ಮೈಸೂರು: ಕನ್ನಡದ ಹಿರಿಯ ಕಲಾವಿದೆ ಬಿ.ಶಾಂತಮ್ಮ (95) ಇಂದು ಮೈಸೂರಿನಲ್ಲಿ ನಿಧನರಾಗಿದ್ದಾರೆ.
ಇಂದು ಸಂಜೆ ಸುಮಾರು 5.45ಕ್ಕೆ ಶಾಂತಮ್ಮ ನಿಧನರಾಗಿದ್ದಾರೆ. ಸುಮಾರು 160ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಶಾಂತಮ್ಮ ಅವರು ಮೂಲತಃ ಚೆನ್ನೈ ನಿವಾಸಿ. ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಾ ಬೆಂಗಳೂರಿನಲ್ಲಿ ಕುಟುಂಬದ ಜೊತೆ ವಾಸವಾಗಿದ್ದಾರೆ. ನಾಲ್ಕು ಗಂಡು ಮಕ್ಕಳು ಮತ್ತು ಇಬ್ಬರು ಪುತ್ರಿಯರಿದ್ದರು ಶಾಂತಮ್ಮ ಪ್ರತ್ಯೇಕವಾಗಿ ಬೆಂಗಳೂರಿನಲ್ಲಿ ವಾಸವಾಗಿದ್ದರು. ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಂತೆ ಪುತ್ರಿ ಸುಮಾ ತಾಯಿಯನ್ನು ಮೈಸೂರಿನಲ್ಲಿ ತಮ್ಮ ಮನೆಯಲ್ಲಿರಿಸಿಕೊಂಡು ಆರೈಕೆ ಮಾಡುತ್ತಿದ್ದರು.
Advertisement
Advertisement
ನಿನ್ನೆ ಮಧ್ಯಾಹ್ನ ಊಟದ ಸಮಯದಲ್ಲಿ ಮೈಲ್ಡ್ ಸ್ಟ್ರೋಕ್ ಆಗಿತ್ತು. ಮೈಸೂರು ನಗರವೆಲ್ಲಾ ಸುತ್ತಿದ್ದರೂ ಕೂಡ ಬೆಡ್ ಸಿಕ್ಕಿರಲಿಲ್ಲ. ಕೊನೆಗೆ ರಾತ್ರಿ ಒಂದು ಗಂಟೆ ನಗರದ ಕಾವೇರಿ ನರ್ಸಿಂಗ್ ಹೋಮ್ ಗೆ ಸೇರಿಸಿದ್ದಾರೆ. ಬೆಡ್ ಸಿಗೋದು ತಡವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಶಾಂತಮ್ಮ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
Advertisement
Advertisement
1956ರಲ್ಲಿ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದ ಶಾಂತಮ್ಮನವರು ರಾಜ್ಕುಮಾರ್, ಅನಂತ್ ನಾಗ್, ಶಂಕರ್ ನಾಗ್, ಅಂಬರೀಷ್, ವಿಷ್ಣುವರ್ಧನ್ ಸೇರಿದಂತೆ ಹಿಂದಿ ಚಿತ್ರರಂಗದ ಜನಪ್ರಿಯ ನಟ ಮಿಥುನ್ ಚಕ್ರವರ್ತಿ, ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಹಲವು ದಿಗ್ಗಜ ನಟರ ಜೊತೆ ಅಭಿನಯಿಸಿದ್ದಾರೆ.
ಸರ್ಕಾರದ ನಿಯಮದಂತೆ ಶಾಂತಮ್ಮನವರ ಮೃತದೇಹವನ್ನು ಕೋವಿಡ್ ಟೆಸ್ಟ್ ಗೆ ಒಳಪಡಿಸಲಾಗಿದ್ದು, ನಾಳೆ ರಿಪೋರ್ಟ್ ಬರುತ್ತೆ. ರಿಪೋರ್ಟ್ ನೋಡಿಕೊಂಡು ನೆಗೆಟಿವ್ ಬಂದರೆ ತಾಯಿಯ ಆಸೆಯಂತೆ ಚಾಮುಂಡಿ ಬೆಟ್ಟದ ಬಳಿ ಇರುವ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಮಣ್ಣು ಮಾಡಬೇಡಿ, ಸುಡಿ ಅಂತ ಶಾಂತಮ್ಮ ಮೊದಲೇ ಮಗಳ ಬಳಿ ಹೇಳಿಕೊಂಡಿದ್ದರು ಎಂದು ತಿಳಿದು ಬಂದಿದೆ.