– ಚಲಾವಣೆಯಲ್ಲಿರುವ ನೋಟಿನ ಪ್ರಮಾಣ ಇಳಿಕೆ
– ವಾರ್ಷಿಕ ವರದಿಯಲ್ಲಿ ಆರ್ಬಿಐ ಮಾಹಿತಿ
ನವದೆಹಲಿ: ಕಳೆದ ಹಣಕಾಸು ವರ್ಷದಲ್ಲಿ ಒಂದೇ ಒಂದು 2 ಸಾವಿರ ರೂಪಾಯಿ ಮುಖಬೆಲೆಯ ನೋಟನ್ನು ಮುದ್ರಿಸಿಲ್ಲ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ.
2019-20ರ ವಾರ್ಷಿಕ ವರದಿಯಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳು ಚಲಾವಣೆಯ ಪ್ರಮಾಣ ಇಳಿಕೆಯಾಗುತ್ತಿದೆ ಎಂದು ತಿಳಿಸಿದೆ.
Advertisement
2018ರ ಮಾರ್ಚ್ ಅಂತ್ಯಕ್ಕೆ ದೇಶದಲ್ಲಿ 2 ಸಾವಿರ ರೂ. ಮುಖಬೆಲೆಯ 33,632 ಲಕ್ಷ ನೋಟುಗಳು ಚಲಾವಣೆಯಲ್ಲಿದ್ದರೆ 2019ರ ಮಾರ್ಚ್ ಅಂತ್ಯಕ್ಕೆ ಈ ಸಂಖ್ಯೆ 32,910 ಲಕ್ಷಕ್ಕೆ ಇಳಿಕೆಯಾಗಿತ್ತು. 2020ರ ಮಾರ್ಚ್ ಅಂತ್ಯಕ್ಕೆ ಇದು 27,398 ಲಕ್ಷಕ್ಕೆ ಇಳಿಕೆಯಾಗಿದೆ.
Advertisement
Advertisement
2018ರ ಮಾರ್ಚ್ ಅಂತ್ಯಕ್ಕೆ ಚಲಾವಣೆಯಲ್ಲಿರುವ ನೋಟುಗಳ ಪೈಕಿ 2 ಸಾವಿರ ರೂ. ನೋಟುಗಳ ಪಾಲು ಶೇ. 3.3ರಷ್ಟಿತ್ತು. 2020ರ ಮಾರ್ಚ್ ಅಂತ್ಯಕ್ಕೆ ಈ ಪ್ರಮಾಣ ಶೇ.2.4ಕ್ಕೆ ಇಳಿದಿದೆ.
Advertisement
ಮೌಲ್ಯದ ಆಧಾರದಲ್ಲಿ ನೋಡುವುದಾದರೆ 2018ರಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳ ಪಾಲು ಶೇ.37.3 ರಷ್ಟಿತ್ತು. 2019ರಲ್ಲಿ ಇದು ಶೇ.31.2ಕ್ಕೆ ಇಳಿಕೆಯಾದರೆ ಮಾರ್ಚ್ 2020ರಲ್ಲಿ ಇದು ಶೇ.22.6ಕ್ಕೆ ಕುಸಿದಿದೆ.
ವರದಿಯಲ್ಲಿ 200 ಮತ್ತು 500 ರೂಪಾಯಿ ಮುಖಬೆಲೆಯ ನೋಟುಗಳ ಸಂಖ್ಯೆ ಏರುತ್ತಲೇ ಸಾಗಿದೆ ಎಂದು ಹೇಳಿದೆ. 2018-19ರಲ್ಲಿ 500 ರೂ. ಮುಖಬೆಲೆಯ 1,147 ಕೋಟಿ ನೋಟುಗಳನ್ನು ಮುದ್ರಿಸಿದ್ದರೆ 2019-20ರಲ್ಲಿ ಇದು 1,200 ಕೋಟಿಗೆ ಏರಿಕೆಯಾಗಿದೆ.
10, 50, 200, 500 ರೂ. ಮುಖಬೆಲೆಯ ನಕಲಿ ನೋಟುಗಳ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ ಏರಿಕೆಯಾಗಿದೆ. 20, 100 ಮತ್ತು 2,000 ರೂಪಾಯಿ ನಕಲಿ ನೋಟುಗಳ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ.
ಹಿಂದೆಯೇ ಹೇಳಿತ್ತು:
ದೇಶದಲ್ಲಿನ ಕಪ್ಪುಹಣ ಮತ್ತು ಭಯೋತ್ಪಾದನೆಗೆ ಬ್ರೇಕ್ ಹಾಕುವ ಉದ್ದೇಶದಿಂದ, ನೋಟು ನಿಷೇಧ ನಿರ್ಧಾರದ ಸಮಯದಲ್ಲಿ ಚಲಾವಣೆಗೆ ತಂದಿದ್ದ 2 ಸಾವಿರ ರೂ. ಮುಖಬೆಲೆಯ ನೋಟುಗಳ ಮುದ್ರಣವನ್ನು ರಿಸರ್ವ್ ಬ್ಯಾಂಕ್ ಹಂತ ಹಂತವಾಗಿ ಕಡಿಮೆ ಮಾಡಲಿದೆ ಎಂದು ಹಣಕಾಸು ಸಚಿವಾಲಯ ಕಳೆದ ವರ್ಷದ ಜನವರಿಯಲ್ಲಿ ಮಾಹಿತಿ ನೀಡಿತ್ತು.
ನವೆಂಬರ್ 8, 2016ರಲ್ಲಿ ನೋಟ್ ನಿಷೇಧ ಸಂದರ್ಭದಲ್ಲಿ ಆರ್ಬಿಐ 2 ಸಾವಿರ ರೂ.ನಷ್ಟು ದೊಡ್ಡ ಮೊತ್ತದ ನೋಟುಗಳನ್ನು ಹಣಕಾಸು ಕೊರತೆಯನ್ನು ಭರಿಸುವ ಉದ್ದೇಶದಿಂದ ಚಲಾವಣೆಗೆ ತಂದಿತ್ತು.
ಈ ದೊಡ್ಡ ಮೊತ್ತದ ನೋಟು ಕಾಳಧನಿಕರಿಗೆ ಶತ್ರುವಾಗಿ ಪರಿಣಮಿಸುವ ಬದಲಾಗಿ ಸ್ನೇಹಿಯಾಗಿ ಮಾರ್ಪಾಡಾಗತೊಡಗಿವೆ. ಹೆಚ್ಚು ಮೌಲ್ಯ ಹೊಂದಿರುವ ಕಾರಣಕ್ಕೆ ಈ ಮುಖಬೆಲೆಯ ನೋಟ್ಗಳನ್ನು ಸುಲಭವಾಗಿ ಶೇಖರಿಸಿ ಇಡಬಹುದು ಮತ್ತು ಸಾಗಿಸಬಹುದು ಅಂತ ಕಾಳಧನಿಕರು ಉಪಾಯ ಮಾಡಿದ್ದಾರೆ. ಆದರಿಂದ ಈ ನೋಟುಗಳನ್ನು ಹೆಚ್ಚು ಶೇಖರಿಸಿಡುತ್ತಿದ್ದಾರೆ ಎಂಬ ಶಂಕೆ ಬಂದ ಹಿನ್ನೆಲೆಯಲ್ಲಿ ಆರ್ಬಿಐ ಹಂತಹಂತವಾಗಿ 2 ಸಾವಿರ ಮುಖಬೆಲೆಯ ನೋಟುಗಳ ಮುದ್ರಣವನ್ನು ನಿಲ್ಲಿಸುತ್ತಿದೆ.
ಮಾರ್ಚ್ 2017ರ ಅಂತ್ಯದಲ್ಲಿ 328 ಕೋಟಿ ರೂ. 2 ಸಾವಿರ ಮುಖಬೆಲೆಯ ನೋಟುಗಳು ದೇಶದಲ್ಲಿ ಚಲಾವಣೆಯಾಗಿತ್ತು. ಬಳಿಕ ಮಾರ್ಚ್ 2018ರ ಅಂತ್ಯದಲ್ಲಿ ಈ ಸಂಖ್ಯೆ 336 ಕೋಟಿಗೆ ಏರಿಕೆಯಾಗಿತ್ತು. ಆರಂಭದಲ್ಲಿ ಶೇ.86ರಷ್ಟು 2 ಸಾವಿರ ನೋಟುಗಳು ಚಲಾವಣೆಯಲ್ಲಿದ್ದವು.