– ಬಲಿಷ್ಠ ಕೇರಳ ನಿರ್ಮಾಣಕ್ಕೆ ಬಿಜೆಪಿಗೆ ಮತಹಾಕಿ ಎಂದ ಅಶ್ವಥ್ ನಾರಾಯಣ್
ತಿರುವನಂತಪುರ: ಮುಂಬರುವ ಏಪ್ರಿಲ್ 6ರಂದು ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಗೆ ಬಿಜೆಪಿ ಕರಾರುವಕ್ಕಾದ ರಣವ್ಯೂಹವನ್ನೇ ರಚನೆ ಮಾಡುತ್ತಿದ್ದು, ರಾಜ್ಯ ಬಿಜೆಪಿ ಸಹ ಪ್ರಭಾರಿಯೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅವರು ಮೂರು ದಿನಗಳಿಂದ ಆ ರಾಜ್ಯದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.
ಮೂರನೇ ದಿನದಂದು ಬೆಳಗ್ಗೆಯಿಂದಲೇ ತಿರುವನಂತಪುರದಲ್ಲಿರುವ ಪಕ್ಷದ ಕಚೇರಿಯಲ್ಲಿ ಸರಣಿ ಸಭೆಗಳನ್ನು ನಡೆಸಿದ ಡಿಸಿಎಂ, ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ಗಣೇಶನ್, ಚುನಾವಣಾ ನಿರ್ವಹಣಾ ಉಸ್ತುವಾರಿ ಜಾರ್ಜ್ ಕುರಿಯನ್ ಮತ್ತಿತರರ ಜತೆ ಚುನಾವಣಾ ವ್ಯೂಹದ ಬಗ್ಗೆ ವ್ಯಾಪಕ ಸಮಾಲೋಚನೆ ನಡೆಸಿದರು.
Advertisement
Advertisement
ರಾಜಧಾನಿ ತಿರುವನಂತಪುರದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ನಿಟ್ಟಿನಲ್ಲಿ ಅಗತ್ಯವಾದ ಕಾರ್ಯತಂತ್ರ ರೂಪಿಸಲು ಡಾ.ಅಶ್ವಥ್ ನಾರಾಯಣ್ ಹೆಚ್ಚು ಒತ್ತುಕೊಟ್ಟು ಮಾಹಿತಿ ಸಂಗ್ರಹ ಮಾಡಿದರು.
Advertisement
ಈಗಾಗಲೇ ಪಕ್ಷದ ಎಲ್ಲ ಅಭ್ಯರ್ಥಿಗಳು, ಅವರ ಕ್ಷೇತ್ರದ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿರುವ ಡಿಸಿಎಂ, ಅದಕ್ಕೆ ಯುಕ್ತವಾದ ಕಾರ್ಯತಂತ್ರವನ್ನು ರೂಪಿಸಿದ್ದು ಆ ಬಗ್ಗೆ ರಾಜ್ಯ ನಾಯಕರ ಜತೆ ವಿಸ್ತೃತವಾಗಿ ಚರ್ಚೆ ನಡೆಸಿದರು. ಬಹಿರಂಗ ಪ್ರಚಾರದ ಕೊನೆ ದಿನದವರೆಗೂ ನಡೆಸಬೇಕಾದ ಪ್ರಚಾರ ಸಭೆಗಳು, ರೋಡ್ ಶೋಗಳ ಬಗ್ಗೆ ಪ್ಲ್ಯಾನ್ ಮಾಡಲಾಯಿತು.
Advertisement
ಬಹಿರಂಗ ಪ್ರಚಾರದ ನಂತರ ಮನೆ ಮನೆಯ ಪ್ರಚಾರದ ಜೊತೆಗೆ, ಆಧುನಿಕ ತಂತ್ರಜ್ಞಾನದ ನೆರವಿನಿಂದ ಜನರಿಗೆ ಮತ್ತಷ್ಟು ಹತ್ತಿರವಾಗುವುದು ಹಾಗೂ ಪಕ್ಷದ ವಿಚಾರಗಳನ್ನು, ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಗಳನ್ನು ಜನರಿಗೆ ಮನದಟ್ಟು ಮಾಡಿಸುವುದನ್ನು ಮುಖ್ಯವಾಗಿ ಮಾಡಬೇಕು ಎಂದು ನಾಯಕರಿಗೆ ಡಿಸಿಎಂ ಅವರು ಸೂಚಿಸಿದರು.
ಬೆಲೆ ಏರಿಕೆ ಮತ್ತಿತರೆ ವಿಷಯಗಳನ್ನು ಇಟ್ಟುಕೊಂಡು ಎಲ್ಡಿಎಫ್, ಯುಡಿಎಫ್ ಕೂಟಗಳು ಮಾಡುತ್ತಿರುವ ಅಪಪ್ರಚಾರಕ್ಕೆ ಬಲವಾದ ತಿರುಗೇಟು ಕೊಡಬೇಕು. ಪ್ರಚಾರ ಸಭೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ನಾಯಕರಿಗೆ ಸಲಹೆ ನೀಡಿದರು.
ಬಹಿರಂಗ ಸಭೆ, ರೋಡ್ ಶೋ:
ಸರಣಿ ಸಭೆಗಳ ನಡುವೆಯೂ ಡಾ.ಅಶ್ವಥ್ ನಾರಾಯಣ್ ಅವರು ತಿರುವನಂತಪುರದ ವಿವಿಧೆಡೆ ಬಹಿರಂಗ ಪ್ರಚಾರ ನಡೆಸಿದರು. ನೇಮಮ್ ವಿಧಾನಸಭೆ ಕ್ಷೇತ್ರದಲ್ಲಿ ಪೂಜಾಪುರದ ಸರಸ್ವತಿ ಮಂದಿರದಲ್ಲಿ ಬಿಜೆಪಿ ಅಭ್ಯರ್ಥಿ ಕುಮ್ಮನಮ್ ರಾಜಶೇಖರ್ ಅವರ ಪರ ಅವರು ಬಿರುಸಿನ ಪ್ರಚಾರ ನಡೆಸಿದರು.
ಹಾಗೆಯೇ ತಿರುವನಂತಪುರದ ಕಾಹಕುಟ್ಟಂ ಕ್ಷೇತ್ರದಿಂದ ಕಣಕ್ಕಿಳಿದಿರುವ ಪಕ್ಷದ ರಾಜ್ಯ ಉಪಾಧ್ಯಕ್ಷೆ ಶೋಭಾ ಸುರೇಂದ್ರನ್ ಅವರ ಪರ ಅಶ್ವತ್ಥನಾರಾಯಣ ಅವರು ಬಹಿರಂಗ ಪ್ರಚಾರ ನಡೆಸಿದರು.
ಬಿಜೆಪಿಯಿಂದ ಮಾತ್ರ ಬಲಿಷ್ಠ ಕೇರಳ ನಿರ್ಮಾಣ:
ಸಶಕ್ತ ಕೇರಳ ರಾಜ್ಯವನ್ನು ನಿರ್ಮಾಣ ಮಾಡಬೇಕಾದರೆ ರಾಜ್ಯದಲ್ಲಿ ಹೊಸ ರಾಜಕೀಯ ಶಕ್ತಿ ಉದಯ ಆಗಬೇಕು ಎಂದು ಪ್ರತಿಪಾದಿಸಿದ ಡಿಸಿಎಂ, ಎಲ್ಡಿಎಫ್-ಯುಡಿಎಫ್ ಕೂಟಗಳು ಅಪ್ರಸ್ತುತವಾಗಿವೆ. ಎಲ್ಲೆಡೆ ಅಸ್ತಿತ್ವ ಕಳೆದುಕೊಂಡಿರುವ ರಾಜಕೀಯ ಪಕ್ಷಗಳಿಗೆ ಮತ್ತೆ ಅವಕಾಶ ನೀಡಬಾರದು ಎಂದು ಜನರಲ್ಲಿ ಮನವಿ ಮಾಡಿದರು.
ಬಹಿರಂಗ ಸಭೆಗಳಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಿದ ಡಿಸಿಎಂ, ‘ಎಪ್ಪತ್ತು ವರ್ಷಗಳಿಂದ ಕೇರಳ ಹಿಂದುಳಿದಿದ್ದು ಸಾಕು. ರಾಜ್ಯವನ್ನು ಹಾಳುಗೆಡವಿದ್ದು ಸಾಕು. ಇನ್ನಾದರೂ ಅಭಿವೃದ್ಧಿಪರ ಏಕೈಕ ಪಕ್ಷವಾದ ಬಿಜೆಪಿಯನ್ನು ಆಯ್ಕೆ ಮಾಡಿಕೊಳ್ಳಬೇಕಾದ ಅಗತ್ಯ ಈಗ ಹೆಚ್ಚಾಗಿದೆ’ ಎಂದು ಬಲವಾಗಿ ಪ್ರತಿಪಾದಿಸಿದರು.