ಮಡಿಕೇರಿ: ಕೋವಿಡ್ 19 ಸೋಂಕಿತ ಪ್ರಕರಣಗಳು ಎಲ್ಲಾ ಜಿಲ್ಲೆ ಮತ್ತು ರಾಜ್ಯಗಳಲ್ಲಿ ಹೆಚ್ಚುತ್ತಿವೆ. ಸೋಂಕಿತರ ಉತ್ತಮ ಆರೈಕೆ ಮತ್ತು ಸೂಕ್ತ ಚಿಕಿತ್ಸೆಯಿಂದಾಗಿ ಜಿಲ್ಲೆಯ ಕೋವಿಡ್ ಆಸ್ಪತ್ರೆಯ ಬಿಡುಗಡೆ ಪ್ರಮಾಣ ಶೇ.76 ರಷ್ಟು ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿರುವ ಐಸಿಯು ವಿಭಾಗದ ಹಾಸಿಗೆ ಸಾಮರ್ಥ್ಯವನ್ನು 56 ಹಾಸಿಗೆಗೆ ಹೆಚ್ಚಿಸಲಾಗಿದೆ. ಕೋವಿಡ್ ಐಸಿಯು ವಿಭಾಗವನ್ನು ಅರವಳಿಕೆ (ಅನಸ್ತೇಶಿಯಾ) ವಿಭಾಗದಿಂದ ನಿಭಾಯಿಸಲಾಗುತ್ತಿದೆ. ಈ ವಿಭಾಗದಿಂದ ಕೋವಿಡ್ ಸಂಬಂಧಿತ ತುರ್ತು ಕ್ರಮಕ್ಕಾಗಿ ಹೆಚ್ಚುವರಿ ಸಿಬ್ಬಂದಿ, ದಾದಿ (ಸ್ಟಾಫ್ ನರ್ಸ್)ಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
Advertisement
Advertisement
ಜಿಲ್ಲೆಯಲ್ಲಿ ಈವರೆಗೆ ಒಟ್ಟು 356 ಕೋವಿಡ್ ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು, ಇದರಲ್ಲಿ ಕಳೆದ ತಿಂಗಳಿನಲ್ಲಿ 30 ಮಂದಿ ಕೋವಿಡ್ ಐಸಿಯುನಲ್ಲಿ ದಾಖಲಾಗಿದ್ದಾರೆ. ಇಬ್ಬರು ಮೃತಪಟ್ಟಿದ್ದು, ಹಾಲಿ 5 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 23 ಮಂದಿ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹೇಳಿದ್ದಾರೆ.