ಬೆಂಗಳೂರು: ಆನೇಕಲ್, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರದಲ್ಲಿ ಕಾಲುಬಾಯಿ ರೋಗಕ್ಕೆ ಲಸಿಕೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಕಾಲುಬಾಯಿ ರೋಗೋದ್ರೇಕ ಕಂಡು ಬಂದ ತಕ್ಷಣ ಸಭೆ ನಡೆಸಿ ಖಾಸಗಿ ಲಸಿಕಾ ಸಂಸ್ಥೆಗಳಿಂದ ಲಸಿಕೆ ಖರೀದಿಸಿ ಜಾನುವಾರುಗಳ ಆರೋಗ್ಯ ರಕ್ಷಣೆಗೆ ಪಶುಸಂಗೋಪನೆ ಇಲಾಖೆ ಕಾರ್ಯಪ್ರವೃತ್ತವಾಗಿದೆ ಎಂದು ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
ಶನಿವಾರ ಟ್ವೀಟ್ ಮೂಲಕ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಾಲುಬಾಯಿ ರೋಗಕ್ಕೆ ಲಸಿಕಾ ಅಭಿಯಾನ ನಡೆಸುತ್ತಿಲ್ಲ ಎಂದು ಆರೋಪಿಸಿದ್ದಾರೆ. ಗೋವುಗಳ ಬಗ್ಗೆ ಅವರ ಕಾಳಜಿಗೆ ಅಭಿನಂದಿಸುತ್ತೇನೆ. ಕಾಲುಬಾಯಿ ರೋಗದ ಗಂಭೀರತೆ ಬಗ್ಗೆ ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು ರೋಗೋದ್ರೇಕ ಕಂಡುಬಂದ ಜಿಲ್ಲೆಗಳಲ್ಲಿ ಖಾಸಗಿ ಸಂಸ್ಥೆಗಳಿಂದ ಲಸಿಕೆ ಖರೀದಿಸಿ ರಾಸುಗಳ ಆರೋಗ್ಯ ಕಾಪಾಡಲಾಗುತ್ತಿದೆ. ಸದ್ಯ ರಾಜ್ಯದಲ್ಲಿ ಯಾವುದೇ ರಾಸುಗಳ ಸಾವು ಸಂಭವಿಸಿಲ್ಲ. ರೋಗದ ಲಕ್ಷಣ ಕಂಡುಬಂದ ರಾಸುಗಳಿಗೆ ಚಿಕಿತ್ಸೆ ನೀಡುತ್ತಿದ್ದು, ಈ ವ್ಯಾಪ್ತಿಯ ಸುತ್ತ ಮುತ್ತಲಿನ ಪ್ರದೇಶದಲ್ಲಿ ಬೇರೆ ರಾಸುಗಳಿಗೂ ತಕ್ಷಣದಲ್ಲಿಯೇ ಅಧಿಕಾರಿಗಳು ಲಸಿಕೆ ನೀಡುತ್ತಿರುವುದರಿಂದ ಕಾಲುಬಾಯಿ ರೋಗ ಹತೋಟಿಯಲ್ಲಿದೆ ಎಂದು ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ. ಇದನ್ನೂ ಓದಿ: ಗೋವುಗಳನ್ನು ಸಾವಿನ ಬಾಯಿಗೆ ದೂಡಿರುವುದು ಎಂಥ ‘ಗೋ’ರಕ್ಷಣೆ? – ಕುಮಾರಸ್ವಾಮಿ ಪ್ರಶ್ನೆ
Advertisement
ಲಸಿಕೆ ನೀಡಿದ ಜಿಲ್ಲೆಗಳು: ಚಿಕ್ಕಬಳ್ಳಾಪುರದಲ್ಲಿ 2100, ಆನೇಕಲ್ 1450 ಹಾಗೂ ರಾಮನಗರದ 70 ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ. ರಾಮನಗರದಲ್ಲಿ 5 ರಾಸುಗಳಲ್ಲಿ ರೋಗೋದ್ರೇಕ ಕಾಣಿಸಿಕೊಂಡಿತ್ತು. ಅದರಲ್ಲಿ 4 ರಾಸುಗಳು ಆರೋಗ್ಯ ಸ್ಥಿರವಾಗಿದ್ದು ಒಂದು ರಾಸುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಯಾವುದೇ ಜಿಲ್ಲೆಗಳಲ್ಲಿ ಕಾಲುಬಾಯಿ ರೋಗದಿಂದ ರಾಸುಗಳ ಸಾವು ಸಂಭವಿಸಿಲ್ಲ.
Advertisement
‘ಗೋ‘ ರಕ್ಷಣೆ ಬಗ್ಗೆ ಬಿಜೆಪಿ ಹಾದಿಬೀದಿಯಲ್ಲಿ ಅರಚುತ್ತದೇ ಹೊರತು, ಗೋವುಗಳ ರಕ್ಷಣೆ ಮಾಡುವುದಿಲ್ಲ ಎಂಬುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ. ಹಸುಗಳಲ್ಲಿ ಕಾಣಿಸಿಕೊಳ್ಳುವ ಗಂಭೀರ ಕಾಯಿಲೆಯಾದ ಕಾಲುಬಾಯಿ ಜ್ವರದ–FMD ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಲಸಿಕಾ ಅಭಿಯಾನ ನಡೆಸಿಯೇ ಇಲ್ಲ. ರಾಜ್ಯ ಸರ್ಕಾರ ಕೇಳಿಲ್ಲ. ಈಗ ರಾಸುಗಳು ನರಳುತ್ತಿವೆ.
1/5
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) June 5, 2021
Advertisement
ಕಳೆದ ನವೆಂಬರ್ – ಡಿಸೆಂಬರ್ನಲ್ಲಿ ಕಾಲುಬಾಯಿ ಲಸಿಕಾ ಅಭಿಯಾನ ಮಾಡಲಾಗಿದೆ. 2013 ರಿಂದ ಪ್ರತಿವರ್ಷ ಲಸಿಕೆ ನೀಡುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಪ್ರತಿ ವರ್ಷ ಕೇಂದ್ರ ಸರ್ಕಾರ ಮತ್ತು ರಾಜ್ಯಸರ್ಕಾರ 60:40 ಅನುಪಾತದಲ್ಲಿ ಲಸಿಕಾ ಕಾರ್ಯಕ್ರಮ ನಡೆಯುತ್ತಿತ್ತು. ಕಳೆದ ವರ್ಷದಿಂದ ಕಾಲುಬಾಯಿ ರೋಗದ ಲಸಿಕಾ ಅಭಿಯಾನ ಸಂಪೂರ್ಣವಾಗಿ ಕೇಂದ್ರದ ಯೋಜನೆಯಾಗಿ ನಡೆಯುತ್ತಿದೆ. ಈ ಸಲ ಕೋವಿಡ್ನಿಂದಾಗಿ ಕೇಂದ್ರದಿಂದ ಲಸಿಕಾ ವೇಳಾಪಟ್ಟಿ ನೀಡುವುದು ವಿಳಂಬವಾಗಿದೆ.
Advertisement
ಸದ್ಯ ಕೇಂದ್ರ ಸರ್ಕಾರದೊಂದಿಗೆ ಎಲ್ಲ ಅಗತ್ಯ ಸಂಹವನ ನಡೆಸಲಾಗಿದ್ದು ಜುಲೈ ತಿಂಗಳಿನಲ್ಲಿ ಸಾಮೂಹಿಕ ಲಸಿಕಾ ಅಭಿಯಾನ ನಡೆಯುವ ಮಾಹಿತಿ ಕೇಂದ್ರ ಸರ್ಕಾರದಿಂದ ದೊರೆತಿದೆ. ಸದ್ಯ ರೋಗೋದ್ರೇಕ ಕಂಡು ಬಂದಲ್ಲಿ ಸ್ಥಳೀಯವಾಗಿ ಅಗತ್ಯತೆಗೆ ಅನುಗುಣವಾಗಿ ಆಯಾ ಜಿಲ್ಲೆಗಳಲ್ಲಿ ಲಸಿಕೆ ಖರೀದಿಗೆ ತಾಂತ್ರಿಕ ಅನುಮೋದನೆ ನೀಡಲಾಗಿದ್ದು ರಾಸುಗಳ ಆರೋಗ್ಯದ ದೃಷ್ಟಿಯಿಂದ ಕ್ಷಿಪ್ರ ಕಾರ್ಯಾಚರಣೆ ನಡೆಸಲು ಈಗಾಗಲೇ ಅಧಿಕಾರಿಗಳಿಗೆ ತಿಳಿಸಲಾಗಿದೆ.