ಮಡಿಕೇರಿ: ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಖಜಾನೆಯನ್ನೇ ಲೂಟಿ ಮಾಡಿರುವ ಘಟನೆ ಕೊಡಗಿನಲ್ಲಿ ನಡೆದಿದೆ.
ಹಣ ಕಳವಾಗಿರುವ ಬಗ್ಗೆ ಎಸ್ಪಿಗೆ ನಗದು ಶಾಖೆಯ ವಿಷಯ ನಿರ್ವಾಹಕ ಬರೆದಿರುವ ಪತ್ರ ಬಹಿರಂಗವಾಗಿದೆ. ಕೊಡಗು ಪೊಲೀಸ್ ಇಲಾಖೆಗೆ ವಿವಿಧ ಮೂಲಗಳಿಂದ ಸಂಗ್ರಹವಾಗಿದ್ದ 16.96 ಲಕ್ಷ ರೂಪಾಯಿ ಹಣವನ್ನು ಎಸ್ಪಿ ಕಚೇರಿಯ ಖಜಾನೆಯಿಂದ ಲೂಟಿ ಮಾಡಲಾಗಿದೆ. ಪೊಲೀಸ್ ಸಿಬ್ಬಂದಿಯೇ ಕಳ್ಳತನ ಮಾಡಿದ್ದಾರೆ ಎಂಬ ಅನುಮಾನ ಸಹ ವ್ಯಕ್ತವಾಗುತ್ತಿರುವುದು ಅಚ್ಚರಿಯ ಸಂಗತಿಯಾಗಿದೆ.
Advertisement
Advertisement
2020-21ನೇ ಸಾಲಿನಲ್ಲಿ ಪೊಲೀಸ್ ಫ್ಲ್ಯಾಗ್ ಮಾರಾಟದಿಂದ 7,38,450 ರೂಪಾಯಿ ಸಂಗ್ರಹವಾಗಿತ್ತು. ಜೊತೆಗೆ ಕೊವಿಡ್ ನಿಯಮಗಳನ್ನು ಉಲ್ಲಂಘಿಸಿದವರಿಗೆ ದಂಡ ಹಾಕಿದ್ದ 9,28,000 ರೂಪಾಯಿ ಸಂಗ್ರಹವಾಗಿತ್ತು. ಈ ಹಣವನ್ನು ಪೊಲೀಸ್ ವರಿಷ್ಠಾಧಿಕಾರಿ ಅವರ ನಗದು ಶಾಖೆಯ ಖಜಾನೆಯಲ್ಲಿ ಇರಿಸಲಾಗಿತ್ತು. ಈ ಹಣವನ್ನು ಸಂದಾಯ ಮಾಡುವುದಕ್ಕಾಗಿ ಖಜಾನೆ ಬೀಗ ತೆಗೆಯಲು ಹೋದಾಗ ಹಣ ಕಳುವಾಗಿರುವುದು ಬೆಳಕಿಗೆ ಬಂದಿದೆ.
Advertisement
ನಗದು ಶಾಖೆಯ ವಿಷಯ ನಿರ್ವಾಹಕ ರಂಜಿತ್ ಕುಮಾರ್ ಅವರು ಈ ಹಣವನ್ನು ಖಜಾನೆಯಲ್ಲಿಟ್ಟಿದ್ದರಂತೆ. ಮೊನ್ನೆಯಷ್ಟೇ ಹಣವನ್ನು ಸರ್ಕಾರಕ್ಕೆ ಸಂದಾಯ ಮಾಡಲು ಖಜಾನೆ ಬಾಗಿಲು ತೆಗೆಯುವುದಕ್ಕೆ ಹೋಗಿದ್ದಾರೆ. ಈ ವೇಳೆ ಅದರ ಬೀಗ ತೆಗೆದಿರುವುದು ಗೊತ್ತಾಗಿದೆ. ಡೋರ್ ತೆಗೆದು ನೋಡಿದಾಗ ಹಣ ಕಳವಾಗಿರುವುದು ತಿಳಿದಿದೆ. ಹೀಗಾಗಿ ರಂಜಿತ್ ಕುಮಾರ್ ಅವರು ಎಸ್ಪಿಗೆ ಪತ್ರ ಬರೆದಿದ್ದಾರೆ.
Advertisement
ಈ ನಗದು ಕಳವು ಮಾಡಿರುವುದರ ಹಿಂದೆ ಎಸ್ಪಿ ಕಚೇರಿಯಲ್ಲಿ ಕೆಲಸ ಮಾಡುವ ಇಬ್ಬರು ಸಿಬ್ಬಂದಿಯೇ ಇದ್ದಾರೆ ಎನ್ನಲಾಗಿದೆ. ದಲಾಯತ್ ಮತ್ತು ವಿನೋದ್ ಕುಮಾರ್ ಎಂಬ ಇಬ್ಬರಿಂದ ಈ ಹಿಂದೆ ಖಜಾನೆ ಕೀ ಕಳೆದು ಹೋಗಿತ್ತು. ಹಣ ಕಳವಾಗಿರುವ ಘಟನೆ ಬೆಳಕಿಗೆ ಬರುವುದಕ್ಕೆ ಎರಡು ದಿನದ ಮುಂಚೆ ಇದೇ ಇಬ್ಬರು ಸಿಬ್ಬಂದಿ ಖಜಾನೆ ಕಡೆಗೆ ಹೋಗಿ ಬರುತ್ತಿದ್ದನ್ನು ಉಳಿದ ಸಿಬ್ಬಂದಿ ನೋಡಿದ್ದಾರೆ. ಹೀಗಾಗಿ ಖಜಾನೆಯಿಂದ ಹಣ ಲೂಟಿ ಆಗಿರುವುದರ ಹಿಂದೆ ಈ ಇಬ್ಬರ ಮೇಲೆ ಅನುಮಾನವಿದೆ ಎಂದು ಎಸ್ಪಿ ಅವರಿಗೆ ದೂರು ನೀಡಿದ್ದಾರೆ.
ಹೀಗಾಗಿ ಪೊಲೀಸ್ ಇಲಾಖೆ ಒಳಗೆ, ಅದೂ ಖಜಾನೆ ಲೂಟಿ ಆದರೆ ಇನ್ನು ಸಮಾಜದ ಸ್ಥಿತಿ ಏನು ಎನ್ನುವ ಆತಂಕ ಮೂಡಿದ್ದು, ಪೊಲೀಸ್ ಇಲಾಖೆಯನ್ನೇ ಅನುಮಾನದಿಂದ ನೋಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.