– ಸಾರ್ವಜನಿಕವಾಗಿ ಅಧಿಕಾರಿಗಳಿಗೆ ಎಚ್ಚರಿಕೆ
ಯಾದಗಿರಿ: ವಿವಿಧ ಕಾಮಗಾರಿಗಳ ಅಸಮರ್ಪಕ ನಿರ್ವಹಣೆಗೆ ಅಧಿಕಾರಿಗಳ ವಿರುದ್ಧ ಯಾದಗಿರಿ ಜಿ.ಪಂ ಸಿಇಓ ಶಿಲ್ಲಾ ಶರ್ಮಾ ಫುಲ್ ಗರಂ ಆಗಿ ಕ್ಲಾಸ್ ತೆಗೆದುಕೊಂಡ ಘಟನೆ ನಡೆದಿದೆ. ಸಿಇಓ ಪ್ರಶ್ನೆಗೆ ಉತ್ತರ ನೀಡಲು ಅಧಿಕಾರಿಗಳು ತಡಬಡಾಯಿಸಿದ್ದಾರೆ. ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ವೇಳೆ ಈ ಘಟನೆ ನಡೆದಿದೆ.
ವಡಗೇರಾ ತಾಲೂಕಿನ ಬಿಳ್ಹಾರ ಗ್ರಾಮದ ಪ್ರೌಢಶಾಲೆಯಲ್ಲಿ ”ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ” ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ವೇದಿಕೆಯಿಂದಿಳಿದು ಏಕಾಏಕಿ ಶಾಲಾ ಆವರಣದಲ್ಲಿನ ಕಾಮಗಾರಿ ವೀಕ್ಷಣೆಗೆ ಸಿಇಓ ಶಿಲ್ಪಾ ಶರ್ಮಾ ಮುಂದಾದರು. ಶಾಲಾ ಮಕ್ಕಳಿಗೆ ಕುಡಿಯುವ ನೀರಿಗಾಗಿ, ಜಲಜೀವನ್ ಯೋಜನೆಯಡಿ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ಮಾಡಬೇಕಿತ್ತು.
ಅಧಿಕಾರಿಗಳು ಆ ಕಾಮಗಾರಿಯನ್ನು ನಡೆಸಿರಲಿಲ್ಲ. ಇದರಿಂದಾಗಿ ಕೆಂಡಾಮಂಡಲರಾದ ಸಿಇಓ ಜನರ ನಡುವೆಯೆ ಅಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡುರು. ಇನ್ನೂ ಬಾಲಕ ಮತ್ತು ಬಾಲಕಿಯರ ಶೌಚಾಲಯ ವೀಕ್ಷಣೆ ಮಾಡಿದ ಸಿಇಓ ನಿರ್ವಹಣೆ ಬೇಸರ ವ್ಯಕ್ತಪಡಿಸಿದರು.
ನಿರ್ಲಕ್ಷ್ಯ ತೋರಿದ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ಶಿಲ್ಪಾ ಶರ್ಮಾ, ಮಾಡಿದ ತಪ್ಪು ತಿದ್ದಿಕೊಂಡು ಇನ್ನೂ ಒಂದು ವಾರದಲ್ಲಿ ಶಾಲೆಗೆ ಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಬೇಕು ಇಲ್ಲದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಡಿಸಿ ಎದುರು ಅಳಲು ತೋಡಿಕೊಂಡ ವಿದ್ಯಾರ್ಥಿಗಳು: ವಿದ್ಯಾರ್ಥಿಗಳು ಬಿಳ್ಹಾರ ಗ್ರಾಮದ ಶಾಲೆಗೆ ಬರಲು ಬಸ್ ಸೌಕರ್ಯ ಕೊರತೆಯಿದೆ. ಹೀಗಾಗಿ ಶಾಲೆಗೆ ಸಮಯಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಕಂದಹಳ್ಳಿ, ಬೆನನಹಳ್ಳಿ ಗ್ರಾಮಕ್ಕೆ ಬಸ್ ಸೌಕರ್ಯ ಕಲ್ಪಿಸಬೇಕೆಂದು ಜಿಲ್ಲಾಧಿಕಾರಿಗಳ ಬಳಿ ಕೇಳಿಕೊಂಡರು. ಕಾರ್ಯಕ್ರಮದಲ್ಲಿ ಯಾವುದೇ ಕೊರೊನಾ ನಿಯಮಾವಳಿಗಳು ಪಾಲನೆಯಾಗಲಿಲ್ಲ. ಜನ ಗುಂಪು ಗುಂಪಾಗಿ, ಮಾಸ್ಕ್ ಇಲ್ಲದೆ ವೇದಿಕೆ ಬಳಿ ಬಂದು ಸಮಸ್ಯೆ ಹೇಳಿಕೊಂಡ್ರು. ಇದರ ನಡುವೆಯೆ ಜಿಲ್ಲಾಧಿಕಾರಿಗಳು 40ಕ್ಕೂ ಅಧಿಕ ಅರ್ಜಿಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಿ, ವಿವಿಧ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಿದ್ರು.
ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಡಿ ಯಾದಗಿರಿ ಡಿಸಿ ಡಾ. ರಾಗಪ್ರಿಯ ಇಂದು, ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಬಿಳ್ಹಾರ ಗ್ರಾಮದಲ್ಲಿ ವಾಸ್ತವ್ಯ ಮಾಡಿದ್ರು.ಗ್ರಾಮದ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಡಿಸಿ ರಾಗಪ್ರಿಯರಿಗೆ ಯಾದಗಿರಿ ಮತಕ್ಷೇತ್ರದ ಶಾಸಕ ವೆಂಕಟರೆಡ್ಡಿ ಮುದ್ನಾಳ ಸಾಥ್ ನೀಡಿದರು. ಇನ್ನೂ ಕಾರ್ಯಕ್ರಮ ಕೊನೆಯ ಕ್ಷಣದಲ್ಲಿ ನಿರ್ಧಾರವಾದ ಹಿನ್ನೆಲೆ, ಗ್ರಾಮಸ್ಥರಿಗೆ ಮಾಹಿತಿ ಕೊರತೆಯಿಂದ ಅರ್ಜಿದಾರರು ಕಡಿಮೆ ಪ್ರಮಾಣದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.