ಚಿಕ್ಕಮಗಳೂರು: ಕೊರೊನಾ ಆತಂಕದಿಂದ ಗ್ರಾಮೀಣ ಭಾಗದಲ್ಲಿ ಜನಸಾಮಾನ್ಯರ ಓಡಾಟ ಕಡಿಮೆಯಾದ ಹಿನ್ನೆಲೆ ಗ್ರಾಮಗಳ ಅಂಚಿಗೆ ಬರುತ್ತಿದ್ದ ಕಾಡಾನೆಗಳು ಹಾಗೂ ಕಾಡುಪ್ರಾಣಿಗಳು ಗ್ರಾಮದೊಳಕ್ಕೆ ಬರುತ್ತಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಲೆನಾಡು ಭಾಗದಲ್ಲಿ ನಡೆದಿದೆ.
ಹೀಗೆ ಬಂದ ಕಾಡಾನೆಗಳ ಹಾವಳಿಯಿಂದ ಬಾನಳ್ಳಿ ಗ್ರಾಮದಲ್ಲಿ ಕಾಫಿ-ಬಾಳೆ ಬೆಳೆ ಕೂಡ ನಾಶವಾಗಿದೆ. ತಾಲೂಕಿನ ಹತ್ತಾರು ಹಳ್ಳಿಗಳಲ್ಲಿ ಕಳೆದ ಒಂದೆರಡು ವರ್ಷಗಳಿಂದಲೂ ಕೂಡ ಕಾಡಾನೆ ಹಾವಳಿ ಮಿತಿ ಮೀರಿದೆ. ಕೆಲವೆಡೆ ಒಂಟಿ ಸಲಗದ ಕಾಟವಿದ್ದರೆ, ಹಲವೆಡೆ ಕಾಡಾನೆಗಳ ಹಿಂಡು ಮಲೆನಾಡಿಗರ ನಿದ್ದೆಗೆಡಿಸಿದೆ. ಇತ್ತೀಚೆಗೆ ಬಾನಳ್ಳಿಯಲ್ಲೂ ಎರಡು ಕಾಡಾನೆಗಳು ತೋಟದಲ್ಲಿ ಮನಸ್ಸೋ ಇಚ್ಛೆ ಓಡಾಡಿದ್ದು ಕಾಫಿ ಹಾಗೂ ಬಾಳೆ ಬೆಳೆ ನಾಶವಾಗಿದೆ.
Advertisement
Advertisement
ಕೊರೊನಾ ಆತಂಕದಿಂದ ದೇಶವೇ ಲಾಕ್ಡೌನ್ ಆದ ಮೇಲೆ ನಗರ ಹಾಗೂ ಗ್ರಾಮೀಣ ಭಾಗದಲ್ಲೂ ಜನಸಾಮಾನ್ಯರ ಓಡಾಟ ಕಡಿಮೆಯಾಗಿತ್ತು. ಹಾಗಾಗಿ ಗ್ರಾಮಗಳ ಅಂಚಿನಲ್ಲಿ ಓಡಾಡುತ್ತಿದ್ದ ಕಾಡಾನೆಗಳು ಗ್ರಾಮಗಳ ಒಳಗೆ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ದಾಂಗುಡಿ ಇಡುತ್ತಿವೆ. ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಹೋಗುತ್ತಿರುವ ಕಾಡಾನೆಗಳಿಂದ ಕಾಫಿ ತೋಟ ಕೂಡ ಹಾಳಾಗಿವೆ. ತಾಲೂಕಿನ ಬಾನಳ್ಳಿ, ಭಾರತೀಬೈಲು, ಬೆಳಗೋಡ, ಗೌಡಹಳ್ಳಿ, ದೇವರಮನೆ, ಊರುಬಗೆ, ಸಾರಗೋಡು, ಕೆಂಜಿಗೆ ಸೇರಿದಂತೆ ಸುತ್ತಮುತ್ತ ಕಾಡಾನೆಗಳ ಹಾವಳಿಗೆ ಮಲೆನಾಡಿಗರು ಆತಂಕದಿಂದ ಬದುಕುವಂತಾಗಿದೆ.
Advertisement
Advertisement
ಈಗಾಗಲೇ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕಾಡಾನೆ ದಾಳಿಗೆ ಎರಡ್ಮೂರು ಜನ ಪ್ರಾಣ ಕೂಡ ತೆತ್ತಿದ್ದಾರೆ. ಆದರೆ ಅರಣ್ಯ ಇಲಾಖೆ ಕಾಡಾನೆ ಓಡಿಸುವಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಕೂಡ ಅರಣ್ಯ ಇಲಾಖೆ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳೀಯರು ಕಾಡಾನೆಗಳು ಬಂದಿವೆ ಎಂದಾಗ ಸ್ಥಳಕ್ಕೆ ಬರುವ ಅಧಿಕಾರಿಗಳು ಪಟಾಕಿ ಸಿಡಿಸಿ ಓಡಿಸುತ್ತಾರೆ. ಆದರೆ ಅವು ಮತ್ತೆ ಬರುತ್ತವೆ. ಹಾಗಾಗಿ ಶಾಶ್ವತವಾಗಿ ಕಾಡಾನೆಗಳನ್ನು ಸ್ಥಳಾಂತರಿಸಬೇಕು ಅನ್ನೋದು ಸ್ಥಳೀಯರ ಆಗ್ರಹವಾಗಿದೆ.