ಚಿತ್ರದುರ್ಗ: ಕೃಷಿ ಆ್ಯಪ್ ಬಿಡುಗಡೆಗಾಗಿ ರಾಜ್ಯ ಪ್ರವಾಸ ಕೈಗೊಂಡಿದ್ದ ಕೃಷಿ ಸಚಿವ ಬಿಸಿ ಪಾಟೀಲ್ ಕೆಮ್ಮುತ್ತಲೇ ರೈತರು, ಅಧಿಕಾರಿಗಳು ಹಾಗೂ ಜನಪ್ರತಿ ನಿಧಿಗಳೊಂದಿಗೆ ಚರ್ಚಿಸಿದ್ರಿಂದ ನೆರೆದಿದ್ದವರಲ್ಲಿ ಕ್ಷಣಕಾಲ ಢವಢವ ಶುರುವಾಗಿತ್ತು. ಕೊರೊನಾದಿಂದಾಗಿ ಆಸ್ಪತ್ರೆ ಸೇರಿದ್ದ ಸಚಿವ ಬಿಸಿ ಪಾಟೀಲ್ ಹಾಗೂ ಅವರ ಕುಟುಂಬ ಗುರುವಾರವಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿತ್ತು.
Advertisement
ಆದರೆ ನಿನ್ನೆಯೇ ಸಚಿವರು ಕಾಯಕಕ್ಕೆ ಹಾಜರಾಗಿದ್ದು, ರಾಜ್ಯದ ವಿವಿಧೆಡೆಗಳಲ್ಲಿ ಕೃಷಿ ಸರ್ವೆ ಆ್ಯಪ್ ಗೆ ಚಾಲನೆ ನೀಡಿದ್ದಾರೆ. ನಿನ್ನೆ ಸಂಜೆ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕಸ್ತೂರಿ ರಂಗಪ್ಪ ಹಳ್ಳಿಯ ಜಯ್ಯಣ್ಣ ಎಂಬ ರೈತನ ಜಮೀನಿನಲ್ಲಿ ಕೂಡ ಕೃಷಿ ಸರ್ವೆ ಆ್ಯಪ್ ಉದ್ಘಾಟನೆಗಾಗಿ ಧಾವಿಸಿದ್ದರು. ಈ ವೇಳೆ ಸಚಿವ ಬಿಸಿ ಪಾಟೀಲ್ ಗೆ ಹಿರಿಯೂರು ಶಾಸಕಿ ಪೂರ್ಣಿಮ, ಚಿತ್ರದುರ್ಗ ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು ಹಾಗೂ ಕೃಷಿ ಜೆಡಿ ಸದಾಶಿವ ಅವರು ಸಾಥ್ ನೀಡಿದರು.
Advertisement
Advertisement
ಜನರ ಮಧ್ಯೆ ಬರುವ ಮುನ್ನ ಸಚಿವರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ನೆರೆದಿದ್ದವರಿಗೆ ಸೂಚಿಸಿದ್ದರೂ ಯಾರೊಬ್ಬರೂ ಅವರ ಮಾತಿಗೆ ಸೊಪ್ಪು ಹಾಕಲಿಲ್ಲ. ಬದಲಾಗಿ ಅವರನ್ನು ಸುತ್ತುವರಿದು ಅಕ್ಕಪಕ್ಕ ನಿಂತರು. ಅಲ್ಲದೇ ಹಿರಿಯೂರು ಶಾಸಕಿ ಪೂರ್ಣಿಮಾ ಹಾಗೂ ಜಿಪಂ ಅಧ್ಯಕ್ಷೆ ಶಶಿಕಲಾ ಕೂಡ ಸಚಿವರ ಪಕ್ಕದಲ್ಲೇ ನಿಂತು ಆ್ಯಪ್ ಗೆ ಚಾಲನೆ ನೀಡಿದರು.
Advertisement
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಲು ಮುಂದಾದ ಕೌರವ ಬಿಸಿ ಪಾಟೀಲ್ ಗೆ ಕೆಮ್ಮು ಜೋರಾಗಿದ್ದರಿಂದ ದೂರವೇ ನಿಂತು ಹೇಳಿಕೆ ನೀಡಿದರು. ಈ ವೇಳೆ ನೆರೆದಿದ್ದ ಎಲ್ಲರಲ್ಲೂ ಕ್ಷಣಕಾಲ ಆತಂಕ ಮನೆ ಮಾಡಿತು. ಆದರೂ ಸಚಿವರು, ಸ್ವಲ್ಪ ಸುಧಾರಿಸಿಕೊಂಡು ತಮ್ಮ ಮಾತನ್ನು ಮುಂದುವರಿಸುತ್ತಾ ಕಾಂಗ್ರೆಸ್ ನಾಯಕರ ವಿರುದ್ಧ ಗುಡುಗಿದರು. ಬೆಂಗಳೂರಿನ ಗಲಭೆ ಪ್ರಕರಣಕ್ಕೆ ಅವರೇ ಕಾರಣ ಎಂದು ಆರೋಪಿಸಿದರು. ಈ ವೇಳೆ ಸಚಿವರೊಂದಿಗೆ ಧಾವಿಸಿದ್ದ ಅವರ ಬೆಂಬಲಿಗರು, ಅಧಿಕಾರಿಗಳು ಹಾಗೂ ಸಾರ್ವಜನಿಕರ ತುಳಿತದಿಂದಾಗಿ ರೈತನ ಅರ್ಧದಷ್ಟು ಶೇಂಗಾ ಪೈರು ನಾಶವಯ್ತು. ಆದರೆ ರೈತ ಮಾತ್ರ ಸಚಿವರು ಬಂದ ಮೇಲೆ ಇವೆಲ್ಲಾ ಸಹಜ ಅಂತ ಮೇಲ್ಮಾತಿಗೆ ಹೇಳುವ ಮೂಲಕ ಮನದಲ್ಲಿನ ನೋವನ್ನು ಮರೆಮಾಚಿದರು.