ಕೊಪ್ಪಳ: ನಗರದ ಹೃದಯ ಭಾಗದಲ್ಲಿರುವ ಕೇಂದ್ರೀಯ ಬಸ್ ನಿಲ್ದಾಣ ಎದುರುಗಡೆ ಇರುವ ಕನಕದಾಸ ವೃತ್ತದ ಸ್ಥಳ ಇದೀಗ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದೆ.
Advertisement
1988ರಲ್ಲಿ ಅಂದಿನ ಸಾರಿಗೆ ಸಚಿವರಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕನಕದಾಸ ವೃತ್ತವನ್ನು ಉದ್ಘಾಟನೆ ಮಾಡಿದ್ದರು. ಆದರೆ ಇತ್ತೀಚಿಗೆ ಬಹುಕೋಟಿ ವೆಚ್ಚದಲ್ಲಿ ಕನಕದಾಸ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಅದೇ ಸ್ಥಳದಲ್ಲಿಯೇ ಉದ್ಯಾನವನ ನಿರ್ಮಾಣ ಮಾಡುವ ಯೋಜನೆ ಹಮ್ಮಿಕೊಳ್ಳಲಾಗಿತ್ತು.
Advertisement
Advertisement
ಅದರಂತೆ ಕನಕದಾಸ ವೃತ್ತದ ಹಿಂಭಾಗದಲ್ಲಿನ ನಗರಸಭೆಗೆ ಸೇರಿದ 20 ವಾಣಿಜ್ಯ ಮಳಿಗೆಗಳನ್ನು ನೆಲಸಮ ಮಾಡಲಾಗಿದೆ. ಜೊತೆಗೆ ವಾಣಿಜ್ಯ ಮಳಿಗೆಗಳ ಜಾಗದಲ್ಲಿ ಕನಕದಾಸ ಮೂರ್ತಿಯನ್ನು ಪ್ರತಿಷ್ಠಾಪಿಸಿ ವೃತ್ತ ನಿರ್ಮಾಣ ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಇದಕ್ಕೆ ಇದೀಗ ಸಂಸದ ಕರಡಿ ಸಂಗಣ್ಣ ವಿರೋಧ ವ್ಯಕ್ತಪಡಿಸಿದ್ದು, ನಗರಸಭೆಯ ವಾಣಿಜ್ಯ ಮಳಿಗೆಯ ಜಾಗವನ್ನು ಅತಿಕ್ರಮಿಸಿಕೊಂಡು ಕನಕದಾಸ ವೃತ್ತ ನಿರ್ಮಾಣ ಮಾಡಲಾಗುತ್ತಿದ್ದು, ಇದರ ಬಗ್ಗೆ ತನಿಖೆ ನಡೆಸಿ ಎಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಕನಕದಾಸ ವೃತ್ತ ನಿರ್ಮಾಣಕ್ಕೆ ನನ್ನ ವಿರೋಧ ಇಲ್ಲ ಆದರೆ ಸರ್ವಾಧಿಕಾರಿಯಂತೆ ನಿರ್ಧಾರ ತೆಗೆದುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.
Advertisement
ಸಂಸದ ಕರಡಿ ಸಂಗಣ್ಣ ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರ ಹಿಂದೆ ರಾಜಕೀಯ ಉದ್ದೇಶ ಇರುವುದು ಸಹ ಸ್ಪಷ್ಟ. 2013 ರಲ್ಲಿ ಅವರ ವಿರುದ್ಧ ಸ್ಪರ್ಧಿಸಿ ಗೆದ್ದ ರಾಘವೇಂದ್ರ ಹಿಟ್ನಾಳ್, ಕುರುಬ ಸಮಾಜಕ್ಕೆ ಸೇರಿದವರು. ಜೊತೆಗೆ ಕರಡಿ ಸಂಗಣ್ಣ ಪ್ರಥಮ ಬಾರಿಗೆ ಶಾಸಕರಾದಾಗ ಕನಕದಾಸ ವೃತ್ತದ ಹಿಂಭಾಗದ ಸ್ಥಳದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಿಸಿದ್ದರು. ಆದರೆ ಇದೀಗ ಶಾಸಕ ರಾಘವೇಂದ್ರ ಹಿಟ್ನಾಳ್, ಕರಡಿ ಸಂಗಣ್ಣ ಕಟ್ಟಿಸಿದ್ದ ವಾಣಿಜ್ಯ ಮಳಿಗೆಗಳನ್ನು ಯಾವುದೇ ಸೂಚನೆ, ಚರ್ಚೆ ಮಾಡದೇ ನೆಲಸಮ ಮಾಡಿಸಿದ್ದಾರೆ. ಜೊತೆಗೆ ವಾಣಿಜ್ಯ ಮಳಿಗೆ ಇದ್ದ ಜಾಗವನ್ನು ಅತಿಕ್ರಮಿಸಿಕೊಂಡು ಆ ಜಾಗದಲ್ಲಿ ಕನಕದಾಸ ವೃತ್ತವನ್ನು ನಿರ್ಮಾಣ ಮಾಡಲು ಹೊರಟಿದ್ದಾರೆ ಎಂಬ ಆರೋಪ ಬಂದಿದೆ.
ಕನಕದಾಸ ವೃತ್ತದ ಸ್ಥಳದ ಕುರಿತು ಸಂಸದ ಕರಡಿ ಸಂಗಣ್ಣ ಡಿಸಿಗೆ ಪತ್ರ ಬರೆದಿರುವುದಕ್ಕೆ ಇದೀಗ ಕುರುಬ ಸಮಾಜದವರು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದಾರೆ. ಕನಕದಾಸರ ವಿಚಾರದಲ್ಲಿ ರಾಜಕಾರಣ ಮಾಡಬಾರದು, ಈ ಕೂಡಲೇ ಸಂಸದ ಕರಡಿ ಸಂಗಣ್ಣ ಕುರುಬ ಸಮಾಜದವರ ಕ್ಷಮೆ ಕೋರಬೇಕೆಂದು ಒತ್ತಾಯಿಸಿದ್ದಾರೆ. ಈ ಮುಂಚೆ ಇದ್ದ ಕನಕದಾಸ ವೃತ್ತದಲ್ಲಿ 10 ಲಕ್ಷ ವೆಚ್ಚದಲ್ಲಿ ಕಟ್ಟೆಯೊಂದನ್ನು ಕಟ್ಟಲಾಗಿತ್ತು. ಆದರೆ ಲಾಕ್ಡೌನ್ ವೇಳೆಯಲ್ಲಿ ಆ ಕಟ್ಟೆಯನ್ನು ಕೆಡವಲಾಗಿದ್ದು, ಹೊಸದೊಂದು ಕಟ್ಟೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಒಟ್ಟಿನಲ್ಲಿ ದಾರ್ಶನಿಕ ಕನಕದಾಸರ ವೃತ್ತ ಇದೀಗ ಕೊಪ್ಪಳದಲ್ಲಿ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ತಿರುವು ಪಡೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ. ಇದನ್ನೂ ಓದಿ: ಸುಮಲತಾರಿಗೆ ರಾಜಕಾರಣದಲ್ಲಿ ಅನುಭವದ ಕೊರತೆ ಇದೆ: ನಿಖಿಲ್