ನವದೆಹಲಿ: ಪೊಲೀಸ್ ಕಾನ್ಸ್ಸ್ಟೆಬಲ್ ಒಬ್ಬರು 82 ವರ್ಷದ ವೃದ್ಧೆಯನ್ನು ಎತ್ತಿಕೊಂಡು ಹೋಗಿ ಕೋವಿಡ್-19 ಲಸಿಕೆ ಹಾಕಿಸಿಕೊಳ್ಳಲು ಸಹಾಯ ಮಾಡಿದ್ದಾರೆ. ಈ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಶೈಲಾ ಡಿಸೋಜಾ(82) ಎಂಬ ನಿವೃತ್ತ ಇಂಗ್ಲಿಷ್ ಶಿಕ್ಷಕಿಯೊಬ್ಬರು ಲಸಿಕೆ ಹಾಕಿಸಿಕೊಳ್ಳುವ ಇಚ್ಛೆಯನ್ನು ಪೊಲೀಸ್ ಕಾನ್ಸ್ ಸ್ಟೇಬಲ್ ಕುಲದೀಪ್ ಸಿಂಗ್ ಬಳಿ ವ್ಯಕ್ತಪಡಿಸಿದ್ದಾರೆ. ನಂತರ ಕುಲದೀಪ್ ಸಿಂಗ್ರವರು ನೋಂದಣಿ ಮಾಡಿಸಿ ವ್ಯಾಕ್ಸಿನ್ ಪಡೆಯಲು ಲಸಿಕೆ ಕೇಂದ್ರಕ್ಕೆ ಎತ್ತಿಕೊಂಡು ಬಂದಿರುವುದಾಗಿ ಕಾಶ್ಮೀರ್ ಗೇಟ್ ಪೊಲೀಸ್ ಠಾಣೆಯ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ಫೋಟೋ ವೈರಲ್ ಆಗುತ್ತಿದೆ.
Advertisement
Advertisement
ಈ ಕುರಿತಂತೆ ಮಾತನಾಡಿದ ಕಾನ್ಸ್ಸ್ಟೆಬಲ್, ಶೈಲಾ ಡಿಸೋಜಾರವರು ನಮ್ಮ ಏರಿಯಾದ ಹಿರಿಯ ನಾಗರಿಕ ಮಹಿಳೆಯಾಗಿದ್ದು, ಅವರ ಯೋಗಕ್ಷೇಮ ವಿಚಾರಿಸಲು ಆಗಾಗ ಭೇಟಿ ಮಾಡುತ್ತೇನೆ. ಒಮ್ಮೆ ಅವರು ಕೋವಿಡ್ ಲಸಿಕೆ ಪಡೆಯುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಹೀಗಾಗಿ ನಾನು ನನ್ನ ಎಸ್ಎಚ್ಒ ಜೊತೆ ಮಾತನಾಡಿ ಲಸಿಕೆಗೆ ನೋಂದಣಿ ಮಾಡಿಸಿ ವ್ಯಾಕ್ಸಿನ್ ಪಡೆಯಲು ಸಹಾಯ ಮಾಡಿದೆ. ಅವರು ಕಳೆದ ಎರಡು ವರ್ಷಗಳಿಂದ ನಡೆಯಲು ಸಾಧ್ಯವಾಗುತ್ತಿಲ್ಲ ಮತ್ತು ಸ್ಟ್ರೆಚರ್ ಹಾಗೂ ಗಾಲಿ ಕುರ್ಚಿಯಲ್ಲಿ ಓಡಾಡುತ್ತಾರೆ. ವ್ಯಾಕ್ಸಿನೇಷನ್ ಕೇಂದ್ರ ಮೇಲ್ಗಡೆ ಇದ್ದರಿಂದ ಹೋಗಲು ಸಾಧ್ಯವಾಗಲಿಲ್ಲ. ಹಾಗಾಗಿ ನಾನು ಅವರನ್ನು ಎರಡನೇ ಮಹಡಿಗೆ ಕರೆದೊಯ್ದು ಲಸಿಕೆ ಹಾಕಿಸಿ ಮನೆಗೆ ಕಳುಹಿಸಿಕೊಟ್ಟೆ ಎಂದರು.
Advertisement
ಕೋವಿಡ್ ಸಂಕಷ್ಟದ ಸಮಯದಲ್ಲಿ ಜನರಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯ. ನಾವು ಮನೆಯಿಂದ ದೂರವಿರುವುದರಿಂದ ಇಂತಹ ಜನರಲ್ಲಿ ನಮ್ಮ ಕುಟುಂಬವನ್ನು ಕಾಣುತ್ತಾ ಕಾಳಜಿ ವಹಿಸುತ್ತೇವೆ. ನಾನು ಜನರಿಗೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಂತೆ ಹೇಳಲು ಬಯಸುತ್ತೇನೆ. ಆಗ ಮಾತ್ರ ನಾವು ಈ ಸಾಂಕ್ರಾಮಿಕ ರೋಗದಿಂದ ದೂರವಾಗಬಹುದು ಎಂದು ಹೇಳಿದ್ದಾರೆ.