ನವದೆಹಲಿ: ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಫೇಲ್ ಆಗಿದೆ. ಈ ಹಿನ್ನೆಲೆ ರಾಜ್ಯದ ಕೊರೊನಾ ವೈರಸ್ ನಿಯಂತ್ರಣ ಉಸ್ತುವಾರಿಗೆ ಕೇಂದ್ರ ಸರ್ಕಾರ ವಿಶೇಷ ತಂಡವನ್ನು ನಿಯೋಜಿಸಿದೆ.
ಕರ್ನಾಟಕವೂ ಸೇರಿ ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಕೇರಳ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಛತ್ತೀಸಗಢ ರಾಜ್ಯಗಳಿಗೆ ಪ್ರತ್ಯೇಕ ತಜ್ಞರ ತಂಡಗಳನ್ನು ಕೇಂದ್ರ ಆರೋಗ್ಯ ಇಲಾಖೆ ನಿಯೋಜಿಸಿದೆ. ಕೇಂದ್ರದಿಂದ ನಿಯೋಜನೆಗೊಂಡಿರುವ ತಜ್ಞರ ತಂಡ ಕರ್ನಾಟಕಕ್ಕೆ ಎರಡನೇ ಬಾರಿ ಬರಲಿದ್ದು ಕೊರೊನಾ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ಮತ್ತು ಸಲಹೆಗಳನ್ನು ನೀಡಲಿದೆ.
Advertisement
Advertisement
ಕಳೆದ ಮೇ ತಿಂಗಳಲ್ಲಿ ಕೇಂದ್ರದ ಕೋವಿಡ್ ತಜ್ಞರ ತಂಡ ರಾಜ್ಯಕ್ಕೆ ಭೇಟಿ ಕೊಟ್ಟಿತ್ತು ಮತ್ತು ರಾಜ್ಯದ ಕೊರೊನಾ ನಿರ್ವಹಣೆ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿತ್ತು. ಆದರೆ ಕೇಂದ್ರದ ತಂಡ ಭೇಟಿ ಬಳಿಕ ರಾಜ್ಯದಲ್ಲಿ ಪರಿಸ್ಥಿತಿ ಸಂಪೂರ್ಣ ವಿಭಿನ್ನವಾಗಿದ್ದು ಕೈ ಮೀರಿ ಹೋಗುತ್ತಿದೆ. ಈ ಹಿನ್ನೆಲೆ ಮತ್ತೊಮ್ಮೆ ಕೇಂದ್ರ ಸರ್ಕಾರ ರಾಜ್ಯಕ್ಕೆ ತಜ್ಞರ ನಿಯೋಜನೆ ಮಾಡಿದೆ.
Advertisement
ಕೇಂದ್ರದಿಂದ ನಿಯೋಜನೆಗೊಂಡಿರುವ ತಂಡ, ರಾಜ್ಯದಲ್ಲಿ ಸಕ್ರಿಯ ಸೋಂಕು ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಹೆಚ್ಚಳಕ್ಕೆ ಕಾರಣಗಳನ್ನು ಪಟ್ಟಿ ಮಾಡಲಿದೆ. ಜೊತೆಗೆ ಸೋಂಕು ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಲಿದೆ.
Advertisement
ಇದಲ್ಲದೆ ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಸಂಪರ್ಕಿತರ ಪತ್ತೆ ತೀವ್ರಗೊಳಿಸುವುದು, ಕೊ-ಮಾರ್ಬಿಡ್ ವ್ಯಕ್ತಿಗಳನ್ನು ಗುರುತಿಸಿ, ಚಿಕಿತ್ಸೆ ಕೊಡುವುದು, ಕೊರೊನಾಗಾಗಿಯೇ ನಿಯೋಜನೆಗೊಂಡಿರುವ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಕರ್ಯ ಹೆಚ್ಚಿಸುವುದು, ಕ್ವಾರಂಟೈನ್, ಐಸೊಲೇಷನ್ ವ್ಯವಸ್ಥೆ ಸುಧಾರಿಸುವುದು, ಟೆಸ್ಟಿಂಗ್ ವ್ಯವಸ್ಥೆ ಇನ್ನಷ್ಟು ಬಲಪಡಿಸುವುದು, ಕಂಟೈನ್ಮೆಂಟ್ ವಲಯಗಳಲ್ಲಿ ಹೆಚ್ಚಿನ ನಿಗಾ ಇಡುವ ಟಾಸ್ಕ್ ಗಳನ್ನು ರಾಜ್ಯ ಸರ್ಕಾರಕ್ಕೆ ನೀಡಲಿದೆ.
ಪ್ರತಿಯೊಂದು ತಂಡದಲ್ಲಿ ಜಂಟಿ ಕಾರ್ಯದರ್ಶಿ (ಆಯಾ ರಾಜ್ಯಕ್ಕೆ ನೋಡಲ್ ಅಧಿಕಾರಿ), ಸಾರ್ವಜನಿಕ ಆರೋಗ್ಯ ಅಂಶಗಳನ್ನು ನೋಡಿಕೊಳ್ಳಲು ಒಬ್ಬ ಸಾರ್ವಜನಿಕ ಆರೋಗ್ಯ ತಜ್ಞರು, ಸೋಂಕು ತಡೆಗಟ್ಟಲು ರಾಜ್ಯವು ಅನುಸರಿಸುತ್ತಿರುವ ಕ್ಲಿನಿಕಲ್ ನಿರ್ವಹನಾ ಶಿಷ್ಟಾಚಾರವನ್ನು ನೋಡಿಕೊಳ್ಳಲು ಒಬ್ಬ ವೈದ್ಯರು ಇರುತ್ತಾರೆ.
ನಿಗ್ರಹ, ಕಣ್ಗಾವಲು, ಪರೀಕ್ಷೆ, ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕ್ರಮಗಳು ಮತ್ತು ಸಕಾರಾತ್ಮಕ ಪ್ರಕರಣಗಳ ಸಮರ್ಥ ಕ್ಲಿನಿಕಲ್ ನಿರ್ವಹಣೆಯನ್ನು ಬಲಪಡಿಸಲು ರಾಜ್ಯಗಳ ಪ್ರಯತ್ನಗಳನ್ನು ತಂಡಗಳು ಬೆಂಬಲಿಸುತ್ತವೆ. ಸಮಯೋಚಿತ ರೋಗನಿರ್ಣಯ ಮತ್ತು ಅನುಸರಣೆಗೆ ಸಂಬಂಧಿಸಿದ ಸವಾಲುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಕೇಂದ್ರ ತಂಡಗಳು ಮಾರ್ಗದರ್ಶನ ನೀಡುತ್ತವೆ.
ಕರ್ನಾಟಕದಲ್ಲಿ ಒಟ್ಟು 7,43,848 ಪ್ರಕರಣಗಳು ವರದಿಯಾಗಿವೆ. ಇದು ದೇಶದ ಒಟ್ಟು ಪ್ರಕರಣಗಳಲ್ಲಿ ಶೇ.10.1 ಆಗಿದೆ. ಕರ್ನಾಟಕವು ಪ್ರತಿ ಮಿಲಿಯನ್ ಜನಸಂಖ್ಯೆಗೆ 11,010 ಪ್ರಕರಣಗಳನ್ನು ಹೊಂದಿದೆ. ರಾಜ್ಯದಲ್ಲಿ 6,20,008 ರೋಗಿಗಳು ಗುಣಮುಖರಾಗಿದ್ದಾರೆ. ಇದರ ಪರಿಣಾಮವಾಗಿ ಚೇತರಿಕೆ ದರವು ಶೇ.83.35 ಆಗಿದೆ. ಸಕ್ರಿಯ ಪ್ರಕರಣಗಳು 1,13,557 (ದೇಶದ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಶೇ.14.1). ರಾಜ್ಯದಲ್ಲಿ ಒಟ್ಟು 10,283 ಸಾವು ಸಂಭವಿಸಿವೆ. ಒಟ್ಟು ಪ್ರಕರಣಗಳ ಸಾವಿನ ಸಂಖ್ಯೆ ಶೇ.1.38 ನಷ್ಟು ಮತ್ತು ಪ್ರತಿ ಮಿಲಿಯನ್ ಜನಸಂಖ್ಯೆಗೆ 152 ಸಾವುಗಳು ಸಂಭವಿಸಿವೆ. ಪ್ರತಿ ಹತ್ತು ಲಕ್ಷಕ್ಕೆ ಪರೀಕ್ಷೆಯ ಪ್ರಮಾಣ 95674 ಮತ್ತು ಪಾಸಿಟಿವ್ ದರ ಶೇ.11.5 ಆಗಿದೆ.