ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧೆಡೆ ಮಳೆ ಆರ್ಭಟ ಮುಂದುವರಿದಿದೆ. ಇಂದು ಕೂಡ ಕೆಲವು ಕಡೆ ಮರ ಧರೆಗುರುಳಿದ್ದು, ಅಲ್ಲಲ್ಲಿ ಗುಡ್ಡ ಸಹ ಕುಸಿತವಾಗಿದೆ. ಮಡಿಕೇರಿ ತಾಲೂಕಿನ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಲೇ ಇದೆ.
Advertisement
ಕೇರಳದ ಗಡಿ ಭಾಗದಲ್ಲಿರುವ ದಕ್ಷಿಣ ಕೊಡಗಿನ ಬಹುತೇಕ ಕಡೆ ಧಾರಕಾರವಾಗಿ ಮಳೆ ಸುರಿದಿದೆ. ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ, ಶಾಂತಳ್ಳಿ ಮತ್ತು ಕೊಡಿಪೇಟೆಯಲ್ಲಿ ಉತ್ತಮ ಮಳೆಯಾಗಿದ್ದು, ಭಾರೀ ಗಾಳಿಗೆ ಮರಗಳು ಧರೆಗುರುಳಿವೆ. ಮಡಿಕೇರಿಯಲ್ಲಿ ಬೆಳಗ್ಗೆಯಿಂದ ಮಳೆ ಕೊಂಚ ಬಿಡುವು ನೀಡಿತ್ತಾದರೂ ಗಾಳಿ ಮತ್ತು ಮೈಕೊರೆಯುವ ಚಳಿ ಮುಂದುವರೆದಿದೆ.
Advertisement
ನಗರದ ಹೃದಯ ಭಾಗದಲ್ಲಿ ಬೃಹತ್ ಗುಡ್ಡ ಕುಸಿದಿದ್ದು, ನವೋದಯ ಶಾಲೆಯ ಬಳಿ ಮರ ಬಿದ್ದ ಘಟನೆ ನಡೆದಿದೆ. ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಲೇ ಇದ್ದು, ಪಕ್ಕದ ನಿವಾಸಿಗಳಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗಿದೆ.
Advertisement
Advertisement
ವೀರಾಜಪೇಟೆ ಭಾಗದಲ್ಲಿ ಎಡೆಬಿಡದೆ ಮಳೆಯಾಗುತ್ತಿದ್ದು, ಹೆಗ್ಗಳ ಗ್ರಾಮದ ರಾಮನಗರದ ಮಾಯಿಲಮಕ್ಕಿ ಪ್ರದೇಶದಲ್ಲಿ ಸಣ್ಣ ಗುಡ್ಡಗಳು ಕುಸಿಯುತ್ತಿವೆ. ಸಹಾಯಕ ನೋಡಲ್ ಅಧಿಕಾರಿ ಅವರೊಂದಿಗೆ ಕಂದಾಯ ಅಧಿಕಾರಿ ಹರೀಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲಿನ ಕೆಲವು ಕುಟುಂಬಗಳಿಗೆ ನೋಟೀಸ್ ನೀಡಿ ಸಂಬಂಧಿಕರ ಮನೆಗೆ ತೆರಳುವಂತೆ ಸೂಚನೆ ನೀಡಿದ್ದಾರೆ.
ಸೋಮವಾರಪೇಟೆ ತಾಲೂಕಿನ ಕನ್ನಲ್ಲಿಕಟ್ಟೆ, ಕುಂದಲ್ಲಿ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಗುಡ್ಡ ಕುಸಿದಿದ್ದು, ಗ್ರಾಮ ಪಂಚಾಯತಿ ಕಡೆಯಿಂದ ರಸ್ತೆ ಪಕ್ಕ ಗುಡ್ಡ ಕುಸಿತವಾಗಿರುವ ಜಾಗಕ್ಕೆ ಪ್ಲಾಸ್ಟಿಕ್ ಹೊದಿಕೆ ಹಾಕಿದ್ದಾರೆ.