ಮಡಿಕೇರಿ: ನನಗೆ ತೀವ್ರ ತೊಂದರೆ ಕೊಡುತ್ತಿದ್ದೀಯಾ, ನನ್ನ ನೆಮ್ಮದಿಯನ್ನು ಹಾಳು ಮಾಡಿದ್ದೀಯ, ನಿನಗೆ ಹಣ ಅಷ್ಟೇ ಮುಖ್ಯವಲ್ಲವೇ ಎಂದು ಸೈನಿಕನೊಬ್ಬ ತನ್ನ ಪತ್ನಿ ವಿರುದ್ಧ ಆರೋಪಿಸಿ 25 ನಿಮಿಷಗಳ ಕಾಲ ವಿಡಿಯೋ ಮಾಡಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Advertisement
ಕುಶಾಲನಗರದ ಗೊಂದಿಬಸವನಹಳ್ಳಿ ಗ್ರಾಮದ ನಾಗರಾಜು ಮತ್ತು ಜಗದಾಂಬ ದಂಪತಿ ಮಗ, 16 ವರ್ಷ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದ ಪ್ರಜು (35) ಉತ್ತರಾಖಂಡದಲ್ಲಿ ಶುಕ್ರವಾರ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Advertisement
ಪ್ರಜು ಆತ್ಮಹತ್ಯೆಗೂ ಮುನ್ನ ಉತ್ತರಾಖಂಡದಲ್ಲಿ ಕುಳಿತು ನೀನು ಹಣಕ್ಕಾಗಿ ನನ್ನನ್ನು ಪೀಡಿಸುತ್ತಿದ್ದೀಯಾ. ನನ್ನ ನೆಮ್ಮದಿಯನ್ನು ಹಾಳು ಮಾಡಿದ್ದೀಯಾ ಎಂದು ನೊಂದು ನುಡಿಯುತ್ತಾ ತನ್ನ ಪತ್ನಿಗೆ ವಿಡಿಯೋ ಕಳುಹಿಸಿದ್ದಾರೆ. ಈ ವಿಡಿಯೋವನ್ನು ಕುಟುಂಬದ ಸದಸ್ಯರಿಗೂ ಕಳುಹಿಸಿ ಬಳಿಕ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
Advertisement
ಕುಶಾಲನಗರದ ಸಮೀಪದ ಮುಳ್ಳುಸೋಗೆಯ ನವ್ಯ ಎಂಬುವವರನ್ನು ಕಳೆದ 12 ವರ್ಷಗಳ ಹಿಂದೆ ಪ್ರಜು ವಿವಾಹವಾಗಿದ್ದರು. ಮದುವೆಯಾಗಿ ಮುದ್ದಿನ ಇಬ್ಬರು ಮಕ್ಕಳನ್ನು ಪಡೆದು ಆರೇಳು ವರ್ಷದ ನಂತರ ಪತಿ ಪ್ರಜು ಅವರಿಗೆ ಪತ್ನಿ ನವ್ಯ ಅವರ ಮೇಲೆ ಇನ್ನಿಲ್ಲದ ಅನುಮಾನ ಶುರುವಾಗಿದೆ. ಹೀಗಾಗಿ ನವ್ಯ ಅವರಿಗೆ ಯಾವಾಗ ಫೋನ್ ಮಾಡಿದರೂ ತುಂಬಾ ಟಾರ್ಚರ್ ಕೊಡುತ್ತಿದ್ದರೆಂದು ಪ್ರಜು ಮೇಲೆ ಆರೋಪಿಸಿದ್ದಾರೆ.
Advertisement
ಜೊತೆಗೆ ಪ್ರಜು ರಜೆ ಮೇಲೆ ಊರಿಗೆ ಬಂದಾಗಲೆಲ್ಲಾ ನವ್ಯ ಅವರಿಗೆ ದೈಹಿಕ ಹಲ್ಲೆ ನಡೆಸುತ್ತಿದ್ದರಿಂದ ಬೇಸತ್ತಿದ್ದ ನವ್ಯ ತನಗೆ ರಕ್ಷಣೆ ಕೊಡುವಂತೆ ಕುಶಾಲನಗರ ಪಟ್ಟಣ ಪೊಲೀಸರ ಮೊರೆ ಹೋಗಿದ್ದರು. ಕಳೆದ ಒಂದು ವರ್ಷದ ಹಿಂದೆ ಬಂದಾಗ ನವ್ಯ ಅವರ ಕೈಯನ್ನು ಬೆಂಕಿಯಿಂದ ಪ್ರಜು ಸುಟ್ಟಿದ್ದರು. ಈ ಘಟನೆ ನಂತರ ನವ್ಯ ತನಗೆ ಪತಿಯೇ ಬೇಡವೆಂಬ ನಿರ್ಧಾರಕ್ಕೆ ಬಂದು ಮಹಿಳಾ ಆಯೋಗಕ್ಕೂ ದೂರು ನೀಡಿದ್ದರು. ನಂತರ ಮನಸ್ಸು ಬದಲಾಯಿಸಿಕೊಂಡ ನವ್ಯ ನೀಡಿದ್ದ ದೂರನ್ನು ವಾಪಸ್ ಪಡೆದು ಮನೆಗೆ ಬರುವಾಗಲೇ ಮಾರ್ಗ ಮಧ್ಯೆ ಪ್ರಜು ಪತ್ನಿ ಮೇಲೆ ಹಲ್ಲೆ ನಡೆಸಿದ್ದಾರೆ.
ಕಳೆದ ತಿಂಗಳಷ್ಟೇ ಊರಿಗೆ ಬಂದಿದ್ದ ಪ್ರಜು ನವ್ಯ ಅವರಿಗೆ ಕೊಲೆ ಬೆದರಿಕೆ ಹಾಕಿದ್ದರು. ನೀನು ಯಾರೊಂದಿಗೆ ಫೋನ್ ನಲ್ಲಿ ತುಂಬಾ ಮಾತನಾಡುತ್ತಿದ್ದೀಯ. ನಿನಗೆ ಆ್ಯಸಿಡ್ ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದರು. ಹೀಗಾಗಿ 2021 ಫೆಬ್ರವರಿಯಲ್ಲೂ ಪೊಲೀಸರಿಗೆ ಮತ್ತೆ ದೂರು ನೀಡಿದ್ದರು. ಕುಶಾಲನಗರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಪ್ರಜು ಅವರು ಇದ್ದಕ್ಕಿದ್ದಂತೆ ನಾನು ಡ್ಯೂಟಿಗೆ ಹೋಗಬೇಕಿದೆ ಎಂದು ಉತ್ತರಖಂಡಕ್ಕೆ ತೆರಳಿದ್ದಾರೆ. ಹೀಗೆ ಹೋದವರು ಉತ್ತರಖಂಡದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ನವ್ಯ ಮಾತ್ರ ನಮ್ಮ ಸಂಸಾರ ಹಾಳಾಗುವುದಕ್ಕೆ ನನ್ನ ಪತಿಯ ಸ್ನೇಹಿತರಾದ ಕೆಲವರು ನೇರ ಕಾರಣ ಎಂದು ಆರೋಪ ಮಾಡಿದ್ದಾರೆ.