– ದತ್ತು ತೆಗ್ದುಕೊಳ್ತೀವಿ, ಅಭಿವೃದ್ಧಿನೂ ಮಾಡ್ತೀವಿ
– ಸಿದ್ದು, ಡಿಕೆಶಿ ವಿರುದ್ಧ ಸಂಸದೆ ವಾಗ್ದಾಳಿ
ಉಡುಪಿ: ಕರಾವಳಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಟ ನಡೆಯಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹಿಂದೂ ಧರ್ಮ ಬಿಜೆಪಿಗರ ಸ್ವತ್ತಾ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ್ದ ಡಿಕೆಶಿಗೆ ತಿರುಗೇಟು ನೀಡಿದ ಸಂಸದೆ, ಖಂಡಿತವಾಗಿಯೂ ಕರಾವಳಿಯನ್ನು ನಾವು ದತ್ತು ತಗೊಂಡಿದ್ದೇವೆ. ಕರ್ನಾಟಕ, ಕರಾವಳಿ ಜಿಲ್ಲೆಗಳು ನಮ್ಮದೇ. ಉಡುಪಿಯ ಐವರು ಶಾಸಕರು ಬಿಜೆಪಿಯವರೇ. ಈ ಭಾಗವನ್ನು ದತ್ತು ತಗೊಳ್ತೇವೆ, ಅಭಿವೃದ್ಧಿನೂ ಮಾಡುತ್ತೇವೆ ಎಂದರು.
Advertisement
Advertisement
ಕಾಂಗ್ರೆಸ್ ಜನವಿರೋಧಿ ನೀತಿಗೆ ಕರಾವಳಿ ಜನ ತಕ್ಕ ಪಾಠ ಕಲಿಸಿದ್ದಾರೆ. ಡಿಕೆ ಶಿವಕುಮಾರ್ ಯಾವ ಆಟವೂ ಕರಾವಳಿಯಲ್ಲಿ ನಡೆಯಲ್ಲ. ದೇವರ ವಿಚಾರದಲ್ಲಿ ನಾವು ರಾಜಕೀಯ ಮಾಡುತ್ತಾ ಇಲ್ಲ. ನಾವು ದೇವರ ಪರ ನಿಂತವರು. ಡಿಕೆಶಿ ಚುನಾವಣೆ ಬಂದಾಗ ದೇವಸ್ಥಾನ ತಿರುಗುತ್ತಾರೆ. ರಾಹುಲ್ ಗಾಂಧಿ ಚುನಾವಣೆ ಬಂದ್ರೆ ಮಾನಸ ಸರೋವರ, ಕೇದಾರ, ಕೈಲಾಸಕ್ಕೆ ಹೋಗ್ತಾರೆ. ಉಳಿದ ದಿನಗಳಲ್ಲಿ ಚರ್ಚ್ ಗೆ ಹೋಗ್ತಾರೆ ಇದು ಅವರ ನೀತಿ ಎಂದು ಕಿಡಿಕಾರಿದರು.
Advertisement
ಇದೇ ವೇಳೆ ಸುಳ್ಳು ಹೇಳುವುದರಲ್ಲಿ ಬಿಎಸ್ವೈ ಮಿನಿ ಮೋದಿ ಎಂದು ಹೇಳಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧವೂ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ. ಜಾತಿ ಒಡೆಯೋದ್ರಲ್ಲಿ ಸಿದ್ದರಾಮಯ್ಯ ನಿಸ್ಸೀಮ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಹೇಗೆ ಆಡಳಿತ ಮಾಡಿದ್ದಾರೆ ನೋಡಿದ್ದೇವೆ. ಕೋಮುಗಳನ್ನು ಒಡೆದು ಆಳುವ ನೀತಿ ಮಾಡಿದ್ರಿ. ಜಾತಿ-ಜಾತಿಯನ್ನು ಒಡೆಯುವ ನೀತಿ ಮಾಡಿದ್ರಿ. ಅಭಿವೃದ್ಧಿಗಿಂತ ಹೆಚ್ಚಾಗಿ ಜಾತಿ ಒಡೆಯುವುದರಲ್ಲಿ ಮಗ್ನರಾಗಿದ್ರಿ ಎಂದು ಸಿಡಿಮಿಡಿಗೊಂಡರು.
Advertisement
ನರೇಂದ್ರ ಮೋದಿ ಕೊಟ್ಟ ಅಕ್ಕಿ ಗೋಧಿ ಬಳಕೆ ಮಾಡಿಕೊಂಡ್ರಿ. ನಾನೇ ಅನ್ನಭಾಗ್ಯ ಯೋಜನೆ ಕೊಟ್ಟೆ ಎಂದು ಸುಳ್ಳು ಹೇಳಿದ್ರಿ. ಸುಳ್ಳು ಹೇಳುವುದರಲ್ಲಿ ಯಾರಾದರೂ ನಿಪುಣರು ಇದ್ದರೆ ಅದು ಕಾಂಗ್ರೆಸ್ಸಿನವರು. ಸುಳ್ಳು ಹೇಳುವುದು ಕಾಂಗ್ರೆಸ್ಸಿನ ಚಾಳಿ. ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ಬಿಟ್ರೆ ಬೇರೆಲ್ಲೂ ಭವಿಷ್ಯವಿಲ್ಲ. ಸಿದ್ದರಾಮಯ್ಯ ಮಾತಿಗೆ ಯಾರೂ ಬೆಲೆ ಕೊಡುವುದಿಲ್ಲ ಎಂದು ತಿಳಿಸಿದರು.
ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನ ವಿಚಾರ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ತಿರುಗೇಟು ನೀಡಿದ ಶೋಭಾ, ನಿಮಗೆ ಗೊತ್ತಿರುವ ಮಾಹಿತಿ ಮೊದಲು ಬಹಿರಂಗಪಡಿಸಿ. ಬುಟ್ಟಿಯಲ್ಲಿ ಹಾವಿದೆ ಎಂದು ಹೆದರಿಸುವುದನ್ನು ಬಿಡಿ. ಸಾಧ್ಯವಿದ್ದರೆ ಆ ಹಾವನ್ನು ಹೊರಗೆ ಬಿಡಿ. ಈ ಪ್ರಕರಣದಲ್ಲಿ ನಿಮ್ಮ ಷಡ್ಯಂತ್ರ ಏನಾದರೂ ಇದೆಯಾ? ನಮ್ಮ ನಾಯಕರ ವಿರುದ್ಧ ಏನು ಷಡ್ಯಂತ್ರ ಮಾಡಿದ್ದೀರಿ ಮೊದಲ ಸ್ಪಷ್ಟಪಡಿಸಿ. ಯಾವ ಹಾವನ್ನು ಬಿಡ್ತೀರೋ ಕಾದು ನೋಡೋಣ ಎಂದು ವಾಗ್ದಾಳಿ ನಡೆಸಿದ್ದಾರೆ.