ಕಲಬುರಗಿ: ಅನ್ನದಾತರ ಬದುಕು ಹಸನಗೊಳಿಸಲು ಹತ್ತಾರು ರೈತಾಪಿ ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೊಳಿಸಿದ್ದು, ರೈತರ ಆದಾಯ ದ್ವಿಗುಣಗೊಳಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ನಗರದ ಎಂ.ಎಸ್.ಕೆ ಮಿಲ್ ವಾಣಿಜ್ಯ ಬಡಾವಣೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಹಾಗೂ ಕಲಬುರಗಿ ನಾಗರಾಭಿವೃದ್ಧಿ ಪ್ರಾಧಿಕಾರದ ಜಂಟಿ ಅನುದಾನದಡಿ, 2 ಎಕರೆ ಪ್ರದೇಶದಲ್ಲಿ ಸುಮಾರು 26.30 ಕೋಟಿ ರೂ. ವೆಚ್ಚದಲ್ಲಿ ನೂತನ ಮಾದರಿಯ ತರಕಾರಿ ಮಾರುಕಟ್ಟೆ ಸಂಕೀರ್ಣಕ್ಕೆ ಶನಿವಾರ ಅಡಿಗಲ್ಲು ಹಾಕಿ ಅವರು ಮಾತನಾಡಿದರು.
Advertisement
Advertisement
ಅನ್ನದಾತರ ಬೆಳೆಗೆ ಸೂಕ್ತ ಮಾರುಕಟ್ಟೆ ದೊರಕಬೇಕು ಎಂಬ ನಿಟ್ಟಿನಲ್ಲಿ ಕೃಷಿ ಮತ್ತು ತೋಟಗಾರಿಕೆಗೆ ಹೆಚ್ಚಿನ ರೀತಿಯ ಪ್ರೋತ್ಸಾಹ ನೀಡಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಹೂವು ಬೆಳೆಗಾರರು ಹಾಗೂ ತರಕಾರಿ ಮಾರಾಟಗಾರರು ಸೂಕ್ತ ಮಾರುಕಟ್ಟೆ ಸಿಗದೆ ಕಷ್ಟ ಅನುಭವಿಸಿದ್ದರು. ಇದನ್ನರಿತ ಕೇಂದ್ರ ಸರ್ಕಾರ ದೂರದ ಪ್ರದೇಶದಲ್ಲಿಯೂ ತರಕಾರಿ, ಹಣ್ಣುಗಳನ್ನು ಮಾರಾಟ ಮಾಡಲು ಸಾಗಾಣಿಕೆಗೆ ಕಿಸಾನ್ ರೈಲು ಯೋಜನೆ ಜಾರಿಗೆ ತಂದಿದ್ದು, ರೈತರಿಗೆ ತುಂಬಾ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ರೈತರ ಆದಾಯ ದ್ವಿಗುಣ ಮಾಡುವ ನಿಟ್ಟಿನಲ್ಲಿ ಮತ್ತಷ್ಟು ಹೊಸ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
Advertisement
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ 20 ಕೊಟಿ ರೂ. ಹಾಗೂ ಕಲಬುರಗಿ ನಾಗರಾಭಿವೃದ್ಧಿ ಪ್ರಾಧಿಕಾರದಿಂದ 6.30 ಕೋಟಿ ರೂ. ಹೀಗೆ ಒಟ್ಟು 26.30 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ತರಕಾರಿ ಮಾರುಕಟ್ಟೆ ಸಂಕೀರ್ಣ ರಾಜ್ಯದ ಇತಿಹಾಸದಲ್ಲೇ ಮೊದಲ ಕಟ್ಟಡವಾಗಿದ್ದು, ತುಂಬಾ ಸಂತೋಷದಿಂದ ಅಡಿಗಲ್ಲು ನೆರವೇರಿಸಿದ್ದೇನೆ. ಈ ತರಹದ ಮಾದರಿ ತರಕಾರಿ ಮಾರುಕಟ್ಟೆ ನಿರ್ಮಾಣದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೂ ತರಲಾಗುವುದು ಎಂದರು.
Advertisement
ನೂತನ ತರಕಾರಿ ಮಾರುಕಟ್ಟೆಯಿಂದ ಈ ಭಾಗದ ರೈತರ ಹಾಗೂ ಜನರ ಬಹುದಿನಗಳ ಕನಸು ನನಸಾಗಲಿದ್ದು, ರಸ್ತೆ ಬದಿಯಲ್ಲಿ ತರಕಾರಿ ಮಾರಾಟ ಮಾಡಿ ನಷ್ಟ ಅನುಭವಿಸುತ್ತಿದ್ದ ಮತ್ತು ಮಳೆಗಾಲದಲ್ಲಿ ತುಂಬಾ ತೊಂದರೆ ಅನುಭವಿಸುತ್ತಿದ್ದ ರೈತಾಪಿ ವರ್ಗಕ್ಕೆ ಇದರಿಂದ ನೆಮ್ಮದಿ ಸಿಕ್ಕಿದೆ. ರಸ್ತೆಯುದ್ದಕ್ಕೂ ಜನ ಗುಂಪಾಗಿ ಸೇರುವ ಕಾರಣ ಅಪಘಾತವಾಗುವ ಸಾಧ್ಯತೆಗಳನ್ನು ಮನಗಂಡು ನೂತನ ತರಕಾರಿ ಮಾರುಕಟ್ಟೆ ಸ್ಥಾಪಿಸಲಾಗುತ್ತಿದೆ. ಇದರಿಂದ ಪ್ರದೇಶದಲ್ಲಿನ ಮುಕ್ತ ಸಂಚಾರಕ್ಕೂ ಅನುವಾಗಲಿದೆ ಎಂದರು.
ರಾಜ್ಯದಲ್ಲಿ ರೈತರು ಬೆಳೆದ ಬೆಳೆಗೆ ವೈಜ್ಞಾನಿಕವಾಗಿ ಬೆಲೆ ದೊರಕಿಸುವಲ್ಲಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಕೃಷಿ ನಮ್ಮ ಆದ್ಯತಾ ವಲಯವಾಗಿದ್ದು, ಕೃಷಿಗೆ ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹ ನೀಡಿದೆ. ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಹೂ ಬೆಳೆಗಾರರಿಗೆ ಪ್ರತಿ ಹೆಕ್ಟೇರ್ಗೆ ತಲಾ 10,000 ರೂ. ಗಳಂತೆ 20 ಸಾವಿರ ರೈತರಿಗೆ ಪರಿಹಾರ ನೀಡಲಾಗಿದೆ. ಅದೇ ರೀತಿ ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಗರಿಷ್ಠ 1 ಹೆಕ್ಟೇರ್ಗೆ ತಲಾ 10,000 ರೂ. ಗಳಂತೆ 69,000 ಸಾವಿರ ರೈತರಿಗೆ ಆರ್ಥಿಕ ನೆರವು ನೀಡಲಾಗಿದೆ ಎಂದರು.
ಕಟ್ಟಡದ ವಿಶೇಷತೆ
ನೂತನ ತರಕಾರಿ ಮಾರುಕಟ್ಟೆ ಕಾಂಪ್ಲೆಕ್ಸ್ ಬೇಸ್ಮೆಂಟ್ ಮಹಡಿ, ನೆಲ ಮಹಡಿ ಹಾಗೂ ಮೊದಲನೇ ಮಹಡಿ ಒಳಗೊಂಡಿದೆ. ಬೇಸ್ಮೆಂಟ್ ಮಹಡಿಯಲ್ಲಿ ವಾಹನ ನಿಲುಗಡೆ, ಲಿಫ್ಟ್, ಸ್ಟೇರ್ಕೇಸ್, ಸಂಪ್ ಟ್ಯಾಂಕ್, ಎಲೆಕ್ಟ್ರೀಕಲ್ ಕೋಣೆ ಇರಲಿದೆ. ನೆಲ ಮಹಡಿಯಲ್ಲಿ 62 ಅಂಗಡಿಗಳು, ತರಕಾರಿ ಮಾರಾಟಕ್ಕೆ 192 ಮಳಿಗೆ, ಸಗಟು ವ್ಯಾಪಾರ ಹರಾಜು ಪ್ರಕ್ರಿಯೆಗೆ ಪ್ಲಾಟ್ಫಾರ್ಮ್, ಘನತ್ಯಾಜ್ಯ ಸಂಗ್ರಹಣೆಗೆ ಸ್ಥಳ, ಕೋಲ್ಟ್ ಸ್ಟೋರೇಜ್ ಕೋಣೆ ಹಾಗೂ ಶೌಚಾಲಯ ಇರಲಿವೆ. ಮೊದಲನೇ ಮಹಡಿಯಲ್ಲಿ 47 ಅಂಗಡಿಗಳು, ಇತರೆ ಕಾರ್ಯಾಲಯ, ಬ್ಯಾಂಕ್ ಇರಲಿದ್ದು, ಒಟ್ಟಾರೆ ಸಂಕೀರ್ಣದಲ್ಲಿ 301 ಅಂಗಡಿಗಳಿರಲಿವೆ ಎಂದು ಸಿ.ಎಂ. ಯಡಿಯೂರಪ್ಪನವರು ಹೇಳಿದ್ದಾರೆ.