ಬೆಂಗಳೂರು: ಕಿಂಡಿ ಕೊರೆದು ಚಿನ್ನದಂಗಡಿಯಲ್ಲಿ ಲಕ್ಷಾಂತರ ಮೌಲ್ಯದ ಆಭರಣ ದೋಚಿದ್ದ ನೇಪಾಳಿ ಗ್ಯಾಂಗನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸಿಸಿಬಿ ಪೊಲೀಸರು ನೇಪಾಳಿ ಗ್ಯಾಂಗಿನ ಆರು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಅಮರ್ ಸಿಂಗ್, ಗಣೇಶ ಬಹದ್ದೂರ್ ಶಾಹಿ, ಕೃಷ್ಣಾ ರಾಜ್, ಚರಣ್ ಸಿಂಗ್, ಸಲೀಂ ಪಾಷ ಮತ್ತು ಶಾಹಿದ್ ಎಂದು ಗುರುತಿಸಲಾಗಿದೆ. ಆರೋಪಿಗಳು ಗ್ಯಾಸ್ ಕಟರ್ ಬಳಸಿ ಚಿನ್ನದಂಗಡಿಗೆ ಕಿಂಡಿ ಕೊರೆದಿದ್ದರು. ನಂತರ ಚಿನ್ನಾಭರಣ ದೋಚಲು ವಿಫಲ ಯತ್ನ ನಡೆಸಿ, ಬೆಳ್ಳಿ ದೋಚಿ ಅದೇ ಕಿಂಡಿಯಿಂದ ಎಸ್ಕೇಪ್ ಆಗಿದ್ದರು.
Advertisement
Advertisement
ಆಗಸ್ಟ್ 5 ರಂದು ವೈಟ್ ಫೀಲ್ಡ್ನ ಮಾತಾಜಿ ಜ್ಯುವೆಲ್ಲರಿ ಶಾಪ್ಗೆ ಕನ್ನ ಹಾಕಿದ್ದ ದೃಶ್ಯ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆರೋಪಿಗಳು ಬೆಳಗ್ಗೆ ಸೆಕ್ಯೂರಿಟಿ ಆಗಿ ಕೆಲಸ ಮಾಡುತ್ತಿದ್ದರು. ಆದರೆ ರಾತ್ರಿ ಎಲ್ಲಿ ಕಳ್ಳತನ ಮಾಡೋದು ಅಂತ ಸ್ಕೆಚ್ ಹಾಕುತ್ತಿದ್ದರು. ಬಂಧಿತ ಆರೋಪಿಗಳು ಸುಮಾರು ಮೂರುರಿಂದ ಆರು ತಿಂಗಳು ಒಂದೊಂದು ರಾಜ್ಯದಲ್ಲಿ ವಾಸ್ತವ್ಯ ಮಾಡುತ್ತಿದ್ದರು. ನಂತರ ದೊಡ್ಡಮಟ್ಟದಲ್ಲಿ ಕನ್ನ ಹಾಕಿ ರಾಜ್ಯ ಬಿಟ್ಟು ಎಸ್ಕೇಪ್ ಆಗುತ್ತಿದ್ದರು.
Advertisement
Advertisement
ಮಾತಾಜಿ ಜ್ಯುವೆಲ್ಲರಿ ಶಾಪ್ನಲ್ಲಿ ಖತರ್ನಾಕ್ ಗ್ಯಾಂಗ್ ಬರೋಬ್ಬರಿ 50 ಕೆ.ಜಿ.ಬೆಳ್ಳಿ ದೋಚಿದ್ದರು. ಈ ತಂಡದ ಬಂಧನದಿಂದ ಬೆಂಗಳೂರಿನ ಹಲವು ಕೇಸ್ಗಳು ಪತ್ತೆಯಾಗಿವೆ. ಬಂಧಿತರಿಂದ 360 ಗ್ರಾಂ ಚಿನ್ನ, 25 ಕೆ.ಜಿ ಬೆಳ್ಳಿ, ಲ್ಯಾಪ್ ಟಾಪ್, ಕೃತ್ಯಕ್ಕೆ ಬಳಸಿದ್ದ ಗ್ಯಾಸ್ ಕಟ್ಟರ್ ಮತ್ತು ಆಟೋವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ವೈಟ್ ಫೀಲ್ಡ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಕೇಸ್ ದಾಖಲಾಗಿತ್ತು. ಬಳಿಕ ಈ ಕೇಸನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು. ಇದೀಗ ಸಿಸಿಬಿ ಪೊಲೀಸರು ಕಾರ್ಯಾಚರಣೆ ಮಾಡಿ ನೇಪಾಳಿ ಗ್ಯಾಂಗನ್ನು ಬಂಧಿಸಿದ್ದಾರೆ.