ಉಡುಪಿ: ದೇಗುಲ ನವೀಕರಣದ ಸಂದರ್ಭ ಭೂಗರ್ಭದಲ್ಲಿ ಶಿವಲಿಂಗ ಪತ್ತೆ ಆಗಿದೆ. ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಂತೆ ಸಂದರ್ಭ ಶಿವಲಿಂಗ ಕಂಡುಬಂದಿರುವುದು ಭಕ್ತ ಸಮೂಹಕ್ಕೆ ಅಚ್ಚರಿ ತಂದಿದೆ.
ಜಿಲ್ಲೆಯ ಕುಂದಾಪುರ ತಾಲೂಕು ಬಿಲ್ಲಾಡಿಯ ಕದ್ರಂಜೆಯಲ್ಲಿ 50 ವರ್ಷಗಳ ಹಿಂದೆ ಬಿದ್ದು ಹೋಗಿದ್ದ ಪ್ರಾಚೀನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಈಗಾಗಲೇ ಪ್ರಶ್ನಾ ಚಿಂತನೆಗಳು ನಡೆದಿವೆ. ದೇವಸ್ಥಾನದ ನವೀಕರಣಾರ್ಥ ಪ್ರಕ್ರಿಯೆಗಳು ಆರಂಭವಾಗಿರುವ ಹೊತ್ತಲ್ಲೇ ನೆಲಸಮವಾಗಿದ್ದ ಗರ್ಭಗುಡಿಯಲ್ಲಿ ಶೋಧ ನಡೆಸಿದಾಗ ಪ್ರಾಚೀನ ಶಿವಲಿಂಗ ಪತ್ತೆಯಾಗಿದೆ. ಇದರಿಂದ ಮಂದಿರ ಪುನರುತ್ಥಾನಕ್ಕೆ ನವೋತ್ಸಾಹ ಕಳೆಕಟ್ಟಿದೆ.
Advertisement
Advertisement
ಕಳೆದ ನಾಲ್ಕೂವರೆ ದಶಕಗಳಿಗೆ ಮಿಕ್ಕಿ ಪಾಳು ಬಿದ್ದ ಕದ್ರಂಜೆ ಶ್ರೀಮಹಾಲಿಂಗೇಶ್ವರ ದೇವಾಲಯವನ್ನು ಯುವಕರೆಲ್ಲ ಸೇರಿ ಜೀರ್ಣೋದ್ಧಾರ ಮಾಡಲು ಮುಂದಾಗಿದ್ದಾರೆ. ಈ ದೇವಳದ ಪ್ರಾಂಗಣ ಹಿಂದೊಮ್ಮೆ ಶಾಲೆಯಾಗಿತ್ತು. ನೂರಾರು ವಿದ್ಯಾರ್ಥಿಗಳಿಗೆ ಇಲ್ಲಿ ವಿದ್ಯಾ ದಾನ ಮಾಡಲಾಗಿತ್ತು. ಕ್ರಮೇಣ ಈ ದೇವಸ್ಥಾನದಲ್ಲಿ ಪೂಜೆ, ಧಾರ್ಮಿಕ ಕಾರ್ಯಗಳು ನಿಂತು ದೇಗುಲ ಪಾಳು ಬಿದ್ದಿದೆ. ಯುವಕರು ಒಟ್ಟಾಗಿ ಸಹೃದಯಿಗಳ ಸಹಕಾರದೊಂದಿಗೆ ದೇವಾಲಯ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದೇ ವೇಳೆ ಮಣ್ಣಿನ ಅಡಿಯಲ್ಲಿ ಹೂತು ಹೋಗಿದ್ದ ಶಿವಲಿಂಗವನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ಹೊರಗೆ ತೆಗೆದಿದ್ದು, ಪೂಜೆ ಸಲ್ಲಿಸಿದ್ದಾರೆ.
Advertisement
Advertisement
ಇನ್ನೂ ಒಂದು ವಾರಗಳ ಕಾಲ ಧಾರ್ಮಿಕ ಕಾರ್ಯಕ್ರಮ ಇದೆ. ಈ ಬೆಳವಣಿಗೆ ನಮ್ಮಲ್ಲಿ ಹೊಸ ಉತ್ಸಾಹವನ್ನು ತಂದಿದೆ. ದಾನಿಗಳ, ಊರ ಭಕ್ತರ ಸಹಕಾರದಿಂದ ದೇಗುಲದ ಜೀರ್ಣೋದ್ಧಾರ ನಡೆಯಲಿದೆ ಎಂದು ಸ್ಥಳೀಯ ಅಜಿತ್ ಮಡಿವಾಳ ಹೇಳಿದ್ದಾರೆ.