗೆ ಗಮನಕ್ಕೆ ತರಲಾಗಿತ್ತು. ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಭೆಯ ಗಮನಕ್ಕೆ ತಂದರು. ಕೋವಿಡ್ ಸಾವಿನ ಸಂಖ್ಯೆ ಕಡಿಮೆ ಮಾಡಲು ತಾಲೂಕಿನಲ್ಲಿ ಕೊರೊನಾದಿಂದ ಸಾವಿಗೀಡಾದವರ ಬಗ್ಗೆ ಅಗತ್ಯ ಮಾಹಿತಿ ಪಡೆಯಬೇಕು. ಯಾವ ಕಾರಣಕ್ಕೆ ಸಾವು ನಡೆದಿದೆ ಎಂದು ಮಾಹಿತಿ ಕಲೆಹಾಕೋದು ಸೂಕ್ತ. ಇದರಿಂದ ಅವರ ಕುಟುಂಬ ಸದಸ್ಯರಿಗೆ ಬೇರೆ ಯಾವ ಖಾಯಿಲೆ ಇದೆ ಹಾಗೂ ಕೊರೊನಾ ಸೋಂಕಿನಿಂದಲೇ ಸಾವಾಯಿತೆ ಎಂಬ ಮಾಹಿತಿ ಹಾಗೂ ಉತ್ತಮ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ ಎಂದು ಶಾಸಕ ಶಿವಲಿಂಗೇಗೌಡ ಒತ್ತಾಯಿಸಿದರು.
ಶಾಸಕ ಬಾಲಕೃಷ್ಣ ಮಾತನಾಡಿ, ವೈದ್ಯರ ನಡೆ ಹಳ್ಳಿಯ ಕಡೆ ಪರಿಣಾಮಕಾರಿಯಾಗಿದೆ. ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ತೊಂದರೆಯಾಗಲಿದೆ ಎಂಬ ಮಾಹಿತಿಯಂತೆ ಅಗತ್ಯ ಚಿಕಿತ್ಸೆಗೆ ಕ್ರಮ ಅವಶ್ಯವಿದೆ. ಹೋಬಳಿ ಕೇಂದ್ರದಲ್ಲಿ ಅಗತ್ಯ ಕೊರೊನಾ ಪರೀಕ್ಷಾ ಕೇಂದ್ರ ತೆರೆದರೆ ಜಿಲ್ಲಾ ಕೇಂದ್ರಕ್ಕೆ ಅಲೆಯುವುದು ತಪ್ಪುತ್ತದೆ ಎಂದರು.
ಮಾಜಿ ಸಚಿವ ಎಚ್.ಡಿ.ರೇವಣ್ಣ ಮಾತನಾಡಿ, ಕೆಲ ದಿನಗಳಿಂದ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ, ಪಾಸಿಟಿವಿಟಿ ದರವೂ ಕಡೆಮೆಯಾಗಿದೆ. ಮೂರನೇ ಅಲೆ ಸಮರ್ಥವಾಗಿ ನಿಭಾಯಿಸಲು ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಕಾರ್ಯನಿರ್ವಹಣೆ ಮಾಡುವ ಅಗತ್ಯವಿದೆ. ನಮ್ಮ ಕ್ಷೇತ್ರದಲ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ 15 ಮಕ್ಕಳ ಬೆಡ್ ಅವಶ್ಯಕತೆ ಇದೆ, ತುರ್ತಾಗಿ ಬೇಕಿದೆ ಎಂದರು. ಈಗಾಗಲೇ 18 ವೆಂಟಿಲೇಟರ್ 2.32 ಕೋಟಿ ವೆಚ್ಚದಲ್ಲಿ ಜಿಲ್ಲಾ ಆಸ್ಪತ್ರೆಗೆ ವಿತರಣೆಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಅಶೋಕ್ ಉತ್ತರಿಸಿದರು.
ಸಭೆಯಲ್ಲಿ ಡಿಸಿ ಗಿರೀಶ್, ಸಿಇಒ ಪರಮೇಶ್, ಎಸ್ಪಿ ಶ್ರೀನಿವಾಸ್ ಗೌಡ, ಶಾಸಕರಾದ ಸಿ.ಎನ್.ಬಾಲಕೃಷ್ಣ, ಪ್ರೀತಮ್.ಜೆ.ಗೌಡ ಸೇರಿದಂತೆ ಜಿಲ್ಲೆಯ ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.