ಉಡುಪಿ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಶಿವರಾತ್ರಿ ಪೂಜೆ ಬಗ್ಗೆ ರಾಜ್ಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಪೂಜಾಪದ್ಧತಿಯ ಬಗ್ಗೆ ಮಾಧ್ವ, ಶೈವ ಗುಂಪುಗಳ ನಡುವೆ ಜಿಜ್ಞಾಸೆ ಮೂಡಿದ್ದು, ಎರಡೂ ಗುಂಪಿನವರನ್ನು ಕರೆದು ಮಾತನಾಡುವೆ ಎಂದು ರಾಜ್ಯ ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
Advertisement
ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀನಿವಾಸ ಪೂಜಾರಿ ಅವರು, ಸೋಮವಾರ ಈ ಬಗ್ಗೆ ಸಭೆ ನಡೆಸಲಾಗುವುದು. ಶಿವನ ಅಂಶ ಇರುವ ದೇವಾಲಯಗಳಲ್ಲಿ ಶಿವರಾತ್ರಿ ಆಚರಣೆ ಮಾಡಲು ಇಲಾಖೆ ಸೂಚಿಸುತ್ತದೆ. ಕುಕ್ಕೆಯಲ್ಲಿ ಈ ಬಗ್ಗೆ ಚರ್ಚೆ ಇದ್ದರೆ ಆಗಮ ಪಂಡಿತರು ತೀರ್ಮಾನ ಕೈಗೊಳ್ಳುತ್ತಾರೆ. ದೇವಸ್ಥಾನ, ಮುಜರಾಯಿ ಇಲಾಖೆಯ ಆಗಮ ಪಂಡಿತರು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳಿದರು.
Advertisement
Advertisement
ಅಷ್ಟಮಂಗಲದ ವಿಚಾರಗಳನ್ನು ದೇವಸ್ಥಾನದ ಆಡಳಿತ ಮಂಡಳಿ ಗಮನಿಸುತ್ತದೆ. ಈ ಬಗ್ಗೆ ನಮ್ಮ ಮೇಲೆ, ಇಲಾಖೆ ಮೇಲೆ ಯಾವುದೇ ಒತ್ತಡ ಇಲ್ಲ, ಸೋಮವಾರ ನಡೆಯುವ ಸಭೆಯಲ್ಲಿ ನಾನು ಪಾಲ್ಗೊಳ್ಳುತ್ತಿಲ್ಲ ತಜ್ಞರು ಆಗಮ ಪಂಡಿತರು ಈ ಬಗ್ಗೆ ಚರ್ಚಿಸಲಿದ್ದಾರೆ ಎಂದರು.
Advertisement
ಪೂಜಾಕ್ರಮ ಬದಲಿಸಬೇಡಿ
ಮಧ್ವಾಚಾರ್ಯರ ಕಾಲದಿಂದ ಕುಕ್ಕೆಯಲ್ಲಿ ಮಠದವರೇ ಪೂಜೆ ಮಾಡುತ್ತಾ ಬಂದಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ದೇವಾಲಯದ ಹಾಗೆ ಅಲ್ಲ. ಕುಕ್ಕೆಯ ಆಚರಣೆ ಸಂಪ್ರದಾಯಗಳು ಮಠದಂತೆ ಇದೆ. ಕುಕ್ಕೆಯಲ್ಲಿ ತಲೆಯ ಮೇಲೆ ಹೊತ್ತುಕೊಂಡು ಹೋಗುವ ಉತ್ಸವ ನಡೆಯುವುದಿಲ್ಲ. ಆಚಾರ್ಯ ಮಧ್ವರ ಕಾಲದಿಂದ ಮಾಧ್ವರಿಂದ ಪೂಜೆ ನಡೆಯುತ್ತಿದೆ ಎಂದು ಉಡುಪಿ ಪಲಿಮಾರು ಮಠಾಧೀಶ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅಭಿಪ್ರಾಯ ಮಂಡಿಸಿದ್ದಾರೆ.
ಕುಕ್ಕೆಯಲ್ಲಿ ಈ ಹಿಂದಿನಿಂದಲೂ ನಡೆದುಕೊಂಡು ಬಂದ ಪೂಜಾ ಪದ್ಧತಿ ಯನ್ನು ಮುಂದುವರಿಸಬೇಕು. ಆಚರಣೆಯಲ್ಲಿ ಭಿನ್ನವಾದರೆ ದೇವಸ್ಥಾನ ಅದನ್ನು ಒಪ್ಪಿಕೊಳ್ಳುವುದಿಲ್ಲ. ಪ್ರತಿಷ್ಠಾ ಕಾಲದಲ್ಲಿ ಪೂಜೆ ಯಾವ ರೀತಿ ಆರಂಭವಾಗಿದೆ ಅದು ಹಾಗೆಯೇ ಮುಂದುವರೆಯಬೇಕು. ಯಾವುದೇ ವ್ಯತ್ಯಾಸಗಳು ಆದರೆ ದೋಷ ಬರುತ್ತದೆ. ನನಗೆ ರುದ್ರನ ಮೇಲೆ ದ್ವೇಷ ಇಲ್ಲ. ನಾನು ರುದ್ರ ಪಾರಾಯಣ ಮಾಡುತ್ತೇನೆ. ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಾನು ರುದ್ರ ಪಾರಾಯಣ ಮಾಡಿಸುತ್ತಿದ್ದೇನೆ. ಯಾವುದೇ ದೇವಸ್ಥಾನದಲ್ಲಿ ಆಗಲಿ ಹಿಂದಿನಿಂದ ಬಂದ ಆಚರಣೆ ಅದು ಹಾಗೆಯೇ ಮುಂದುವರೆಯಬೇಕು. ಮಂತ್ರ ಕ್ರಮ ಎಲ್ಲವೂ ತಂತ್ರದ ರೀತಿಯಲ್ಲಿ ಬಂದರೆ ಚಂದ ಎಂದರು.
ಕುಕ್ಕೆಯಲ್ಲಿ ಸ್ಕಂದನ ದೇವಸ್ಥಾನ ಇರುವುದು. ಸ್ಕಂದನ ಪೂಜೆ ಹೇಗೆ ಆಗಬೇಕೋ ಅದು ಹಾಗೆ ನಡೆದುಕೊಂಡು ಬರುತ್ತಿದೆ. ಸುಬ್ರಮಣ್ಯ ಸ್ಕಂದ ಕೇಂದ್ರಿತವಾದಂತಹ ಕ್ಷೇತ್ರ. ಬದಲಾವಣೆಗಳು ಆಗಬೇಕಾದರೆ ವಿಮರ್ಶೆ ಮಾಡಬೇಕು ಎಂಬುದು ನನ್ನ ಅನಿಸಿಕೆ. ನನ್ನ ಅಭಿಪ್ರಾಯ ಕೇಳಿದರೆ ಯಾವುದೇ ಪೂಜಾ ಬದಲಾವಣೆಗಳು ಬೇಡ. ಆದರೆ ಬದಲಾವಣೆ ಬೇಕು ಅನ್ನುವವರು ವಿಮರ್ಶೆ ಮಾಡಿ ಎಂದು ಪಲಿಮಾರು ಸ್ವಾಮೀಜಿ ಸಲಹೆ ಕೊಟ್ಟಿದ್ದಾರೆ.