– ಪೊಲೀಸರ ಸಮಯಪ್ರಜ್ಞೆಯಿಂದ ಜನ ನಿರಾಳ
ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ತಬ್ಲಿಘಿಗಳ ಕಂಟಕ ಮುಗಿಯುವ ಮುನ್ನವೇ ಅಜ್ಮೀರ್ ಯಾತ್ರಿಗಳ ಆತಂಕ ಶುರುವಾಗಿದೆ. ಅಜ್ಮೀರ್ನಿಂದ ಬಂದ 22 ಯಾತ್ರಿಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ. ಯಾತ್ರಿಗಳ ಎಡವಟ್ಟಿನಿಂದ ಇಡೀ ಜಿಲ್ಲೆಯೇ ಸಂಕಷ್ಟಕ್ಕೆ ಸಿಲುಕುತ್ತಿತ್ತು. ಕಳ್ಳ ದಾರಿಯಲ್ಲಿ ನುಸುಳಲು ಹೊರಟವರನ್ನು ಹಿಡಿದು ಗಂಡಾಂತರ ತಪ್ಪಿಸಿದ ಪೊಲೀಸರ ಕಾರ್ಯದಿಂದ ಜಿಲ್ಲೆಯ ಜನ ನಿಟ್ಟುಸಿರು ಬಿಟ್ಟಿದ್ದಾರೆ.
ರಾಜಸ್ಥಾನದ ಅಜ್ಮೀರ್ನಿಂದ ಬಂದ ಯಾತ್ರಿಗಳ ಕಹಾನಿಯೇ ಭಯಾನಕವಾಗಿದೆ. ಅಧಿಕಾರಿಗಳು ಮತ್ತು ಪೊಲೀಸರು ಸ್ವಲ್ಪ ಯಾಮಾರಿದರೂ 22 ಮಂದಿ ಸಲೀಸಾಗಿ ಬೆಳಗಾವಿ ಜಿಲ್ಲೆಯಾದ್ಯಂತ ಕೊರೊನಾ ಸೋಂಕನ್ನು ಹಬ್ಬಿಸುವ ಸಾಧ್ಯತೆ ಇತ್ತು. ಪೊಲೀಸರ ಸಮಯಪ್ರಜ್ಞೆಯಿಂದ ಬೆಳಗಾವಿಗೆ ಆಗುತ್ತಿದ್ದ ಭಾರೀ ಅಪಾಯ ತಪ್ಪಿದಂತಾಗಿದೆ.
Advertisement
Advertisement
ಅಜ್ಮೀರ್ ಯಾತ್ರಿಗಳ ಟ್ರಾವೆಲ್ ಹಿಸ್ಟರಿ:
ಮಾರ್ಚ್ 18ರಂದು ಚಿಕ್ಕೋಡಿಯಿಂದ ಖಾಸಗಿ ಬಸ್ಸಿನಲ್ಲಿ 5 ಕುಟುಂಬದ 38 ಮಂದಿ ಅಜ್ಮೀರ್ಗೆ ಹೋಗಿದ್ದರು. ಚಿಕ್ಕೋಡಿಯ 30 ಮಂದಿ, ಬಾಗಲಕೋಟೆಯ 8 ಮಂದಿ ಹೋಗಿದ್ದರು. 21 ಹೆಣ್ಣುಮಕ್ಕಳು, 9 ಗಂಡು ಮಕ್ಕಳು ಮತ್ತು 8 ಪುರುಷರಿದ್ದರು. ಇವರೆಲ್ಲಾ ಮಾರ್ಚ್ 20ರಂದು ಅಜ್ಮೀರ್ ತಲುಪಿದ್ದು, ಅಜ್ಮೀರ್ ದರ್ಗಾ ಪಕ್ಕದ ಲಾಡ್ಜ್ನಲ್ಲಿ ವಾಸ್ತವ್ಯ ಮಾಡಿದ್ದರು. 2 ದಿನ ದರ್ಗಾದಲ್ಲಿ 38 ಜನರ ತಂಡ ಇತ್ತು. ಬಳಿಕ ಮಾರ್ಚ್ 23ರಂದು ದೇಶಾದ್ಯಂತ ಲಾಕ್ಡೌನ್ ಘೋಷಣೆಯಾಗಿದೆ. ಹೀಗಾಗಿ 41 ದಿನ ಲಾಡ್ಜ್ನಲ್ಲೇ ಯಾತ್ರಿಗಳು ಉಳಿದುಕೊಂಡಿದ್ದರು.
Advertisement
Advertisement
41 ದಿನಗಳ ಕಾಲ ಅಜ್ಮೀರ್ ಲಾಡ್ಜ್ನಲ್ಲಿ ಇದ್ದ ಇವರನ್ನು ಏಪ್ರಿಲ್ 30ರಂದು ಅಜ್ಮೀರ್ ಜಿಲ್ಲಾಧಿಕಾರಿ ಬಸ್ ಮೂಲಕ ವಾಪಸ್ ಕಳುಹಿಸಿದ್ದಾರೆ. ಮೇ 2ರಂದು ಕರ್ನಾಟಕದ ಗಡಿಗೆ ಬಂದು ತಲುಪಿದ್ದಾರೆ. ಮಹಾರಾಷ್ಟ್ರ ಮತ್ತು ಬೆಳಗಾವಿ ಮಧ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ 4ರ ಕೊಗನೊಳ್ಳಿ ಚೆಕ್ಪೋಸ್ಟ್ ಬಳಿ ಪೊಲೀಸರು ಇವರನ್ನು ಒಳಗೆ ಬಿಡುವುದಿಲ್ಲ. 8 ಗಂಟೆ ಕಾಲ ಗಡಿಯಲ್ಲಿ ನಿಂತು ಗೋಗರೆಯುತ್ತಾರೆ. ಅಲ್ಲದೇ ಸ್ಥಳೀಯ ಶಾಸಕರ ಮೂಲಕ ಜಿಲ್ಲಾಡಳಿತದ ಮೇಲೆ ಒತ್ತಡ ಹಾಕುತ್ತಾರೆ. ಆದರೂ ಪೊಲೀಸರು ಅವರನ್ನು ಬಿಟ್ಟಿಲ್ಲ. ಇದರಿಂದ ಕಂಗಾಲಾದ ಇವರೆಲ್ಲರೂ ಮಧ್ಯರಾತ್ರಿ ಕಳ್ಳದಾರಿಯಲ್ಲಿ ಎತ್ತಿನ ಬಂಡಿ ಓಡಾಡುವ ಮಾರ್ಗದಲ್ಲಿ ಬಸ್ ನುಗ್ಗಿಸಿದ್ದಾರೆ. 10 ಕಿ.ಮೀ ಒಳಗೆ ಬರುತ್ತಿದ್ದಂತೆ ನಿಪ್ಪಾಣಿ ಪೊಲೀಸರು ಚೇಸ್ ಮಾಡಿ ಎಲ್ಲರನ್ನು ಹಿಡಿದಿದ್ದಾರೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು.
ಕ್ವಾರಂಟೈನ್ ಮಾಡಿದ ಬಳಿಕ ಮೇ 7ರಂದು 38 ಜನರ ಗಂಟಲುದ್ರವದ ಮಾದರಿ ಲ್ಯಾಬ್ಗೆ ಕಳುಹಿಸಲಾಗಿದೆ. 38 ಜನರಲ್ಲಿ 30 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಅಂದು ಯಾತ್ರಿಗಳಿಗೆ ಊಟ ಬಡಿಸಿದ್ದ ಇಬ್ಬರು ನಿಪ್ಪಾಣಿ ನಗರಸಭೆ ಸದಸ್ಯರು ಸೇರಿ 13 ಜನರು ಹಾಗೂ ಕ್ವಾರಂಟೈನ್ನಲ್ಲಿದ್ದಾಗ 16 ಜನರು ಭೇಟಿಯಾದ ಹಿನ್ನೆಲೆ ಎಲ್ಲರನ್ನೂ ಲಾಡ್ಜ್ನಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ಇದೀಗ ಕಳ್ಳದಾರಿಯಲ್ಲಿ ನುಗ್ಗಲು ಯತ್ನಿಸಿದವರ ಮೇಲೆ ಜಿಲ್ಲಾಡಳಿತ ದೂರು ದಾಖಲಿಸಲು ಮುಂದಾಗಿದೆ. ಹೀಗಾಗಿ ಪೊಲೀಸರ ಸಮಯಪ್ರಜ್ಞೆಯಿಂದ ಭಾರೀ ಗಂಡಾಂತರ ತಪ್ಪಿದೆ. ಇದರಿಂದ ಚೆಕ್ಪೋಸ್ಟ್ನಲ್ಲಿ ಮತ್ತಷ್ಟು ಭದ್ರತೆ ಹೆಚ್ಚಿದ್ದು, ಪೊಲೀಸರ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.