ನವದೆಹಲಿ: ಪ್ರವಾಹದಿಂದ ತತ್ತರಿಸಿರುವ ಕರ್ನಾಟಕದ ಸಂತ್ರಸ್ತರ ನೆರವಿಗಾಗಿ ಕೇಂದ್ರ ಸರ್ಕಾರವು ರಾಷ್ಟ್ರೀಯ ನೈಸರ್ಗಿಕ ವಿಪತ್ತು ಪರಿಹಾರ ನಿಧಿಯಡಿ 577.84 ಕೋಟಿ ಮುಂಗಡ ಪರಿಹಾರ ಮಂಜೂರು ಮಾಡಿದೆ.
ರಾಜ್ಯದಲ್ಲಿ ಪ್ರವಾಹದಿಂದ ಅಂದಾಜು 24,941 ಕೋಟಿ ರೂ. ನಷ್ಟವಾಗಿದ್ದು, ರಾಜ್ಯ ಸರ್ಕಾರ ಕೇಂದ್ರಕ್ಕೆ 10 ಸಾವಿರ ಕೋಟಿ ರೂ. ಪರಿಹಾರ ನೀಡುವಂತೆ ಮನವಿ ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಮುಂಗಡವಾಗಿ ಎನ್ಡಿಆರ್ ನಿಧಿಯಿಂದ 577 ಕೋಟಿ ರೂ.ಗಳನ್ನು ನೀಡಿದೆ.
Advertisement
Advertisement
ಕೇಂದ್ರದ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ ನಡೆದ ಉನ್ನತ ಮಟ್ಟದ ಸಮಿತಿಯ ಸಭೆಯಲ್ಲಿ ಚರ್ಚೆ ನಡೆಸಿದ ಬಳಿಕ, ಕರ್ನಾಟಕ ಹೊರತುಪಡಿಸಿ ಇತರ ಐದು ರಾಜ್ಯಗಳಿಗೂ ನೈಸರ್ಗಿಕ ವಿಕೋಪ ಪರಿಹಾರ ಒದಗಿಸಲು ನಿರ್ಧರಿಸಲಾಗಿದೆ.
Advertisement
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರಾಜ್ಯದಾದ್ಯಂತ ಭಾರೀ ಮಳೆಯಿಂದ ಪ್ರವಾಹ ತಲೆದೋರಿ ಉಂಟಾಗಿದ್ದ ಭೂಕುಸಿತ ಮತ್ತು ಬೆಳೆ ಹಾನಿಯಿಂದ ಸಂಕಷ್ಟಕ್ಕೆ ಒಳಗಾಗಿರುವ ಸಂತ್ರಸ್ತರಿಗೆ ಈ ಮೂಲಕ ನೆರವು ದೊರೆಯಲಿದೆ. ಕಳೆದ ಮೇ ತಿಂಗಳಲ್ಲಿ ಬೀಸಿದ್ದ ಅಂಪನ್ ಚಂಡಮಾರುತದಿಂದ ತತ್ತರಿಸಿರುವ ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳಿಗೆ ಕ್ರಮವಾಗಿ 2707.77 ಹಾಗೂ 128.33 ಕೋಟಿ ಒದಗಿಸಿದೆ.
Advertisement
ಉಳಿದಂತೆ ಸಮಿತಿಯು ಪ್ರವಾಹದಿಂದ ಸಮಸ್ಯೆಗೆ ಒಳಗಾಗಿರುವ ಮಧ್ಯಪ್ರದೇಶಕ್ಕೆ 611.61 ಕೋಟಿ ಒದಗಿಸಲು ತೀರ್ಮಾನಿಸಿದೆ. ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾಗಿರುವ ಮಹಾರಾಷ್ಟ್ರ, ಸಿಕ್ಕಿಂ ರಾಜ್ಯಗಳಿಗೂ ಪರಿಹಾರ ಮಂಜೂರು ಮಾಡಲಾಗಿದ್ದು, ಎಲ್ಲ ರಾಜ್ಯಗಳಿಗೂ ಸೇರಿ ಒಟ್ಟು 4381.88 ಕೋಟಿ ರೂ. ಒದಗಿಸಲಾಗುತ್ತಿದೆ. ಈಗಾಗಲೇ ಎಲ್ಲಾ 28 ರಾಜ್ಯಗಳಿಗೆ ಪ್ರಸಕ್ತ ಸಾಲಿನ ರಾಜ್ಯಗಳ ನೈಸರ್ಗಿಕ ವಿಪತ್ತು ಪರಿಹಾರ ನಿಧಿ ಅಡಿ ಒಟ್ಟು 15524.43 ಕೋಟಿ ಪರಿಹಾರವನ್ನು ಒದಗಿಸಲಾಗಿದೆ.