-ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಡಿಮೆ ಮಳೆ
-ಚಳಿಗಾಳಿಗೆ ಕೊಡಗು ಜನ ತತ್ತರ
ಕೊಡಗು/ಉಡುಪಿ/ದಕ್ಷಿಣ ಕನ್ನಡ: ರಾಜ್ಯದಲ್ಲಿ ಕಳೆದ ಕೆಲ ಮೂರು ದಿನಗಳಿಂದ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಕೊಡಗಿನಲ್ಲಿ ಬಿಡುವು ನೀಡಿದ್ದ ಮಳೆರಾಯ ಮಧ್ಯಾಹ್ನದ ಬಳಿಕ ಚುರುಕು ಪಡೆದುಕೊಂಡಿದ್ರೆ, ಉಡುಪಿಯಲ್ಲಿ ಇನ್ನೆರಡು ದಿನ ಮಳೆಯಾಗುವ ಸಾಧ್ಯತೆಗಳಿದ್ದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕರಾವಳಿ ಜಿಲ್ಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ತಗ್ಗಿದ್ದು, ಅಲ್ಲಲ್ಲಿ ತುಂತುರು ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
Advertisement
ಕೊಡಗು: ಕಳೆದ ಮೂರು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ಬಿಟ್ಟುಬಿಡದೆ ಜಿಟಿಜಿಟಿ ಮಳೆ ಸುರಿಯುತ್ತಿದ್ದು ಜನರನ್ನು ಮತ್ತೆ ಆತಂಕಕ್ಕೆ ದೂಡಿದೆ. ಭಾಗಮಂಡಲ ಮತ್ತು ತಲಕಾವೇರಿ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದರೆ, ಮಡಿಕೇರಿ, ನಾಪೋಕ್ಲು ಸೇರಿದಂತೆ ಹಲವೆಡೆ ಸಾಧಾರಣ ಮಳೆಯಾಗುತ್ತಿದೆ. ಬೆಳಗ್ಗೆ ಕೊಂಚ ಬಿಡುವು ನೀಡಿದ್ದ ವರುಣ ಮಧ್ಯಾಹ್ನದ ಬಳಿಕ ಬಿಟ್ಟುಬಿಡದೆ ಎಡಬಿಡದೆ ಜಿಟಿಜಿಟಿ ಅಂತಾ ಸುರಿಯುತ್ತಿದೆ.
Advertisement
Advertisement
ಮಳೆ ಜೊತೆಗೆ ಭಾರೀ ಪ್ರಮಾಣದಲ್ಲಿ ಚಳಿಗಾಳಿ ಬೀಸುತ್ತಿದ್ದು, ಜನರು ತತ್ತರಿಸಿದ್ದಾರೆ. ತಲಕಾವೇರಿ, ಬಾಗಮಂಡಲ ಸುತ್ತಮುತ್ತಲಿನ ಬೆಟ್ಟ ಪ್ರದೇಶದಲ್ಲೆಲ್ಲಾ ಭಾರೀ ಮಳೆ ಸುರಿಯುತ್ತಿದ್ದು ಕಾವೇರಿ ನದಿಯ ನೀರಿನ ಮಟ್ಟದಲ್ಲಿ ಜಾಸ್ತಿಯಾಗಿದೆ. ಭಾಗಮಂಡಲ ತ್ರಿವೇಣಿ ಸಂಗ್ರಮದಲ್ಲೂ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಒಂದು ವೇಳೆ ಮಳೆ ತೀವ್ರಗೊಂಡಲ್ಲಿ ಜಿಲ್ಲೆಯಲ್ಲಿ ಮತ್ತೆ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿಯೇ ಮೂರು ದಿನಗಳಿಂದ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಕಾವೇರಿ ನದಿ ಪಾತ್ರದ ಜನರು ಮತ್ತು ಬೆಟ್ಟ ಪ್ರದೇಶದ ಜನರು ಆತಂಕ ಎದುರಿಸುವಂತೆ ಆಗಿದೆ.
Advertisement
ಉಡುಪಿಯಲ್ಲಿ ಆರೆಂಜ್ ಅಲರ್ಟ್: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಉಡುಪಿ ಜಿಲ್ಲೆಯಾದ್ಯಂತ ಶನಿವಾರ ಕೂಡಾ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮೋಡ ಕವಿದ ವಾತಾವರಣ ಇದ್ದು, ಇನ್ನೆರಡು ದಿನ ಭಾರೀ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟ ಪ್ರಕಾರ ಅರಬ್ಬಿ ಸಮುದ್ರದ ತೀರದ ತಾಲೂಕುಗಳಲ್ಲಿ ಗಾಳಿ ಸಹಿತ ಮಳೆ ಬೀಳುತ್ತಿದೆ.
ಕಳೆದ 24 ಗಂಟೆ ಜಿಲ್ಲೆಯಲ್ಲಿ 89 ಮಿಲಿಮೀಟರ್ ಸರಾಸರಿ ಮಳೆ ಬಿದ್ದಿದೆ. ಉಡುಪಿ ತಾಲೂಕಿನಲ್ಲಿ 82 ಮಿ.ಮೀ, ಕುಂದಾಪುರ 108 ಮಿ.ಮೀ, ಕಾರ್ಕಳ ತಾಲೂಕಿನಲ್ಲಿ 76 ಮಿ.ಮೀ ಮಳೆ ಬಿದ್ದಿದೆ. ಕುಂದಾಪುರ ತಾಲೂಕಿನ ಬಳ್ಕೂರು ಗ್ರಾಮದ ವ್ಯಾಪ್ತಿಯಲ್ಲಿ 111 ಮಿಲಿಮೀಟರ್ ಮಳೆಯಾಗಿದೆ. ಭಾನುವಾರ ಕೂಡ ಆರೆಂಜ್ ಅಲರ್ಟ್ ಮುಂದುವರಿಯಲಿದೆ. ಸೋಮವಾರ ಯೆಲ್ಲೋ ಅಲರ್ಟ್ ಇದ್ದು, ಸುಮಾರು 60ರಿಂದ 110 ಮಿಲಿಮೀಟರ್ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಆಳ ಸಮುದ್ರ ಮೀನುಗಾರಿಕೆಗೆ ತೆರಳಿರುವ ಬೋಟುಗಳು ತಮ್ಮ ಕಸುಬನ್ನು ಮುಂದುವರಿಸಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಫಿಶಿಂಗ್ ನಡೆಸುತ್ತಿದೆ ಎಂಬ ಮಾಹಿತಿ ಇದೆ. ಜಿಲ್ಲೆಯಾದ್ಯಂತ ವಾತಾವರಣ ಸಂಪೂರ್ಣ ತಂಪಿನಿಂದ ಕೂಡಿದೆ. ಜೂನ್ ಜುಲೈ ತಿಂಗಳಲ್ಲಿ ಬಿತ್ತನೆ, ನಾಟಿಮಾಡಿದ ಬೇಸಾಯಗಾರರು ಕೊಂಚ ಗೊಂದಲದಲ್ಲಿದ್ದಾರೆ. ಮಳೆ ಮುಂದುವರಿದರೆ ಭತ್ತದ ಹೂವಿನಲ್ಲಿ ನೀರು ನಿಂತರೆ ತೆನೆ ಕೊಳೆಯುವ ಸಾಧ್ಯತೆ ಇದೆ ಎಂದು ಆತಂಕಗೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆ: ರಾಜ್ಯದ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹವಾಮಾನ ಇಲಾಖೆ ಇಂದು ರೆಡ್ ಅಲರ್ಟ್ ಘೋಷಿಸಿದ್ರೂ, ಹೆಚ್ಚಿನ ಮಳೆಯಾಗಿಲ್ಲ. ಜಿಲ್ಲಾದ್ಯಂತ ಹಲವೆಡೆ ಇಂದು ಜಿಟಿ ಜಿಟಿ ಮಳೆಯಾಗಿದ್ದು ಮಳೆ ಪ್ರಮಾಣ ಸಂಪೂರ್ಣ ಕಡಿಮೆಯಾಗಿದೆ. ಜಿಲ್ಲೆಯ ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕಿನಲ್ಲಿ ಸ್ವಲ್ಪ ಹೆಚ್ಚಿನ ಮಳೆಯಾಗಿದ್ದು, ಇನ್ನುಳಿದಂತೆ ಎಲ್ಲಾ ಕಡೆಗಳಲ್ಲಿ ತುಂತುರು ಮಳೆಯಾಗಿದೆ.
ನಿನ್ನೆ ಹೆಚ್ಚಿನ ಮಳೆಯಾದ ಪರಿಣಾಮ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ಸಂಜೆ ವೇಳೆಗೆ ನೆರೆ ನೀರು ಇಳಿದು, ಮಳೆಯೂ ಕಡಿಮೆಯಾಗಿತ್ತು. ಹವಾಮಾನ ಇಲಾಖೆ ನಾಳೆಯೂ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.