ಕೊಚ್ಚಿ: ಕೇರಳದಲ್ಲಿ ರಾಜಕೀಯ ಬದಲಾವಣೆಗೆ ಇದು ಸಕಾಲ. ಈಗಲ್ಲದಿದ್ದರೆ ಇನ್ನೆಂದೂ ಅಲ್ಲ. ಕಳೆದ 73 ವರ್ಷಗಳಿಂದ ರಾಜ್ಯವನ್ನು ಕತ್ತಲೆಯಲ್ಲಿ ಇಟ್ಟಿರುವ ಎಲ್ಡಿಎಫ್ ಮತ್ತು ಯುಡಿಎಫ್ ಕೂಟಗಳನ್ನು ತಿರಸ್ಕರಿಸುವ ಸಮಯ ಬಂದಿದೆ ಎಂದು ಕೇರಳದ ಬಿಜೆಪಿ ಸಹ ಪ್ರಭಾರಿ, ರಾಜ್ಯದ ಉಪಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವಥ್ ನಾರಾಯಣ್ ಹೇಳಿದರು.
ವಿಧಾಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಡುಕ್ಕಿ ಜಿಲ್ಲೆಯ ತೊಡುಪ್ಪುಳದಲ್ಲಿ ಸಂಜೆ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, 73 ವರ್ಷಗಳ ದುರಾಡಳಿತ ಸಾಕು. ಒಬ್ಬರಾದ ಮೇಲೋಬ್ಬರು ಕೇರಳವನ್ನು ಕತ್ತಲೆಯಲ್ಲಿಟ್ಟು ಹಾಳು ಮಾಡಿದ್ದು ಸಾಕು. ಇನ್ನಾದರೂ ಹೊಸ ರಾಜಕೀಯ ಶಕ್ತಿ ಉದಯಕ್ಕೆ ಅವಕಾಶ ನೀಡಿ ಎಂದು ಜನತೆಗೆ ಕರೆ ನೀಡಿದರು.
Advertisement
Advertisement
ದೇಶ ಮುಂದೆ ಹೋಗುತ್ತಿದೆ, ಕೇರಳ ಹಿಂದೆ ಬಿದ್ದಿದೆ!: ಭಾರತ ಇವತ್ತು ನಾಗಾಲೋಟದಲ್ಲಿ ಮುಂದುವರಿಯುತ್ತಿದೆ. ಯಾರ ಊಹೆಗೂ ನಿಲುಕದಂತೆ ಇಡೀ ದೇಶವೇ ಮುಂದೆ ಹೋಗುತ್ತಿದ್ದರೆ, ಕೇರಳ ಮಾತ್ರ ಹಿಂದೆ ಬಿದ್ದಿದೆ. ಹೂಡಿಕೆಗಳಿಲ್ಲ, ಕೈಗಾರಿಕೆಗಳಿಲ್ಲ, ಉದ್ಯೋಗ ಸೃಷ್ಟಿ ಇಲ್ಲ. ಹೀಗಾದರೆ ಜನರ ಜೀವನ ಮಟ್ಟ ಸುಧಾರಿಸುವುದು ಹೇಗೆ? ಹೊಸತನವನ್ನು ಮೈಗೂಡಿಸಿಕೊಂಡು ಇತರೆ ರಾಜ್ಯಗಳಂತೆ ಪ್ರಗತಿಯತ್ತ ದಾಪುಗಾಲು ಇಡುವುದು ಹೇಗೆ ಎಂದು ಡಿಸಿಎಂ ಪ್ರಶ್ನಿಸಿದರು.
Advertisement
ಕೇವಲ ಆರು ವರ್ಷಗಳಲ್ಲಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಅದ್ಭುತಗಳನ್ನೇ ಸೃಷ್ಟಿ ಮಾಡಲಾಗಿದೆ. ಕಳೆದ 73 ವರ್ಷಗಳಲ್ಲಿ ಸಾಧ್ಯವಾಗದ್ದು ಕೇವಲ 6 ವರ್ಷಗಳಲ್ಲಿ ಸಾಧ್ಯವಾಗಿದ್ದು ಹೇಗೆ ಎಂಬುದನ್ನು ಒಮ್ಮೆ ಯೋಚಿಸಿ. ದೇಶಕ್ಕಾಗಿ ಚಿಂತನೆ ಮಾಡುವ ಹಾಗೂ ದೂರದೃಷ್ಟಿಯುಳ್ಳ ಸಮರ್ಥ ನಾಯಕತ್ವದಿಂದ ಮಾತ್ರ ಇದು ಸಾಧ್ಯವಾಗುತ್ತದೆ. ಇಡೀ ಜಗತ್ತೇ ಭಾರತದಲ್ಲಿ ಆಗುತ್ತಿರುವ ಸುಧಾರಣೆಗಳನ್ನು ಕಂಡು ಬೆರಗಾಗಿದೆ ಎಂದು ಡಿಸಿಎಂ ಪ್ರತಿಪಾದಿಸಿದರು.
Advertisement
ಸ್ವಾವಲಂಬನೆಯತ್ತ ಭಾರತ: ಅನೇಕ ಕ್ಷೇತ್ರಗಳಲ್ಲಿ, ಮುಖ್ಯವಾಗಿ ವೈದ್ಯಕೀಯ ಕ್ಷೇತ್ರದಲ್ಲಿ ನಾವು ಅನೇಕ ದೇಶಗಳನ್ನು ಅವಲಂಭಿಸಿದ್ದೆವು. ಆದರೆ ಇಂದು ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ನಾವು ಸ್ವಾವಲಂಬನೆ ಸಾಧಿಸಿದ್ದೇವೆ. ನಮಗೆ ಅಗತ್ಯವಿರುವ ಎಲ್ಲ ಉತ್ಪನ್ನಗಳೂ ನಮ್ಮಲ್ಲೇ ತಯಾರಾಗುತ್ತಿವೆ. ಆತ್ಮನಿರ್ಭರ ಭಾರತ ಕಲ್ಪನೆಯಡಿ ಭಾರತ ಸಂಪೂರ್ಣವಾಗಿ ಸ್ವಾವಲಂಬನೆಯತ್ತ ಸಾಗುತ್ತಿದೆ ಎಂದು ಡಾ.ಅಶ್ವಥ್ ನಾರಾಯಣ್ ಒತ್ತಿ ಹೇಳಿದರು.
ಕೆಲವರು ಭಯೋತ್ಪಾದಕರನ್ನು ಬೆಳೆಸುತ್ತಿದ್ದರು, ಉತ್ತೇಜಿಸುತ್ತಿದ್ದರು. ನಾವು ಅವರನ್ನು ಅವರನ್ನು ನಾಶಪಡಿಸಿದ್ದೇವೆ. ಚೀನಾ ಹಿಂದೆ ದೊಡ್ಡ ಶಕ್ತಿಯಾಗಿತ್ತು, ಈಗಲ್ಲ. ಭಾರತವು ಆ ದೇಶವನ್ನು ಮೀರಿ ಬೆಳೆಯುತ್ತಿದೆ. ನಮ್ಮ ತಾಕತ್ತು ಏನು ಎಂಬುದನ್ನು ಅವರಿಗೆ ತೋರಿಸಿದ್ದೇವೆ. ನಮ್ಮ ದೇಶದ ಒಂದು ಇಂಚು ಭೂಭಾಗವನ್ನೂ ಕಬಳಿಸಲು ಅವರಿಗೆ ಸಾಧ್ಯವಾಗಿಲ್ಲ ಎಂದರೆ ಬಾರತ ಯಾವ ದಿಕ್ಕಿನತ್ತ ಸಾಗುತ್ತಿದೆ ಎಂಬುದನ್ನು ಊಹೆ ಮಾಡಬಹುದು ಎಂದು ಡಿಸಿಎಂ ನುಡಿದರು. ಕೇರಳ ಬಿಜೆಪಿಯ ಹಲವಾರು ನಾಯಕರು, ಇಡುಕ್ಕಿ ಜಿಲ್ಲೆಯ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.